ಕರ್ನಾಟಕದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲುವ ಗುರಿ ಹೊಂದಿದೆ. ಹೀಗಾಗಿ ಗೆಲುವಿಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಂತ್ರಿ ಡಿಕೆ ಶಿವಕುಮಾರ್ ಅವರು ಇನ್ನಿಲ್ಲದ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ರಾಜ್ಯದಿಂದ ಹೆಚ್ಚು ಸ್ಥಾನ ಗೆಲ್ಲುವ ಗುರಿಗಾಗಿ ಪ್ರತಿ ಕ್ಷೇತ್ರಕ್ಕೊಬ್ಬ ಸಚಿವರಿಗೆ ಹೈಕಮಾಂಡ್ ಟಾಸ್ಕ್ ನೀಡಿದೆ. ಒಂದು ವೇಳೆ ಗೆಲ್ಲಿಸಲು ಸಾಧ್ಯವಾಗದಿದ್ದರೆ ಅವರ ಮಂತ್ರಿಗಿರಿಗೆ ಕುತ್ತು ಎನ್ನುವ ಸಂದೇಶವನ್ನು ನೀಡಿದೆ. ಇನ್ನು ಸಿಎಂ ಸಿದ್ದರಾಮಯ್ಯಗೂ ಹೈಕಮಾಂಡ್ ಇದೇ ಟಾಸ್ಕ್ ನೀಡಿದ್ಯಾ? ಈ ಬಗ್ಗೆ ಸ್ವತಃ ಸಿಎಂ ಪರೋಕ್ಷವಾಗಿ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 01 : ರಾಜ್ಯದಲ್ಲಿ ಸರ್ಕಾರ ಇದೆ. ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಕಾಂಗ್ರೆಸ್(Congress) ಹೆಚ್ಚಿನ ಸೀಟ್ ಗೆಲ್ಲಿಸಲಿಲ್ಲ ಎಂದರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಶಾಸಕ ಗುಬ್ಬಿ ಶ್ರೀನಿವಾಸ್ ಹೇಳಿದ್ದು ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಹೆಚ್ಚು ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡಬೇಕಾ? ಎನ್ನುವ ಬಗ್ಗೆ ಚರ್ಚೆಗಳು ನಡೆದಿವೆ. ಇದರ ಮಧ್ಯೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪರೋಕ್ಷವಾಗಿ ಒಪ್ಪಿಕೊಂಡಂತಿದೆ. ಹೌದು…ನಾನು ಇರಬೇಕು ಅಂದ್ರೆ ವರುಣದಲ್ಲಿ 60 ಸಾವಿರ ಲೀಡ್ ಕೊಡಿ ಎಂದು ಹೇಳಿದ್ದು, ಇದು ರಾಜ್ಯ ರಾಜಕಾರಣದಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ. ಇದರೊಂದಿಗೆ ಸಿದ್ದರಾಮಯ್ಯನವರಿಗೆ ಸಿಎಂ ಕುರ್ಚಿಯಿಂದ ಕೆಳಗಿಳಿಸುತ್ತಾರೆ ಎನ್ನುವ ಆತಂಕ ಇದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿದೆ.
ಮೈಸೂರಿನ ವರುಣಾ ಕ್ಷೇತ್ರದ ಬಿಳಿಗೆರೆ ಗ್ರಾಮದಲ್ಲಿ ಇಂದು (ಏಪ್ರಿಲ್ 01) ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆಯಲ್ಲಿ 48 ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ಈಗ(ಲೋಕಸಭೆ ಚುನಾವಣೆ) ವರುಣ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್ ಕೊಡಿ. ಆಗ ನನ್ನ ಯಾರು ಮುಟ್ಟಲು ಆಗಲ್ಲ, ನಾನು ಇರಬೇಕಾ ಬೇಡ್ವಾ? ನಾನು ಇರಬೇಕು ಅಂದರೆ ವರುಣದಲ್ಲಿ 60 ಸಾವಿರ ಲೀಡ್ ಕೊಡಿ ಎಂದು ಅಚ್ಚರಿ ಹೇಳಿಕೆ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ (Lok sabha Election 2024) ಈ ಬಾರಿ ಕಾಂಗ್ರೆಸ್ (Congress) ಹೆಚ್ಚಿನ ಸೀಟ್ ಗೆಲ್ಲಬೇಕು. ಒಂದು ವೇಳೆ ಹೆಚ್ಚಿನ ಸೀಟ್ ಗೆಲ್ಲದ್ದಿದ್ದರೆ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡಬೇಕಾಗಬಹುದು ಎಂದು ಎಂದು ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ಶಾಸಕ ಎಸ್.ಆರ್ ಶ್ರೀನಿವಾಸ್ (MLA SR Srinivas) ಹೇಳಿದ್ದರು. ಈಗ ಸಿದ್ದರಾಮಯ್ಯನವರ ಈ ಮಾತಿನ ಅರ್ಥ ಗಮನಿಸಿದರೆ, ಹೈಕಮಾಂಡ್, ತವರು ಕ್ಷೇತ್ರ ಮೈಸೂರು ಜೊತೆ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಸಿಎಂ ಗೆಲ್ಲಿಸಿಕೊಂಡು ಬರುವ ಟಾಸ್ಕ್ ಕೊಟ್ಟಂತಿದೆ. ಸಿದ್ದರಾಮಯ್ಯನವರ ಈ ಮಾತು ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.
ಸಂಪುಟದ ಸಚಿವರಿಗೆ(Cabinet ministers) ಲೋಕಸಭೆ ಎಲೆಕ್ಷನ್(Loksabha election) ಜವಾಬ್ದಾರಿ ನೀಡಲಾಗಿದೆ. ಒಂದು ವೇಳೆ ಈ ಟಾಸ್ಕ್‌ನನ್ನು ಸರಿಯಾಗಿ ನಿಭಾಯಿಸದಿದ್ದರೇ, ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಲೋಕಸಭೆಯಲ್ಲಿ ಗೆಲ್ಲಲಿದ್ರೆ, ಕ್ಯಾಬಿನೆಟ್‌ನಲ್ಲಿ ಮುಂದುವರಿಸಬೇಕೋ ಅಥವಾ ಬೇಡವೋ ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆಯಂತೆ. ಈ ಬಗ್ಗೆ ಖುದ್ದು ಸಿದ್ದರಾಮಯ್ಯನವರೇ ಸಚಿವರಿಗೆ ಖಡಕ್ ಆಗಿ ಹೇಳಿದ್ದರು ಎಂದು ತಿಳಿದುಬಂದಿತ್ತು. ಇನ್ನು ಗೆಲ್ಲಿಸಿಕೊಂಡು ಬರುತ್ತಾರೆ ಎನ್ನುವ ಕಾರಣಕ್ಕೆ ಹೈಕಮಾಂಡ್, ಸಚಿವರ ಪುತ್ರರಿಗೆ ಲೋಕಸಭಾ ಟಿಕೆಟ್ ನೀಡಿದೆ ಎನ್ನಲಾಗಿದೆ.
ಅಗತ್ಯ ಬಿದ್ದರೆ ಯಾವುದೇ ನೀವೂ ಕಣಕ್ಕಿಳಿಯಬೇಕೆಂದು ಹೈಕಮಾಂಡ್, ಸಚಿವರಿಗೆ ಹೇಳಿತ್ತು. ಇದಕ್ಕೆ ಹಲವು ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಬಳಿಕ ತಂತ್ರ ಬದಲಿಸಿದ್ದ ಹೈಕಮಾಂಡ್, ಒಂದು ವೇಳೆ ಅದಾಗದಿದ್ದರೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಿಮ್ಮ ಹೊಣೆ. ಇದರಲ್ಲಿ ಸೋಲು ಕಂಡರೆ ತಲೆದಂಡ ಗ್ಯಾರಂಟಿ ಎಂಬ ಸಂದೇಶವನ್ನು ನೀಡಿತ್ತು ಎನ್ನಲಾಗಿದೆ.