ಕುಮಟಾ, ಮಾರ್ಚ್ – 23 : ಕುಮಟಾ ತಾಲೂಕಿನ ಚಿತ್ರಗಿ ಬಳಿ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುಮಟಾ ಪಟ್ಟಣದ ಚಿತ್ರಗಿಯ ಮಾದರಿ ಕನ್ನಡ ಶಾಲೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಅದರಂತೆ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಎರಡು ದಿನಗಳ ಹಿಂದೆ ಬೋನ್ ಇಟ್ಟಿದ್ದರು. ಶನಿವಾರ ಬೆಳಗ್ಗೆ ಶಾಲೆಯ ಸಮೀಪದ ಗುಡ್ಡದಿಂದ ಇಳಿದು ಬಂದಿದ್ದ ಒಂದೂವರೆ ವರ್ಷದ ಗಂಡು ಚಿರತೆ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನ್ಗೆ ಬಿದ್ದಿದೆ. ಚಿರತೆ ಸೆರೆ ಬಳಿಕ ಚಿತ್ರಗಿ ನಿವಾಸಿಗಳು ನಿರಾಳರಾಗಿದ್ದಾರೆ.
ಇನ್ನು ಚಿರತೆ ಸರೆಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಕ್ಕೆ ಶಾಸಕ ದಿನಕರ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.