ದತ್ತು ಮಗು ಕೇಸ್​: ಸೋನು ಶ್ರೀನಿವಾಸ್​ ಗೌಡ 4 ದಿನಗಳ ಕಾಲ ​ಪೊಲೀಸ್​ ಕಸ್ಟಡಿಗೆ

ಸೋನು ಶ್ರೀನಿವಾಸ್​ ಗೌಡ ಅವರನ್ನು ರಾಯಚೂರಿಗೆ ಕರೆದೊಯ್ದು ಪೊಲೀಸರು ತನಿಖೆ ನಡೆಸಲಿದ್ದಾರೆ. ಹಾಗಾಗಿ ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಬಾಲಕಿ ಪರಿಚಯವಾಗಿದ್ದ ಸ್ಥಳ ಮತ್ತು ಬಾಲಕಿಯ ನಿವಾಸ ಸೇರಿ ಹಲವು ಕಡೆಗಳಿಗೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.

ಸೋಶಿಯಲ್​ ಮೀಡಿಯಾ ಹಾಗೂ ಬಿಗ್​ ಬಾಸ್​ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರಿಗೆ ಈಗ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪ ಅವರ ಮೇಲಿದೆ. ಈ ಪ್ರಕರಣದಲ್ಲಿ ಅವರನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದು, (Sonu Gowda Arrest) ಹೆಚ್ಚಿನ ವಿಚಾರಣೆಗಾಗಿ 4 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ಸಿಜೆಎಂ ಕೋರ್ಟ್ ಆದೇಶ ನೀಡಿದೆ. ಮಾರ್ಚ್ 25ರವರೆಗೆ ಸೋನು ಗೌಡ ಅವರು ಪೊಲೀಸ್ ಕಸ್ಟಡಿಯಲ್ಲಿ (Police Custody) ಇರಲಿದ್ದಾರೆ.

ಸೋಮವಾರ (ಮಾರ್ಚ್​ 25) ಸೋನು ಶ್ರೀನಿವಾಸ್​ ಗೌಡ ಅವರನ್ನು ಪೊಲೀಸರು ಕೋರ್ಟ್​ಗೆ ಹಾಜರುಪಡಿಸಬೇಕಿದೆ. ಅಲ್ಲಿಯವರೆಗೆ ಸೋನು ಗೌಡ ಅವರನ್ನು ರಾಯಚೂರಿಗೆ ಕರೆದೊಯ್ದು ಪೊಲೀಸರು ತನಿಖೆ ನಡೆಸಲಿದ್ದಾರೆ. ಆದ್ದರಿಂದ ನ್ಯಾಯಾಲಯ ಅವರನ್ನು 4 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಬಾಲಕಿ ಪರಿಚಯವಾಗಿದ್ದ ಸ್ಥಳ ಮತ್ತು ಬಾಲಕಿಯ ನಿವಾಸ ಸೇರಿ ಹಲವು ಕಡೆಗಳಿಗೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.

ಬ್ಯಾಡರಹಳ್ಳಿ ಠಾಣೆ ಪೊಲೀಸರು ಸೋನು ಶ್ರೀನಿವಾಸ್​ ಗೌಡ ಅವರ ವಿಚಾರಣೆ ಮುಂದುವರಿಸಿದ್ದಾರೆ. ರಾತ್ರಿ ವೇಳೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಅವರನ್ನು ಇರಿಸಲಾಗುವುದು. ನಾಳೆ (ಮಾರ್ಚ್​ 23) ಬೆಳಗ್ಗೆ ಠಾಣೆಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.