Lok Sabha Election 2024: 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಿರುವ ಬಿಜೆಪಿ, ಇನ್ನೂ ಐದು ಕ್ಷೇತ್ರವನ್ನು ಮಾತ್ರ ಅಭ್ಯರ್ಥಿ ಬಾಕಿ ಇರಿಸಿಕೊಂಡಿದೆ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಈ ಐದು ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಬಾರಿ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಬಿಜೆಪಿ ಹೈಕಮಾಂಡ್ ನಾಯಕರು ಸರ್ವೆ ವರದಿ ಸಹಿತ ರಾಜ್ಯ ನಾಯಕರಿಂದ ಪ್ರತ್ಯೇಕ ವರದಿಯನ್ನು ತರಿಸಿಕೊಂಡು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಮಾರ್ಚ್ 15 : ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ ಕರ್ನಾಟಕದಲ್ಲಿ (BJP Karnataka) ಈಗಾಗಲೇ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಜೆಡಿಎಸ್ ಜತೆಗೆ ಮೈತ್ರಿ ಇರುವುದರಿಂದ 3 ಸೀಟನ್ನು ಆ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಹೀಗಾಗಿ ಬಾಕಿ 5 ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಪ್ರಕಟಿಸಬೇಕಿದ್ದು, ಇಂದು (ಶುಕ್ರವಾರ – ಮಾ. 15) ಸಂಜೆಯೊಳಗೆ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಕಾರಣ, ಈ ಐದು ಕ್ಷೇತ್ರಗಳಲ್ಲಿ ಭಾರಿ ಪೈಪೋಟಿ ಇದ್ದು, ಯಾರನ್ನು ಕಣಕ್ಕಿಳಿಸಿದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ಹೈಕಮಾಂಡ್ (BJP high command) ನಾಯಕರು ತೊಡಗಿದ್ದಾರೆ. ಈಗ ಒಂದು ಹಂತದಲ್ಲಿ ನಿರ್ಧಾರಕ್ಕೂ ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಜೆಪಿಯ ಪಂಚ ಕ್ಷೇತ್ರಕ್ಕೆ ಪಂಚಸೂತ್ರವನ್ನು ಹೆಣೆಯಲಾಗಿದೆ.
ಏನಿದು ಬಿಜೆಪಿಯ ಪಂಚ ಕ್ಷೇತ್ರ – ಪಂಚಸೂತ್ರ?
20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಿರುವ ಬಿಜೆಪಿ, ಇನ್ನೂ ಐದು ಕ್ಷೇತ್ರವನ್ನು ಮಾತ್ರ ಅಭ್ಯರ್ಥಿ ಬಾಕಿ ಇರಿಸಿಕೊಂಡಿದೆ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಈ ಐದು ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಬಾರಿ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಬಿಜೆಪಿ ಹೈಕಮಾಂಡ್ ನಾಯಕರು ಸರ್ವೆ ವರದಿ ಸಹಿತ ರಾಜ್ಯ ನಾಯಕರಿಂದ ಪ್ರತ್ಯೇಕ ವರದಿಯನ್ನು ತರಿಸಿಕೊಂಡು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಅನಂತ್ ಅಬ್ಬರಕ್ಕೆ ಮಣಿದಿರುವ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಯಾವುದೇ ಲಾಭಿ ಮಾಡದೇ ತಮ್ಮ ಪ್ರಖರ ಹಿಂದೂತ್ವದ ವಾಗ್ಬಾಣದಿಂದಲೇ ಅನಂತ್ ಕುಮಾರ್ ಟಿಕೆಟ್ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ…
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ
ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ. ಸುಧಾಕರ್ ವರ್ಸಸ್ ಅಲೋಕ್ ವಿಶ್ವನಾಥ್ ನಡುವೆ ಪೈಪೋಟಿ ಏರ್ಪಟ್ಟಿದೆ. ಇಲ್ಲಿ ಒಬ್ಬರಿಗೆ ಕೊಟ್ಟರೆ ಮತ್ತೊಂದು ಬಣದಿಂದ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ. ಹೀಗಾಗಿ ಟಿಕೆಟ್ ಹಂಚಿಕೆಗೂ ಮೊದಲೇ ಸಮಸ್ಯೆ ಬಗೆಹರಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು.
ಚಿತ್ರದುರ್ಗ ಲೋಕಸಭಾ ಕ್ಷೇತ್ರ
ಕೇಂದ್ರ ಸಚಿವ ನಾರಾಯಣ ಸ್ವಾಮಿ ವರ್ಸಸ್ ಜನಾರ್ದನ ಸ್ವಾಮಿ ಎಂಬಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಪೈಪೋಟಿ ಏರ್ಪಟ್ಟಿದೆ. ನಾರಾಯಣಸ್ವಾಮಿಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ. ಆದರೆ, ಜನಾರ್ದನ ಸ್ವಾಮಿಗೆ ಸಕ್ರಿಯ ರಾಜಕಾರಣಿ ಅಲ್ಲ ಎಂಬ ಅಪಖ್ಯಾತಿ ಇದೆ. ಹೀಗಾಗಿ ಮಾದರ ಚನ್ನಯ್ಯ ಅವರನ್ನು ಕರೆದುಕೊಂಡು ಬರುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆದಿದೆ.
ರಾಯಚೂರು ಲೋಕಸಭಾ ಕ್ಷೇತ್ರ
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ರಾಜ ಅಮರೇಶ್ವರ ನಾಯಕ ವರ್ಸಸ್ ಬಿ.ವಿ ನಾಯಕ ಎನ್ನುವ ಸ್ಥಿತಿ ಇದೆ. ರಾಜ ಅಮರೇಶ್ವರ ನಾಯಕ ಅವರಿಗೆ ಆಡಳಿತ ವಿರೋಧಿ ಅಲೆ ಇದೆ. ಈ ನಡುವೆ ಟಿಕೆಟ್‌ಗೆ ಬಿ.ವಿ. ನಾಯಕ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಗೊಂದಲ ಮುಂದುವರಿದಿದೆ.
ಬೆಳಗಾವಿಯಲ್ಲಿ ಶೆಟ್ಟರ್‌ಗೆ ಫಿಕ್ಸ್?
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆ ಮಂಗಳಾ ಅಂಗಡಿ ಇದ್ದಾರೆ. ಆದರೆ, ಅವರಿಗೆ ಈ ಬಾರಿ ಟಿಕೆಟ್ ಮಿಸ್ ಆಗುತ್ತದೆ ಎಂಬುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿದ್ದರು. ತಮ್ಮ ಕುಟುಂಬದ ಶ್ರದ್ಧಾ ಶೆಟ್ಟರ್‌ಗೆ ಕೊಡಿ ಎಂದು ಕೇಳಿದ್ದರು. ಆದರೆ, ಹೈಕಮಾಂಡ್ ಈಗ ಘರ್ ವಾಪ್ಸಿ ಆಗಿರುವ ಜಗದೀಶ್ ಶೆಟ್ಟರ್ ಅವರ ಮೇಲೆ ವಿಶ್ವಾಸ ಇಟ್ಟಿದೆ ಎನ್ನಲಾಗಿದೆ. ಹೀಗಾಗಿ ಅವರಿಗೆ ಟಿಕೆಟ್ ಎಂದು ಈಗಾಗಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹ ಹೇಳಿದ್ದಾರೆ. ಹೀಗಾಗಿ ಅವರಿಗೇ ಟಿಕೆಟ್ ಪಕ್ಕಾ ಎನ್ನಲಾಗಿದೆ. ಇನ್ನು ಮಹಾಂತೇಶ್ ಕವಟಗಿಮಠ, ಈರಣ್ಣ ಕಡಾಡಿ ಸಹ ರೇಸ್‌ನಲ್ಲಿದ್ದಾರೆ. ಕವಟಗಿಮಠ ನಿಷ್ಠಾವಂತರ ಕೋಟಾದಡಿ ಟಿಕೆಟ್ ಕೇಳಿದರೆ, ಕಡಾಡಿ ಪಂಚಮಸಾಲಿ ಕೋಟಾದಡಿ ಟಿಕೆಟ್ ಕೇಳುತ್ತಿದ್ದಾರೆ.