ಸಂವಿಧಾನ ವಿರೋಧಿ ಹೇಳಿಕೆಯಿಂದ ಹೆಗಡೆಗೆ ಟಿಕೆಟ್ ಕೈತಪ್ಪಿದೆ: ವಿ ಸೋಮಣ್ಣ

ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದೆ. ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಣೆ ಹಾಕಲಾಗಿದೆ. ಹೆಗಡೆ ಅವರಿಗೆ ಟಿಕೆಟ್ ತಪ್ಪಲು ಸಂವಿಧಾನ ತಿದ್ದುಪಡಿ ಕುರಿತು ನೀಡಿದ ಹೇಳಿಕೆಯೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಕೂಡ ಇದೇ ಕಾರಣವನ್ನು ನೀಡಿದ್ದಾರೆ.

ತುಮಕೂರು, ಮಾರ್ಚ್‌ 25 : ಹಾಲಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಅವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದೆ. ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಣೆ ಹಾಕಲಾಗಿದೆ. ಹೆಗಡೆ ಅವರಿಗೆ ಟಿಕೆಟ್ ತಪ್ಪಲು ಸಂವಿಧಾನ ತಿದ್ದುಪಡಿ ಕುರಿತು ನೀಡಿದ ಹೇಳಿಕೆಯೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna) ಅವರು ಕೂಡ ಇದೇ ಕಾರಣವನ್ನು ನೀಡಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ವಿ ಸೋಮಣ್ಣ, ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಿದೆ. ಸಂವಿಧಾನವನ್ನು ಅಪಮಾನಿಸಿದರೆ ಅದಕ್ಕಿಂತ ಬೇರೆ ಪಾಪವಿಲ್ಲ. ಆದರೆ, ಕಾಂಗ್ರೆಸ್​ನವರು ಕೆಲವ ವಿಚಾರ ತಿರುಚುತ್ತಾರೆ. ಹೆಗಡೆ ಅವರು ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

ಅಂಥಹ ಪುಣ್ಯಾತ್ಮ ಅಂಬೇಡ್ಕರ್ ಅವರ ಸಂಸ್ಕಾರಕ್ಕೇ ಕಾಂಗ್ರೆಸ್​ನವರು ಜಾಗ ಕೊಟ್ಟಿಲ್ಲ. ಕಾಂಗ್ರೆಸ್​ನವರಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇನೆ ಅಂತಾ ಯಾರೂ ಹೇಳಿಲ್ಲ. ಹೆಗಡೆ ಅವರು ತಮ್ಮ ಸ್ವಂತ ಅಭಿಪ್ರಾಯ ಎಂದಿದ್ದಾರೆ. ಅದಕ್ಕೆ ಅವರಿಗೆ ಶಿಕ್ಷೆ ಕೂಡ ಆಗಿದೆ ಎಂದರು.

2019 ಲೋಕಸಭೆ ಚುನಾವಣೆಯಲ್ಲಿ ಹೆಗಡೆ ಗೆದ್ದ ನಂತರ ಜನಸಂಪರ್ಕಕ್ಕೆ ಬಂದಿರಲಿಲ್ಲ. ಕಾರ್ಯಕರ್ತರ ಕೈಗೂ ಸಿಗುತ್ತಿರಲಿಲ್ಲ. ನಾಲ್ಕೂವರೆ ವರ್ಷಗಳ ನಂತರ ಅಂದರೆ, 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಲು ಆರಂಭಿಸಿದ್ದರು. ಮತ್ತೊಮ್ಮೆ ಮೋದಿ ಎನ್ನುವ ಕಾರ್ಯಕ್ರಮದಡಿ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಾ ಪ್ರಚಾರ ನಡೆಸುತ್ತಿದ್ದರು.

ಬಿಜೆಪಿ ಎರಡನೇ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದಿರುವುದನ್ನು ನೋಡಿ ಈ ಬಾರಿ ತನಗೆ ಟಿಕೆಟ್ ಸಿಗಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ಹೆಗಡೆ ಅವರು ಮತ್ತೆ ಮನೆ ಸೇರಿದ್ದರು. ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ನಿನ್ನೆಯಷ್ಟೇ ಬಿಜೆಪಿ ಐದನೇ ಪಟ್ಟಿ ಬಿಡುಗಡೆಯಾಗಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡಲಾಗಿದೆ.

ಇದರ ಬೆನ್ನಲ್ಲೇ ಕ್ಷೇತ್ರದ ಜನರಿಗೆ ಅನಂತಕುಮಾರ್ ಹೆಗಡೆ ಅವರು ಭಾವನಾತ್ಮಕ ಪತ್ರ ಬರೆದಿದ್ದರು. ಅಲ್ಲದೆ, ಹಿಂದೂ ಫೈರ್​ ಬ್ರ್ಯಾಂಡ್​ ಎಂದೆ ಹೆಸರುವಾಸಿಯಾಗಿರುವ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ತಪ್ಪಲು ಕಾರಣವೇನು ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿವೆ.