ಭಾರತೀಯ ಚಿತ್ರರಂಗದ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಬಗ್ಗೆ ಕುಟುಂಬದವರು ಅಥವಾ ಆಸ್ಪತ್ರೆಯವರು ಅಧಿಕೃತ ಮಾಹಿತಿ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಹೆಲ್ತ್ ಅಪ್ಡೇಟ್ಗಾಗಿ ನಿರೀಕ್ಷಿಸಲಾಗಿದೆ.
ನಟ ಅಮಿತಾಭ್ ಬಚ್ಚನ್ (Amitabh Bachchan) ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಈಗ 81 ವರ್ಷ ವಯಸ್ಸು. ಹಲವು ವರ್ಷಗಳಿಂದ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅಮಿತಾಭ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾದ (Amitabh Bachchan Hospitalised) ವಿಷಯ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಆದರೆ ಬಿಗ್ ಬಿ ಅವರಿಗೆ ಯಾವುದೇ ಗಂಭೀರ ಸಮಸ್ಯೆ ಎದುರಾಗಿಲ್ಲ ಎಂದು ಹೇಳಲಾಗುತ್ತಿದೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ (Angioplasty) ಮಾಡಲಾಗಿದೆ. ಆದರೆ ಅವರಿಗೆ ಹೃದಯಸಂಬಂಧಿ ಅನಾರೋಗ್ಯ ಉಂಟಾಗಿಲ್ಲ ಎಂದು ವರದಿ ಆಗಿದೆ.
ಅಮಿತಾಭ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾದ ವಿಷಯ ಹೊರಬೀಳುವುದಕ್ಕೂ ಒಂದು ಗಂಟೆ ಮೊದಲು ಅವರ ಮಾಡಿದ ಎಕ್ಸ್ (ಟ್ವಿಟರ್) ಪೋಸ್ಟ್ ಗಮನ ಸೆಳೆದಿತ್ತು. ‘ಎಂದೆಂದಿಗೂ ಚಿರಋಣಿ’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ. ಸರ್ಜರಿ ಆದ ಬಳಿಕ ಅವರು ಈ ರೀತಿ ಪೋಸ್ಟ್ ಮಾಡಿರಬಹುದು ಎನ್ನಲಾಗಿದೆ. ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದಾಕ್ಷಣ ಅಮಿತಾಭ್ ಬಚ್ಚನ್ ಅವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆ ಎದುರಾಗಿರಬಹುದಾ ಎಂಬ ಅನುಮಾನ ಮೂಡುತ್ತದೆ. ಆದರೆ ವರದಿಗಳ ಪ್ರಕಾರ, ಕಾಲಿನ ರಕ್ತನಾಳದ ಸಮಸ್ಯೆ ಇರುವುದರಿಂದ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಒಟ್ಟಿನಲ್ಲಿ ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಆಸ್ಪತ್ರೆ ಅಥವಾ ಕುಟುಂಬದವರು ಹೆಲ್ತ್ ಅಪ್ಡೇಟ್ ನೀಡಲಿ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.
ಅಮಿತಾಭ್ ಬಚ್ಚನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 81ನೇ ವಯಸ್ಸಿನಲ್ಲೂ ಅವರು ಅದೇ ಕ್ರೇಜ್ ಉಳಿಸಿಕೊಂಡಿದ್ದಾರೆ. ಭಾರಿ ಬೇಡಿಕೆ ಹೊಂದಿರುವ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ರೀತಿಯ ಹೈವೋಲ್ಟೇಜ್ ಸಿನಿಮಾಗಳಲ್ಲಿ ಅಮಿತಾಭ್ ಬಚ್ಚನ್ ಅಭಿನಯಿಸುತ್ತಿದ್ದಾರೆ. ರಜನಿಕಾಂತ್ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ‘ವೆಟ್ಟೈಯಾನ್’ ಸಿನಿಮಾದಲ್ಲೂ ಅಮಿತಾಭ್ ಬಚ್ಚನ್ ಅವರಿಗೆ ಒಂದು ಪ್ರಮುಖ ಪಾತ್ರಿವಿದೆ. ಆ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ.