ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆ!

ಬೆಂಗಳೂರಿನ ನಗರ್ತಪೇಟೆಯಲ್ಲಿ ಮುಖೇಶ್ ಎಂಬ ಯುವಕನ ಮೇಲೆ ಹಲ್ಲೆ ಖಂಡಿಸಿ ನಡೆಸಿದ್ದ ಪ್ರತಿಭಟನೆ ಸಂಬಂಧ ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಕೇಸ್‌ಗೆ ಕರ್ನಾಟಕ ಹೈಕೋರ್ಟ್​ ಮಧ್ಯಂತರ ತಡೆ ನೀಡಿದೆ. ಹಾಗೇ ಶೋಭಾ ಕರಂದ್ಲಾಜೆ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆ ನೀಡಿದೆ.

ಬೆಂಗಳೂರು, ಮಾರ್ಚ್ 22 : ನಗರದ ನಗರ್ತಪೇಟೆಯಲ್ಲಿ ಮುಖೇಶ್ ಎಂಬ ಯುವಕನ ಮೇಲೆ ಹಲ್ಲೆ ಖಂಡಿಸಿ ನಡೆಸಿದ್ದ ಪ್ರತಿಭಟನೆ ಸಂಬಂಧ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧದ ಕೇಸ್‌ಗೆ ಕರ್ನಾಟಕ ಹೈಕೋರ್ಟ್(Karnataka High Court )​ ಮಧ್ಯಂತರ ತಡೆ ನೀಡಿದೆ. ಹಾಗೇ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿಯನ್ನು ತಮಿಳುನಾಡಿಗೆ ಲಿಂಕ್ ಮಾಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ(Shobha Karandlaje) ವಿರುದ್ಧದ ಎಫ್‌ಐಆರ್​ಗೂ ಹೈಕೋರ್ಟ್ ತಡೆ ನೀಡಿದೆ.

ನಗರ್ತಪೇಟೆಯಲ್ಲಿರುವ ಮೊಬೈಲ್ ಅಂಗಡಿ ಮಾಲೀಕ ಮುಖೇಶ್ ಎಂಬುವರ ಮೇಲೆ ನಡೆದಿದ್ದ ಹಲ್ಲೆ ಖಂಡಿಸಿ ಕಳೆದ ಮಂಗಳವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ತೇಜಸ್ವಿ ಸೂರ್ಯ, ಮತೀಯ ಭಾವಣೆ ಕೆರಳಿಸುವಂತೆ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಚಿಕ್ಕಪೇಟೆ ನಿವಾಸಿಯೊಬ್ಬರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಬಳಿಕ ಆಯೋಗದ ಸೂಚನೆ ಮೇರೆಗೆ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ, ಇದೀಗ ಈ ಪ್ರಕರಣವನ್ನು ರದ್ದು ಕೋರಿ ತೇಜಸ್ವಿ ಸೂರ್ಯ, ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು (ಮಾರ್ಚ್ 22) ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್​, ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.

ಇಡೀ ಊರಲ್ಲಿ ಪ್ರತಿಭಟನೆ ನಡೆಸಿದರೆ ಜನ ಓಡಾಡಬೇಡವೇ ಎಂದು ಸಂಸದ ತೇಜಸ್ವಿ ಸೂರ್ಯ ಪರ ವಕೀಲ ಪ್ರಸನ್ನ ಕುಮಾರ್ ಅವರಿಗೆ ಹೈಕೋರ್ಟ್ ಪ್ರಶ್ನಿಸಿದೆ. ಇದಕ್ಕೆ ಪ್ರಸನ್ನ ಕುಮಾರ್ ಪ್ರತಿಕ್ರಿಯಿಸಿ, ಯಾವುದೇ ಕಾನೂನುಬಾಹಿರ ಕೃತ್ಯ ನಡೆದಿಲ್ಲ. ಒಂದೆಡೆ ಸೇರಿ ಘಟನೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ವಾದ ಮಂಡಿಸಿದರು.

ವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್‌ ಅವರಿದ್ದ ಹೈಕೋರ್ಟ್ ಪೀಠ, ಸಿಎಂ ವಿರುದ್ಧ ಪ್ರತಿಭಟನೆ‌ ಸಂಬಂಧ‌ದ ಕೇಸ್‌ಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಸುಪ್ರೀಂಕೋರ್ಟ್ ನೀಡುವ ತೀರ್ಪು ತೇಜಸ್ವಿ ಸೂರ್ಯ ಕೇಸ್‌ಗೂ ಅನ್ವಯವಾಗಬಹುದು. ಹೀಗಾಗಿ ತೇಜಸ್ವಿ ಸೂರ್ಯ ವಿರುದ್ಧದ ಕೇಸ್‌ಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದರು.

ಶೋಭಾ ಕರಂದ್ಲಾಜೆ ವಿರುದ್ಧದ ಕೇಸ್​ಗೂ ತಡೆ
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿಯನ್ನು ತಮಿಳುನಾಡಿಗೆ ಲಿಂಕ್ ಮಾಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಜನಪ್ರಾತಿನಿಧ್ಯ ಕಾಯ್ದೆ ಅಡಿ ಎಫ್‌ಐಆರ್​ ದಾಖಲಾಗಿದ್ದು, ಇದನ್ನು ರದ್ದು ಕೋರಿ ಹೈಕೋರ್ಟ್​ ಮೊರೆ ಹೋಗಿದ್ದು, ಚುನಾವಣೆಗೆ ಸಂಬಂಧಿಸಿ ಯಾವುದೇ ಹೇಳಿಕೆ ನೀಡಿಲ್ಲ. ಆದರೂ ಕೇಸ್ ದಾಖಲಿಸಿದ್ದಾರೆಂದು ಶೋಭಾ ಕರಂದ್ಲಾಜೆ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿದರು. ಈ ವಾದವನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ, ಶೋಭಾ ಕರಂದ್ಲಾಜೆ ವಿರುದ್ಧದ ಎಫ್ಐಆರ್ ಗೆ ತಡೆ ನೀಡಿ ಆದೇಶಿಸಿದೆ.

ಕಾನೂನುಬಾಹಿರ ಕೇಸ್ ದಾಖಲಿಸಲು ಇದು ನಾಜಿ ಯುಗವಲ್ಲ. ಸಂವಿಧಾನದಡಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಎಲ್ಲಾ ಪಕ್ಷಗಳ ರಾಜಕಾರಣಿಗಳೂ ಸಂಯಮ ವಹಿಸಬೇಕು. ನಾವು ನಾಗರಿಕ ಸಮಾಜದಲ್ಲಿದ್ದೇವೆ. ಅಫ್ಘಾನಿಸ್ತಾನದಲ್ಲಿ ಅಲ್ಲ ಎಂದು. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.