ಮಾತಿಗೆ ತಪ್ಪಿದ ಶಾಸಕ, ಸಚಿವರು : ಅರೆಬೆತ್ತಲೆ ಪ್ರತಿಭಟನೆಗೆ ಸಿದ್ಧತೆ


ಅಂಕೋಲಾ : ತಾಲ್ಲೂಕಿನ ಮಂಜಗುಣಿ-ಗಂಗಾವಳಿ ನಡುವಿನ ಸೇತುವೆಗೆ ರಸ್ತೆ ಜೋಡಣೆ ಮಾಡದೇ ಗುತ್ತಿಗೆ ಕಂಪನಿ ಮೌನಗೊಂಡಿದ್ದು, ಇತ್ತ ಮಾರ್ಚ್ ಅಂತ್ಯದೊಳಗೆ ರಸ್ತೆಯನ್ನು ಮಾಡಿಯೇ ಸಿದ್ಧ ಎಂದು ಹೇಳಿಕೆ ನೀಡಿದ ಶಾಸಕ ಸತೀಶ ಸೈಲ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಆದರೆ ಇಲ್ಲಿ ವಾಹನದವರು ಮಾತ್ರ ಪ್ರತಿನಿತ್ಯ ಪರದಾಟ ಮಾಡುತ್ತಲೇ ಇದ್ದಾರೆ.
ಗೂಗಲ್ ಮ್ಯಾಪ್ ನಂಬಿ ಬಂದ ಪ್ರವಾಸಿ ವಾಹನದವರು ಮಂಜಗುಣಿಯಿಂದ ಸೇತುವೆ ಏರುತ್ತಾರೆ. ಆದರೆ ಗಂಗಾವಳಿ ಭಾಗದಲ್ಲಿ ಇಳಿಯಲಾಗದಿದ್ದರಿಂದ ಮತ್ತೆ ವಾಪಸ್ ಬರುತ್ತಿದ್ದಾರೆ. ಇನ್ನು ಸ್ವಲ್ಪ ಹೆಚ್ಚು ಕಡಿಮೆಯಾದರೆ ವಾಹನದವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಗುತ್ತಿಗೆ ಕಂಪನಿಯವರು ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಎಂದು ಸಣ್ಣ ನಾಮಫಲಕ ಕೂಡ ಅಳವಡಿಸಿಲ್ಲ. ಹೀಗಾಗಿ ಪ್ರತಿದಿನ ಪ್ರವಾಸಿಗರು ಇಲ್ಲಿಗೆ ಬಂದು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಹೋರಾಟಕ್ಕೆ ಸಿದ್ಧತೆ : ಕಳೆದ 7 ವರ್ಷಗಳಿಂದ ನಡೆಯುತ್ತಿರುವ ಈ ಕಾಮಗಾರಿ ಇದುವರೆಗೂ ಪೂರ್ಣಗೊಳ್ಳದಿದ್ದರಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗಿದೆ. ಇನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಸಾಂಕೇತಿಕವಾಗಿ ಸೇತುವೆಯ ಮೇಲೆ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಅದರ ಚೌಕಟ್ಟಿನೊಳಗೆ ಪ್ರತಿಭಟನೆ ನಡೆಸಲು ಕೆಲವರು ತೀರ್ಮಾನಿಸಿದ್ದಾರೆ.