ರಾಜ್ಯದಲ್ಲಿ ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದು ಕೊನೆಗೊಳ್ಳುತ್ತಿದೆ. ಬಿಜೆಪಿಯಿಂದ ಡಾ. ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಿದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾಲ್ಕು ಮಂದಿ ಮಂಜುನಾಥ್ ಹೆಸರಿನ ವ್ಯಕ್ತಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಮತ್ತೊಬ್ಬ ಡಾ. ಸಿಎನ್ ಮಂಜುನಾಥ್ ಡಾಕ್ಟರೇಟ್ ನಕಲಿ ಎಂಬ ಆರೋಪ ಕೇಳಿಬಂದಿದೆ.
ರಾಮನಗರ, ಏಪ್ರಿಲ್ 04: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ (Lok Sabha Elections) ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು (ಏಪ್ರಿಲ್ 4) ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಬುಧವಾರವೂ ನಾಮಪತ್ರ ಸಲ್ಲಿಸಿದ್ದಾರೆ. ಇಂದೂ ಸಹ ನಾಮಪತ್ರ ಸಲ್ಲಿಕೆ ಮುಂದುವರಿದಿದೆ. ಬೆಂಗಳೂರು ಗ್ರಾಮಾಂತರ (Bangalore rural) ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ ಸಿ.ಎನ್ ಮಂಜುನಾಥ್ (Dr CN Manjunath) ಗುರುವಾರ ನಾಮಪತ್ರ ಸಲ್ಲಿಸಿದರು. ಈಗಾಗಲೇ ಡಾ ಸಿ.ಎನ್ ಮಂಜುನಾಥ್ ಹೆಸರನ್ನು ಹೋಲುವ ಮತ್ತೊಬ್ಬ ಅಭ್ಯರ್ಥಿ ಡಾ ಸಿ.ಎನ್ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಚನ್ನರಾಯಪಟ್ಟಣ ಮೂಲದ ಡಾ ಸಿ.ಎನ್ ಮಂಜುನಾಥ್ ಇಂದು ಬಹುಜನ ಭಾರತ್ ಪಾರ್ಟಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ, ಇದೀಗ ಅವರು ನಕಲಿ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಾ. ಸಿಎನ್ ಮಂಜುನಾಥ್, ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿಯಿಂದ ಸಾಮಾಜಿಕ ಸೇವೆಗಾಗಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಆದರೆ, ನಕಲಿ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲು ಚಿಂತನೆ ನಡೆಸಿದೆ.
ಈ ಮಧ್ಯೆ, ಡಾ. ಸಿಎನ್ ಮಂಜುನಾಥ್ ಕಣಕ್ಕಿಳಿಯುತ್ತಿದ್ದಂತೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಂಜುನಾಥ್ ಹೆಸರಿನ ಅಭ್ಯರ್ಥಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಬಿಜೆಪಿ ಅಭ್ಯರ್ಥಿ ಮಂಜುನಾಥ್ ಹೊರತುಪಡಿಸಿ ಬಹುಜನ ಭಾರತ್ ಪಾರ್ಟಿಯ ಡಾ.ಸಿ.ಎನ್.ಮಂಜುನಾಥ್, ಪಕ್ಷೇತರರಾಗಿ ಸಿ. ಮಂಜುನಾಥ್, ಎನ್. ಮಂಜುನಾಥ್, ಕೆ.ಮಂಜುನಾಥ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.