HD Kumaraswamy: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಗೆಲ್ಲಿಸಲು ಬಿಜೆಪಿ ನಾಯಕ ಸಿ.ಎನ್.ಅಶ್ವತ್ಥನಾರಾಯಾಣ್ ಅವರ ನಿವಾಸದಲ್ಲಿ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವು ನಾಯಕರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಲವು ರಣತಂತ್ರ ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಸಭೆಯ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಮುಗಿದ ಬೆನ್ನಲ್ಲೇ ಪ್ರಚಾರದ ಅಬ್ಬರ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಂತೂ ಇನ್ನಿಲ್ಲದ ರಣತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಬಾವ ಡಾ.ಸಿ.ಎನ್.ಮಂಜುನಾಥ್ (Dr C N Manjunath) ಅವರನ್ನು ಗೆಲ್ಲಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. “ಡಿ.ಕೆ.ಶಿವಕುಮಾರ್ ಅವರ ನೋಟು ಪಡೆದು, ಡಾಕ್ಟರ್‌ಗೆ ಮತ ನೀಡಿ ಎಂಬುದಾಗಿ ಜನರಲ್ಲಿ ಮನವಿ ಮಾಡುತ್ತೇವೆ” ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಗೆಲ್ಲಿಸಲು ಬಿಜೆಪಿ ನಾಯಕ ಸಿ.ಎನ್.ಅಶ್ವತ್ಥನಾರಾಯಾಣ್ ಅವರ ನಿವಾಸದಲ್ಲಿ ಎಚ್.ಡಿ.ಕುಮಾರಸ್ವಾಮಿ, ಅಶ್ವತ್ಥನಾರಾಯಣ್, ಮುನಿರತ್ನ, ಸಿ.ಪಿ.ಯೋಗೇಶ್ವರ್ ಸೇರಿ ಹಲವು ನಾಯಕರು ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, “ಇವತ್ತಿನ ಸಭೆಯಲ್ಲಿ ನಮ್ಮ ಅಭ್ಯರ್ಥಿ ಗೆಲುವಿನ ಬಗ್ಗೆ ಚರ್ಚೆಯಾಗಿದೆ. ನಮ್ಮ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಲಾಗಿದೆ. ಡಿಕೆ ನೋಟು, ಡಾಕ್ಟರ್‌ಗೆ ನೋಟು ಎಂಬ ಮನಸ್ಥಿತಿಗೆ ಜನ ಬಂದಿದ್ದಾರೆ” ಎಂದು ತಿಳಿಸಿದರು.
“ಡಾಕ್ಟರ್ ಮಂಜುನಾಥ್ ಅವರು ಜನರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಮಂಜುನಾಥ್ ಅಂತಹವರು ಬೇಕು ಎಂದು ಜನರೇ ಕೇಳುತ್ತಿದ್ದಾರೆ. ಅವರ ದುಡ್ಡಿನ ಮುಂದೆ ಹೋರಾಟ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಡಾಕ್ಟರ್ ಅವರ ಸೇವೆಯೇ ನಮ್ಮ ಅಸ್ತ್ರವಾಗಿದೆ” ಎಂದು ಮಾಹಿತಿ ನೀಡಿದರು. ಚನ್ನಪಟ್ಟಣದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, “ನಮ್ಮ ಕಾರ್ಯಕರ್ತರನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ. 10 ಕಾರ್ಯಕರ್ತರಿದ್ದರೂ ಹಣ ಕೊಟ್ಟು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ಬಳಿಕ ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಅವರು ಕೂಡ ಮಾತನಾಡಿದರು. “ಪ್ರತಿ ಮನೆ ಮನೆಗೆ ತೆರಳಿ ಪರಿಣಾಮಕಾರಿಯಾಗಿ ಪ್ರಚಾರ ಕೈಗೊಳ್ಳುವ ಕುರಿತು ಚರ್ಚಿಸಲಾಗಿದೆ. ಇದು ದೇಶದ ಚುನಾವಣೆ, ಮೋದಿ ಚುನಾವಣೆ ಎಂಬುದಾಗಿ ಜನರಿಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮನವರಿಕೆ ಮಾಡುವುದು. ಪಕ್ಷಗಳ ನಾಯಕರು ಕೂಡ ಇದನ್ನೇ ಹೆಚ್ಚು ಫೋಕಸ್ ಮಾಡಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಮತ ನೀಡಿದರೆ ಪ್ರಯೋಜನವಿಲ್ಲ. ಡಾ.ಮಂಜುನಾಥ್ ಉತ್ತಮ ಅಭ್ಯರ್ಥಿ ಎಂಬುದನ್ನು ಜನರಿಗೆ ತಿಳಿಸಲು ಸೂಚಿಸಲಾಗಿದೆ” ಎಂದು ಹೇಳಿದರು.