ಪ್ರೇಮಿಗಾಗಿ ಕೈ ಕೊಯ್ದುಕೊಳ್ಳುವವರ ಮಧ್ಯೆ, ಗೆಳತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡು ಏನೋ ದೊಡ್ಡ ಸಾಧನೆ ಮಾಡಿದಂತೆ ಬೀಗುವ ಜನರ ಮಧ್ಯೆ ಇಲ್ಲೊಬ್ಬ ಕಲಿಯುಗದ ಶ್ರವಣ ಕುಮಾರ ತನ್ನ ಮುದ್ದಿನ ತಾಯಿಗೆ ತನ್ನ ತೊಡೆಯ ಚರ್ಮದಿಂದ ಸಿದ್ಧಪಡಿಸಿದ ಪಾದುಕೆಯನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಆಧುನಿಕ ಶ್ರವಣ ಕುಮಾರನ ಈ ಕಾರ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಸೃಷ್ಟಿಯಲ್ಲಿ ತಾಯಿಯ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ. ಆಕೆ ತನ್ನ ಮಕ್ಕಳಿಗಾಗಿ ಪ್ರಾಣವನ್ನೇ ಮುಡಿಪಾಗಿಡುತ್ತಾಳೆ. ಸ್ವಾರ್ಥವಿಲ್ಲದ ಪ್ರೀತಿಯನ್ನು ತೋರುತ್ತಾಳೆ. ಆದ್ದರಿಂದಲೇ ಅಮ್ಮನನ್ನು ದೇವರಿಗೆ ಹೋಲಿಸುತ್ತಾರೆ. ಇಂತಹ ಕಣ್ಣಿಗೆ ಕಾಣುವ ದೇವತೆಯನ್ನು ವಯಸ್ಸಾಯಿತು ಎಂಬ ಕಾರಣಕ್ಕೆ ವೃದ್ಧಾಶ್ರಮಕ್ಕೆ ಕಳುಹಿಸುವವರ ಹಾಗೂ ತಾಯಿಗೆ ಚುಚ್ಚು ಮಾತುಗಳನ್ನಾಡಿ ಬರೀ ನೋವನ್ನೇ ನೀಡುವವರ ಮಧ್ಯೆ ಇಲ್ಲೊಬ್ಬ ಆಧುನಿಕ ಶ್ರವಣ ಕುಮಾರ ತಾಯಿಗಾಗಿ ಏನಾದರೂ ಪುಟ್ಟ ಸೇವೆ ಮಾಡಬೇಕೆಂದು ನಿರ್ಧರಿಸಿ ತನ್ನ ತೊಡೆಯ ಚರ್ಮದಿಂದ ತಯಾರಿಸಿದ ಪಾದುಕೆಯನ್ನು ಉಡುಗೊರೆಯನ್ನಾಗಿ ನೀಡಿದ್ದಾನೆ.
ಈ ಅಚ್ಚರಿಯ ಘಟನೆ ಧಾರ್ಮಿಕ ನಗರವೆಂದೇ ಹೆಸರುವಾಸಿಯಾಗಿರುವ ಉಜ್ಜಯಿನಿಯಲ್ಲಿ ನಡೆದಿದ್ದು, ಮಗನೊಬ್ಬ ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತನ್ನ ತೊಡೆಯ ಚರ್ಮದಿಂದ ತಯಾರಿಸಿದ ಪಾದುಕೆಯನ್ನು ತಾಯಿಗೆ ಉಡುಗೊರೆಯಾಗಿ ನೀಡಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಈ ಆಧುನಿಕ ಶ್ರವಣ ಕುಮಾರನ ಹೆಸರು ರೌಣಕ್ ಗುರ್ಜರ್. ಒಂದು ಕಾಲದಲ್ಲಿ ಕುಖ್ಯಾತ ರೌಡಿ ಶೀಟರ್ ಆಗಿದ್ದ ರೌನಕ್ ವಿರುದ್ಧ ಸುಮಾರು 37 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಅಷ್ಟೇ ಅಲ್ಲದೆ ಸಾಮಾನ್ಯ ಜನರು ರೌನಕ್ ಹೆಸರು ಹೇಳಲು ಭಯಪಡುತ್ತಿದ್ದರು. ಆದರೆ ಇದೀಗ ಉತ್ತಮ ನಾಗರಿಕನಾಗಿ ಜೀವನ ನಡೆಸುತ್ತಿರುವ ರೌನಕ್ ತನ್ನ ತಾಯಿಗಾಗಿ ತನ್ನ ತೊಡೆಯ ಚರ್ಮದಿಂದ ತಯಾರಿಸಿದ ಪಾದುಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ತನ್ನ ಚರ್ಮದಿಂದ ತಯಾರಿಸಿದ ಪಾದುಕೆಯನ್ನು ತಾಯಿಗೆ ಉಡುಗೊರೆ ನೀಡಿದ್ದು ಏಕೆ:
2019 ರಲ್ಲಿ ಪೊಲೀಸ್ ಎನ್ಕೌಂಟರ್ ನಲ್ಲಿ ರೌನಕ್ ಅವರ ಕಾಲಿಗೆ ಬಲವಾದ ಗುಂಡೇಟು ಬೀಳುತ್ತದೆ. ಇದರ ಪರಿಣಾಮ ಅವರಿಗೆ ನಡೆದಾಡಲು ಸಾಧ್ಯವಾಗದೆ ಅವರು ಸಂಪೂರ್ಣವಾಗಿ ಬೆಡ್ ರೆಸ್ಟ್ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು. ಇವರ ಈ ಒಂದು ಕಷ್ಟದ ಸಮಯದಲ್ಲಿ ತಾಯಿ ನಿರುಜಾ ಗುರ್ಜರ್ ರೌನಕ್ ಅವರ ಬೆನ್ನೆಲುಬಾಗಿ ನಿಂತು, ಪುಟ್ಟ ಮಗುವಿನಂತೆ ಆರೈಕೆ ಮಾಡುತ್ತಿದ್ದರು. ಈ ಸಮಯದಲ್ಲಿ ರೌನಕ್ ರಾಮಾಯಣವನ್ನು ಓದಲು ಪ್ರಾರಂಭಿಸುತ್ತಾರೆ. ಹೀಗೆ ರಾಮಾಯಣವನ್ನು ಓದಿ ಇದರಿಂದ ಸ್ಪೂರ್ತಿ ಪಡೆದ ರೌನಕ್ ತನ್ನ ತಾಯಿಯ ಸೇವೆಗಾಗಿ ಏನನ್ನಾದರೂ ಮಾಡಬೇಕು ಎಂದು ನಿರ್ಧರಿಸಿ, ತನ್ನ ತೊಡೆಯ ಚರ್ಮದಿಂದ ತಾಯಿಗಾಗಿ ಪಾದುಕೆಯನ್ನು ಮಾಡುವುದಾಗಿ ಸಂಕಲ್ಪವನ್ನು ಮಾಡುತ್ತಾರೆ.
ಇದೀದ ಬಳಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ತಮ್ಮ ತೊಡೆಯ ಚರ್ಮವನ್ನು ತೆಗೆದು, ನಂತರ ಆ ಚರ್ಮವನ್ನು ಚಮ್ಮಾರರ ಬಳಿಗೆ ತೆಗೆದುಕೊಂಡು ಹೋಗಿ ತಾಯಿಗಾಗಿ ಸುಂದರ ಪಾದುಕೆಯನ್ನು ಸಿದ್ಧಪಡಿಸುತ್ತಾರೆ.
ಭಾಗವತ ಕಥಾ ಸಮಯದಲ್ಲಿ ತಾಯಿಗೆ ಚರ್ಮದ ಪಾದುಕೆ ತೊಡಿಸಿದ ರೌನಕ್:
ಹೀಗೆ ಸಿದ್ಧಪಡಿಸಿದ ಪಾದುಕೆಯನ್ನು ರೌನಕ್ ಭಾಗವತ ಕಥಾ ಸಮಯದಲ್ಲಿ ತಾಯಿಗೆ ತೊಡಿಸುತ್ತಾರೆ. ಹೌದು ರೌನಕ್ ಅವರ ಮನೆಯಲ್ಲಿ ಮಾರ್ಚ್ 14 ರಿಂದ 21 ವರೆಗೆ ಏಳು ದಿನಗಳ ಭಾಗವತ ಕಥಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಭಾಗವತ ಕಥಾ ಸಮಯದಲ್ಲಿ ರೌನಕ್ ತಮ್ಮ ಸಂಕಲ್ಪದಂತೆ ಚರ್ಮದಿಂದ ತಯಾರಿಸಿದ ಪಾದುಕೆಯನ್ನು ತಾಯಿಯ ಕಾಲಿಗೆ ತೊಡಿಸುತ್ತಾರೆ. ಮಗನ ಈ ಸಮರ್ಪಣಾ ಮನೋಭಾವ ಮತ್ತು ತ್ಯಾಗವನ್ನು ಕಂಡ ರೌನಕ್ ತಾಯಿ ಗಳಗಳನೇ ಅತ್ತು ಬಿಡುತ್ತಾರೆ. ಅಷ್ಟೇ ಅಲ್ಲದೇ ತಾಯಿ ಮೇಲಿನ ಮಗನ ಪ್ರೀತಿ ಮತ್ತು ಗೌರವ ಹಾಗೂ ರೌನಕ್ ಅವರ ಮಹಾನ್ ಕಾರ್ಯವನ್ನು ಕಂಡು ಕಾರ್ಯಕ್ರಮದಲ್ಲಿ ನೆರೆದಿದ್ದವರ ಕಣ್ಣಂಚಲ್ಲೂ ನೀರು ತುಂಬಿದ್ದವು. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಧುನಿಕ ಶ್ರವಣ ಕುಮಾರನ ಈ ಮಹತ್ಕಾರ್ಯಕ್ಕೆ ನೆಟ್ಟಿಗರು ಸಲಾಂ ಹೇಳಿದ್ದಾರೆ.