ಶಂಕಿತನ ಜಾಡು ಹಿಡಿದ ಎನ್‌ಐಎಗೆ ಚೆನ್ನೈ ಲಿಂಕ್ ಸಿಕ್ಕಿದೆ. ಸ್ಫೋಟಕ್ಕೂ (Blast in Bengaluru) ಮುನ್ನ ಎರಡು ತಿಂಗಳುಗಳ ಕಾಲ ತಮಿಳುನಾಡಿನಲ್ಲಿ ಉಳಿದಿದ್ದುದು ತಿಳಿದುಬಂದಿದೆ.
ಬೆಂಗಳೂರು, ಮಾರ್ಚ್ 21 : ರಾಜಧಾನಿಯ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆಸಲಾಗಿದ್ದ ಬಾಂಬ್ ಸ್ಫೋಟ (Blast in Bengaluru) ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ (NIA) ಮಹತ್ವದ ಲೀಡ್ ಸಿಕ್ಕಿದೆ. ಬಾಂಬ್ ಇಟ್ಟವನು ಹಾಗೂ ಆತನ ಸ್ನೇಹಿತ ಇಬ್ಬರೂ ಕರ್ನಾಟಕ ಮೂಲದವರು, ಆದರೆ ಸ್ಫೋಟಕ್ಕೆ ಮೊದಲಿನ ಎರಡು ತಿಂಗಳು ತಮಿಳುನಾಡಿನಲ್ಲಿ (tamil nadu) ಇದ್ದರು ಎಂಬುದು ಗೊತ್ತಾಗಿದೆ. ಇವರು ಶಿವಮೊಗ್ಗ ಜಿಲ್ಲೆಯ ಮುಸಾವೀರ್, ಹುಸೇನ್ ಶಬೀದ್ ಎಂಬ ಬಗ್ಗೆ ಮಾಹಿತಿ ದೊರೆತಿದೆ.
ಶಂಕಿತನ ಜಾಡು ಹಿಡಿದ ಎನ್‌ಐಎಗೆ ಚೆನ್ನೈ ಲಿಂಕ್ ಸಿಕ್ಕಿದೆ. ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟ ಶಂಕಿತ ತಮಿಳುನಾಡಿಗೇ ಪರಾರಿಯಾಗಿರಬಹುದು ಎಂದು ಕೂಡ ಶಂಕಿಸಲಾಗಿದೆ. ಸ್ಫೋಟಕ್ಕೂ (Blast in Bengaluru) ಮುನ್ನ ಎರಡು ತಿಂಗಳುಗಳ ಕಾಲ ತಮಿಳುನಾಡಿನಲ್ಲಿ ಉಳಿದಿದ್ದುದು ತಿಳಿದುಬಂದಿದೆ.
ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಕವನ್ನು ಇಟ್ಟಿದ್ದವನ ಜೊತೆ ಮತ್ತೋರ್ವ ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ ಉಳಿದಿದ್ದ ಶಂಕಿತನ ಜೊತೆಗೆ ಈತನೂ ಇದ್ದ. ಸ್ಫೋಟಕ್ಕೆ ಮುನ್ನ ಇವರು ಓಡಾಡಿದ್ದ ಜಾಡನ್ನು ಎನ್‌ಐಎ ಹಿಡಿದಿದೆ. ಎರಡು ತಿಂಗಳು ತಮಿಳುನಾಡಿನ ಲಾಡ್ಜ್‌ನಲ್ಲಿ ಇವರು ಉಳಿದುಕೊಂಡಿರುವುದು ಪತ್ತೆಯಾಗಿದೆ. ಸ್ಫೋಟಕ್ಕೆ ಅವರು ಇಲ್ಲಿ ತರಬೇತಿ ಪಡೆಯುತ್ತಿದ್ದರೇ ಅಥವಾ ಇನ್ನಷ್ಟು ದೊಡ್ಡ ಉಗ್ರ ಕೃತ್ಯದ ತಯಾರಿ ನಡೆಸುತ್ತಿದ್ದರೇ ಎಂಬ ಅಂಶವನ್ನು ತನಿಖೆ ಮಾಡಲಾಗುತ್ತಿದೆ.
ಸ್ಫೋಟಕ ಇಡಲು ಬರುವ ವೇಳೆ ಮುಖ ಮರೆಮಾಚಲು ಧರಿಸಿದ್ದ ಉಗ್ರ ಧರಿಸಿದ್ದ ಟೊಪ್ಪಿಯ ಮೂಲವನ್ನು ಎನ್‌ಐಎ ಪತ್ತೆ ಹಚ್ಚಿದೆ. ಇದು ತಮಿಳುನಾಡಿನ ಮಾಲ್ ಒಂದರಲ್ಲಿ ಖರೀದಿಸಲಾದ ಟೊಪ್ಪಿ.ಯಾಗಿದ್ದು, ಟೊಪ್ಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೊಬ್ಬನಿದ್ದ. ಖರೀದಿ ವೇಳೆ ಇಬ್ಬರ ಮುಖಚಹರೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ಫೂಟೇಜ್‌ಗಳನ್ನು ಎನ್‌ಐಎ ಸಂಗ್ರಹಿಸಿದೆ.
ಮತ್ತೊಂದೆಡೆ, ಭಯೋತ್ಪಾದಕ ಎಸೆದುಹೋದ ಕ್ಯಾಪ್‌ನಲ್ಲಿ ಶಂಕಿತನ ಕೂದಲು ದೊರೆತಿದ್ದು, ಅದನ್ನು ಡಿಎನ್‌ಎ ಟೆಸ್ಟ್‌ಗೆ ಒಳಪಡಿಸಲಾಗಿದೆ. ಸದ್ಯ ಸಿಸಿಟಿವಿಗಳನ್ನು ಆಧರಿಸಿದ ನಡೆದಿರುವ ತನಿಖೆಯಲ್ಲಿ ಸಿಕ್ಕಿರುವ ಈ ಮಹತ್ವದ ಲೀಡ್ ಎನ್‌ಐಎಯ ಮತ್ತಷ್ಟು ಆಳದ ತನಿಖೆಗೆ ಪೂರಕವಾಗಿದೆ.
ತನಿಖೆಯ ಆರಂಭಿಕ ಹಂತದಲ್ಲಿ ಆತನ ಸರಿಯಾದ ಮುಖಚರ್ಯೆ ಕಾಣುವ ಯಾವ ಚಿತ್ರವೂ ಯಾರ ಕೈಗೂ ಸಿಕ್ಕಿರಲಿಲ್ಲ. ಆತ ಕೆಎಸ್‌ಆರ್ಟಿಸಿ ವೋಲ್ವೋ ಬಸ್‌ನಲ್ಲಿ ಬಂದಿದ್ದು, ಹೋಟೆಲ್ ಪ್ರವೇಶ ಮಾಡಿದ್ದು, ಬಿಲ್ ಕೌಂಟರ್, ರವೆ ಇಡ್ಲಿ ಹಿಡಿದುಕೊಂಡು ಹೋಗುವ, ಬಾಂಬಿಟ್ಟ ಬಳಿಕ ಇಳಿದುಕೊಂಡು ಹೋಗುವ ವಿಡಿಯೊಗಳೆಲ್ಲ ಸಿಸಿಟಿವಿಯಲ್ಲಿ ಸಿಕ್ಕಿದ್ದವು. ಆದರೆ, ಅದೆಲ್ಲದರಲ್ಲಿ ಆತ ಮುಖವನ್ನು ಟೋಪಿಯಿಂದ ಮರೆ ಮಾಚಿದ್ದ. ಮಾಸ್ಕ್ ಹಾಕಿಕೊಂಡಿದ್ದ. ಹಾಗಾಗಿ ಆತನ ಮುಖ ಕಾಣುತ್ತಿರಲಿಲ್ಲ.
ಎನ್‌ಐಎ ಆರಂಭಿಕ ಹಂತದಲ್ಲಿ ಆತ ರಾಮೇಶ್ವರಂ ಕೆಫೆಯಲ್ಲಿರುವಾಗ ಸೆರೆ ಹಿಡಿದ ಚಿತ್ರವನ್ನು ಬಿಡುಗಡೆ ಮಾಡಿ ಈ ವ್ಯಕ್ತಿಯ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ ಎಂದು ಹೇಳಿತ್ತು. ಬಳಿಕ ಬಳ್ಳಾರಿ ಬಸ್ ನಿಲ್ದಾಣದ ಒಂದು ವಿಡಿಯೊವನ್ನು ಪೋಸ್ಟ್ ಮಾಡಿತು. ಆದರೆ, ಅದನ್ನು ಕೆಲವೇ ನಿಮಿಷಗಳಲ್ಲಿ ಜಾಲ ತಾಣದಿಂದ ತೆಗೆದುಹಾಕಿತು.
ನಂತರ ಎನ್‌ಐಎ ನಾಲ್ಕು ಚಿತ್ರಗಳ ಒಂದು ಬಂಚ್ ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶಂಕಿತ ಆರೋಪಿಯ ಮುಖ ಬಹುತೇಕ ಸ್ಪಷ್ಟವಾಗಿ ಕಾಣಿಸುತ್ತದೆ. ಪೋಟೋದಲ್ಲಿರುವ ವ್ಯಕ್ತಿ ಕಂಡು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಪೋನ್ ನಂಬರ್ ಮತ್ತು ಇ ಮೇಲ್ ಐಡಿ ಕೊಟ್ಟು ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಬಳ್ಳಾರಿ ಮೂಲದ ಹಾಗೂ ಶಿವಮೊಗ್ಗ ಮೂಲದ ಕೆಲವು ಉಗ್ರರನ್ನೂ ಎನ್‌ಐಎ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದು, ಅದು ಹೆಚ್ಚಿನ ಫಲ ನೀಡಿಲ್ಲ.