ಈಶ್ವರಪ್ಪಗೆ ಅಮಿತ್ ಶಾ ಕರೆ, ದೆಹಲಿಗೆ ಬರುವಂತೆ ಬುಲಾವ್

ತಾವು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಗ್ಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾಗೆ ಸಮ್ಮತಿ ಇರಬಹುದೇನೋ, ಯಾಕೆಂದರೆ ಅವರು ಈವರೆಗೆ ಕರೆ ಮಾಡಿ ಮಾತನಾಡಿಲ್ಲ ಎಂದು ಇತ್ತೀಚೆಗೆ ಅನುಮಾನ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪಗೆ ಈಗ ಶಾ ಕರೆ ಮಾಡಿ ಮಾತನಾಡಿದ್ದಾರೆ. ದೆಹಲಿಗೆ ಬರುವಂತೆಯೂ ಸೂಚಿಸಿದ್ದಾರೆ. ಆದರೆ, ಈಶ್ವರಪ್ಪ ನಿಲುವು ಬದಲಾಗುತ್ತಾ? ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ.

ಬೆಂಗಳೂರು, ಏಪ್ರಿಲ್ 2: ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ (KS Eshwarappa) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಬುಧವಾರ ದೆಹಲಿಗೆ ಬರುವಂತೆಯೂ ಸೂಚನೆ ನೀಡಿದ್ದಾರೆ. ಈ ಬಗ್ಗೆ ಆಪ್ತರ ಜತೆ ಮಾಹಿತಿ ಹಂಚಿಕೊಂಡಿರುವ ಈಶ್ವರಪ್ಪ ದೆಹಲಿಗೆ ಹೋಗುವುದಾಗಿ ತಿಳಿಸಿದ್ದಾರೆ. ಆದರೆ, ಸ್ಪರ್ಧೆಯ ವಿಚಾರವಾಗಿ ನಿಲುವಿಗೆ ಬದ್ಧ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

ಅಮಿತ್ ಶಾ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೆಎಸ್ ಈಶ್ವರಪ್ಪ, ‘ಕೇಂದ್ರ ಸಚಿವ ಅಮಿತ್ ಶಾ ಕರೆ ಮಾಡಿದ್ದಾರೆ. ಅವರ ಕೋರಿಕೆಯ ಮೇರೆಗೆ ದೆಹಲಿಗೆ ಹೋಗುತ್ತೇನೆ. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ. ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಈಶ್ವರಪ್ಪ ಪುನರುಚ್ಚರಿಸಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಸದ್ಯ ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಜತೆ ಸಭೆ ನಡೆಸಿದ್ದಾರೆ. ಇದೇ ವೇಳೆ ಅವರು ಈಶ್ವರಪ್ಪಗೆ ದೂರವಾಣಿ ಕರೆ ಮಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಯಾದ ಬೆನ್ನಲ್ಲೇ ಬಿಎಸ್​ ಯಡಿಯೂರಪ್ಪ, ಬಿವೈ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತಃಸಿದ್ಧ ಎಂದು ಘೋಷಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಕುಟುಂಬದ ಹಿಡಿತದಿಂದ ಪಕ್ಷ ಮುಕ್ತವಾಗುವ ವರೆಗೆ ವಿರಮಿಸುವುದಿಲ್ಲ ಎಂದೂ ಹೇಳಿದ್ದಾರೆ.

ಮೋದಿ ಹೇಳಿದರೂ ನನ್ನ ಸ್ಪರ್ಧೆಯಲ್ಲಿ ಬದಲಾವಣೆ ಇಲ್ಲ: ಪುನರುಚ್ಚರಿಸಿ ಈಶ್ವರಪ್ಪ
ಪ್ರಧಾನಿ ಮೋದಿ ಹೇಳಿದರೂ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಕೆಎಸ್​ ಈಶ್ವರಪ್ಪ ಹೇಳಿದರು. ನನ್ನ ಸ್ಪರ್ಧೆ ಕುರಿತು ಮೋದಿಗೆ ಮನವರಿಕೆ ಮಾಡುತ್ತೇನೆ. ಪ್ರಧಾನಿ ಮೋದಿ ಕಾಲಿಗೆ ಬಿದ್ದು ಮನವರಿಕೆ ಮಾಡುತ್ತೇನೆ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಅಮಿತ್ ಶಾ
ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜತೆ ಸಭೆ ನಡೆಸಿದ ಅಮಿತ್ ಶಾ, ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದರು. ಕುಮಾರಸ್ವಾಮಿ ಬಳಿ, ‘ಹೇಗಿದೆ ನಿಮ್ಮ ಆರೋಗ್ಯ’ ಎಂದು ಶಾ ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ‘ಪರವಾಗಿಲ್ಲ, ನಾನು ಚೆನ್ನಾಗಿ ಇದ್ದೇನೆ’ ಎಂದರು.

ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಬಿಜೆಪಿ, ಜೆಡಿಎಸ್​ ನಾಯಕರ ಸಭೆ ನಡೆದಿದ್ದು ಅಮಿತ್ ಶಾ, ಹೆಚ್​ಡಿಕೆ ನೇತೃತ್ವದಲ್ಲಿ ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಸದಾನಂದಗೌಡ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್​​, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಕೆ ಸುಧಾಕರ್​​, ಶಾಸಕರಾದ ಮುನಿರತ್ನ, ಗೋಪಾಲಯ್ಯ, ಸುರೇಶ್ ಕುಮಾರ್​ ಭಾಗಿಯಾದರು.