51ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ!

Cameron Diaz: ಹಾಲಿವುಡ್‌ ನಟಿ ಕೆಮೆರಾನ್‌ ಡಿಯಾಜ್‌ ಅವರು 51ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಅವರೇ ಹಂಚಿಕೊಂಡಿದ್ದಾರೆ.

ವಾಷಿಂಗ್ಟನ್‌: ಹಾಲಿವುಡ್‌ನ ಖ್ಯಾತ ನಟಿ ಕ್ಯಾಮೆರಾನ್‌ ಡಿಯಾಜ್‌ (Cameron Diaz) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 51ನೇ ವಯಸ್ಸಿನ ನಟಿಯು ಮಗುವಿಗೆ ಜನ್ಮ ನೀಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಕ್ಯಾಮೆರಾನ್‌ ಡಿಯಾಜ್ ಅವರ ಪತಿ ಬೆಂಜಿ ಮ್ಯಾಡೆನ್‌ (Benji Madden) ಕೂಡ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕ್ಯಾಮೆರಾನ್‌ ಡಿಯಾಜ್‌ ಹಾಗೂ ಬೆಂಜಿ ಮ್ಯಾಡೆನ್‌ ಅವರು 2015ರಲ್ಲಿ ಮದುವೆಯಾಗಿದ್ದರು. ಈಗ ಎರಡನೇ ಮಗುವಿಗೆ ಕ್ಯಾಮೆರಾನ್‌ ಡಿಯಾಜ್‌ ಅವರು ತಾಯಿಯಾಗಿದ್ದಾರೆ.

ಕ್ಯಾಮೆರಾನ್‌ ಡಿಯಾಜ್‌ ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ಬೆಂಜಿ ಮ್ಯಾಡೆನ್‌ ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ತಿಳಿಸಿದ್ದಾರೆ. “ನಮ್ಮ ಕುಟುಂಗಕ್ಕೆ ಮಗನ ಆಗಮನವಾಗಿದೆ. ಅವನಿಗೆ ಕಾರ್ಡಿನಲ್‌ ಮ್ಯಾಡೆನ್‌ ಎಂಬುದಾಗಿ ಹೆಸರಿಡಲು ತೀರ್ಮಾನಿಸಿದ್ದೇವೆ. ಅವನು ನೋಡಲು ತುಂಬ ಮುದ್ದಾಗಿದ್ದಾನೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾವು ಆತನ ಫೋಟೊ ಪೋಸ್ಟ್‌ ಮಾಡಿಲ್ಲ. ಆದರೂ, ಆತ ತುಂಬ ಕ್ಯೂಟ್‌ ಆಗಿದ್ದಾನೆ ಎಂದು ಹೇಳಲು ಬಯಸುತ್ತೇವೆ. ನಿಮ್ಮ ಆಶೀರ್ವಾದ, ಹಾರೈಕೆ ಇರಲಿ” ಎಂದು ಭಾವುಕರಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಬೆಂಜಿ ಮ್ಯಾಡೆನ್‌ ಅವರು ಅಮೆರಿಕದ ಖ್ಯಾತ ಮ್ಯುಸಿಶಿಯನ್‌ ಆಗಿದ್ದಾರೆ. ಇವರು ಕ್ಯಾಮೆರಾನ್‌ ಡಿಯಾಜ್‌ ಅವರಿಗಿಂತ ಆರು ವರ್ಷ ಚಿಕ್ಕವರು. ಅಂದರೆ, ಇವರಿಗೀಗ 45 ವರ್ಷ. ಇಬ್ಬರೂ 2015ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕ್ಯಾಮೆರಾನ್‌ ಡಿಯಾಜ್‌ ಹಾಗೂ ಬೆಂಜಿ ಮ್ಯಾಡೆನ್‌ ಅವರಿಗೆ 2019ರ ಡಿಸೆಂಬರ್‌ 30ರಂದು ಮಗಳು ಜನಿಸಿದಳು. ಆ ಮಗುವಿಗೆ ರ‍್ಯಾಡಿಕ್ಸ್‌ ಎಂದು ಹೆಸರಿಡಲಾಗಿದೆ. ಈಗ ಎರಡನೇ ಮಗುವನ್ನು ದಂಪತಿ ಆಹ್ವಾನಿಸಿದ್ದಾರೆ.

ಕ್ಯಾಮೆರಾನ್‌ ಡಿಯಾಜ್‌ ಅವರು ನೈಟ್‌ ಆ್ಯಂಡ್‌ ಡೇ, ದಿ ಕೌನ್ಸಿಲರ್‌, ವೆನಿಲಾ ಸ್ಕೈ, ಇನ್‌ ಹರ್‌ ಶೂಸ್‌, ಎನಿ ಗಿವನ್‌ ಸಂಡೇ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪುತ್ರಿಗೆ ಎರಡು ವರ್ಷ ತುಂಬಿದಾಗ ನಟಿಯು ವಯಸ್ಸಿನ ಕುರಿತು ಮಾತನಾಡಿದ್ದರು. “ನನಗೀಗ 50 ವರ್ಷ ವಯಸ್ಸು. ನನ್ನ ಮಗಳಿನ್ನೂ ಚಿಕ್ಕವಳು. ನಾನು ಇನ್ನೂ 50-60 ವರ್ಷ ಬದುಕಿರಬೇಕು ಎಂದು ಎನಿಸುತ್ತಿದೆ. ನಾನು 110 ವರ್ಷ ಬದುಕಬೇಕು” ಎಂಬುದಾಗಿ ಅವರು ಹೇಳಿದ್ದರು.