ಬರದ ನಾಡಲ್ಲಿ ಜಲಪಾತದ ಸೊಬಗು.! ಸೌಂದರ್ಯ ಸವಿಯಲು ಬರುತ್ತಿದೆ ಪ್ರವಾಸಿಗರ ದಂಡು.!

ಸತತ ಬರದಿಂದ ತತ್ತರಿಸಿದ್ದ ಆ ಜಿಲ್ಲೆಯ ಜನರಿಗೆ ಮಳೆರಾಯ ಸಂತಸವನ್ನ ಉಂಟುಮಾಡಿದ್ದಾನೆ. ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗಳು ಭರ್ತಿಯಾಗಿದ್ದು ತುಂಬಿ ತುಳಿಕುತ್ತಿವೆ. ಹತ್ತಾರು ವರ್ಷಗಳಿಂದ ಬತ್ತಿ ಹೋಗಿದ್ದ ಬಾವಿ, ಬೋರ್ವೆಲ್‌ಗಳಲ್ಲಿ ನೀರು ಚಿಮ್ಮುತ್ತಿದೆ. ಇನ್ನು ತುಂಬಿ ತುಳುಕುತ್ತಿರುವ ಕೆರೆಯ ನೀರಿನಿಂದಾಗಿ ಚಿಕ್ಕ ಚಿಕ್ಕ ಜಲಪಾತಗಳು ಸೃಷ್ಟಿಯಾಗಿದ್ದು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ.

ಜಲಪಾತ ಸೃಷ್ಟಿಯಾಗಿದ್ದೆಲ್ಲಿ.?!

ಹೌದು.! ಬೀದರ್ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಉತ್ತಮ ಮಳೆಯಾಗುತ್ತಿದ್ದು, ಕೆರೆಗಳಲ್ಲಿ ನೀರು ತುಂಬಿ ತುಳುಕುತ್ತಿದೆ. ಕೆಲವು ಕೆರೆಗಳು ಚಿಕ್ಕ ಚಿಕ್ಕ ಜಲಪಾಗಳನ್ನೇ ಸೃಷ್ಟಿ ಮಾಡಿವೆ. ಅದರಲ್ಲಿಯೂ ಜಿಲ್ಲೆಯ ಔರಾದ್ ತಾಲೂಕಿನ ತೆಗಂಪುರ ಗ್ರಾಮದ ಕೆರೆ ಮೈದುಂಬಿಕೊಂಡಿದ್ದು, ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಕೆರೆಯ ನೀರು ಜಲಪಾತ ಸೃಷ್ಟಿಸಿದ್ದು ಪ್ರವಾಸಿಗರನ್ನ ಆಕರ್ಷಿಸುತ್ತಿದೆ.

ಮೇಲಿಂದ ಭೋರ್ಗರೆಯುತ್ತ ದುಮ್ಮಿಕ್ಕುತ್ತಿರುವ ನೀರು ಜಲಪಾತದಂತೆ ಭಾಸವಾಗುತ್ತಿದೆ. ಈ ರಮಣೀಯ ದೃಶ್ಯ ನೋಡುಗರನ್ನ ಸೆಳೆದಿದೆ. ನೀರಿನ ಭೋರ್ಗೆರೆತವನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಜನಸಾಗರವೇ ಕೆರೆಯತ್ತ ಹರಿದು ಬರುತ್ತಿದೆ. ಸುಂದರ ಜಲಪಾತ, ಹಸಿರಿನ ಹೊದಿಕೆಯ ಗುಡ್ಡಗಳು, 20 ಅಡಿ ಎತ್ತರದಿಂದ ಧುಮುಕುತ್ತಿರುವ ನೀರು ಅದ್ಭುತ ಲೋಕವನ್ನೇ ಸೃಷ್ಟಿಸಿದೆ.

ಕೆರೆ ನೋಡಲು ಬರುತ್ತಿರುವ ಪ್ರವಾಸಿಗರ ದಂಡು.!

ಕೆರೆಯ ದೃಶ್ಯವನ್ನು ನೋಡಲು ಜಿಲ್ಲೆ ಹಾಗೂ ಪಕ್ಕದ ತೆಲಂಗಾಣ ರಾಜ್ಯದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಶನಿವಾರ, ಭಾನುವಾರವಂತೂ ಜನರ ಸಂಖ್ಯೆ ಹೆಚ್ಚಿರುತ್ತದೆ. ತೆಗಂಪುರ ಕೆರೆ ಔರಾದ್ ತಾಲೂಕಿನಲ್ಲಿಯೇ ಅತಿ ದೊಡ್ಡದಾದ ಕೆರೆಯಾಗಿದ್ದು ಊರಿಂದ ನಾಲ್ಕು ಕಿಲೋಮೀಟರ್ ದೂರದ ಕಾಡಿನಲ್ಲಿದೆ. ಬೀದರ್ ಜಿಲ್ಲೆಯಲ್ಲಿ ಜಲಪಾತಗಳು ಇಲ್ಲದ್ದರಿಂದ ಜನರಿಗೆ ಈ ಕೆರೆಯ ನೀರಿನಿಂದ ಉಂಟಾದ ಜಲಪಾತ ಅಚ್ಚುಮೆಚ್ಚೆನಿಸಿದೆ. ಇಲ್ಲಿ ಹರಿಯುವ ನೀರು ಸ್ವಚ್ಚವಾಗಿದ್ದು ಮನಸ್ಸಿಗೆ ತುಂಬಾ ಮುದ ನೀಡುತ್ತಿದೆ.

ನೋವಿನ ನಡುವೆ ಸಂತಸ ಮೂಡಿಸಿದ ಕೆರೆ.!

ಒಂದು ಕಡೆ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿರುವ ನೋವು ರೈತರನ್ನ ಕಾಡುತ್ತಿದೆ. ಇತ್ತ ಕೆರೆ, ಬ್ಯಾರೇಜ್‌ಗಳಲ್ಲಿ ನೀರು ಸಂಗ್ರಹವಾಗಿರುವುದು ರೈತರಲ್ಲಿ ನೋವಿನ ನಡುವೆ ಸಂತಸ ಮೂಡಿಸಿದೆ. ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಪಡುತ್ತಿದ್ದ ಜನರ ಮೊಗದಲ್ಲಿ ಸಂತೋಷ ಮನೆಮಾಡಿದೆೆ. ಇನ್ನೂ ಈ ವರ್ಷದ ಮಳೆಗೆ ಕೆರೆಗಳು ಜಲಪಾತಗಳಾಗಿ ಮಾರ್ಪಾಡಾಗಿದ್ದು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ.