ಸಂವಿಧಾನ ಬದಲಾವಣೆ ಮಾಡಲು ಹೊರಟರೆ ದೇಶದಲ್ಲಿ ರಕ್ತಪಾತ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯವರು ಸಂವಿಧಾನ ಬದಲಾವಣೆಗೆ ಸಂಬಂಧಿಸಿದ ಮತ್ತೆ ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ. ಹೆಗಡೆ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಮಾರ್ಚ್​ 11 : ಬಿಜೆಪಿಯವರು ಒಂದು ವೇಳೆ ಸಂವಿಧಾನ ಬದಲಾವಣೆ ಮಾಡುವ ಕೆಲಸಕ್ಕೆ ಹೊರಟರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಅವರ ಸಂವಿಧಾನ ಬದಲಾವಣೆ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೆಗಡೆ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಚಿವರಾಗಿದ್ದಾಗಲೂ ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾಗಲೇ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಯವರ ರಹಸ್ಯ ಅಜೆಂಡಾ. ಸಂವಿಧಾನಕ್ಕೆ ಅನಗತ್ಯ ತಿದ್ದುಪಡಿತರಲಾಗಿದೆ. ಅವುಗಳನ್ನು ಸರಿಪಡಿಸಬೇಕು. ಅದಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಹೆಗಡೆ ಹೇಳಿದ್ದಾರೆ. ಅವರು ಜನತೆಯಲ್ಲಿ ಮೂರನೇ ಎರಡರಷ್ಟು ಬಹುಮತ ಕೇಳಿರುವುದು ದೇಶದ ಉದ್ಧಾರಕ್ಕಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮನವಾದಿವನ್ನು ಸಮರ್ಥನೆ ಮಾಡಿಕೊಳ್ಳೋದು, ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಅನ್ನೋದು ಅವರ ಹಿಡನ್ ಅಜೆಂಡಾ. ಅದಕ್ಕೆ ಇಡೀ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು ಹಿಂದುಳಿಬದವರು ಎಲ್ಲರೂ ಅವರನ್ನು ವಿರೋಧ ಮಾಡುತ್ತಾರೆ. ಒಂದು ವೇಳೆ ಸಂವಿಧಾನ ಬದಲಾವಣೆಯ ಕೆಲಸ ಆದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಏನು ಹೇಳಿದ್ದರು ಅನಂತಕುಮಾರ್ ಹೆಗಡೆ?
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶನಿವಾರ ಮಾತನಾಡಿದ ಅನಂತ್ ಕುಮಾರ್ ಹೆಗಡೆ, ಕಾಂಗ್ರೆಸ್ ಪಕ್ಷದವರು ಆಡಳಿತದಲ್ಲಿದ್ದಾಗ ಸಂವಿಧಾನವನ್ನು ಹಲವು ಬಾರಿ ತಿರುಚಿದ್ದಾರೆ. ಬೇಡದೆ ಇರುವ ವಿಚಾರಗಳನ್ನೆಲ್ಲ ಸೇರಿಸಿ ಹಿಂದೂ ಸಮಾಜವನ್ನು ಗಮನಿಸುವ ರೀತಿ ಬದಲಾಯಿಸಿದ್ದಾರೆ. ಅವುಗಳನ್ನೆಲ್ಲ ಸರಿಪಡಿಸಬೇಕಿದೆ. ಆದರೆ, ಹಾಗೆ ಮಾಡಬೇಕಿದ್ದರೆ ಲೋಕಸಭೆಯಲ್ಲಿ ಮಾತ್ರವಲ್ಲದೆ ರಾಜ್ಯಸಭೆಯಲ್ಲಿ ಕೂಡ ನಮಗೆ ಬಹುಮತ ಬೇಕಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ ಎಂದು ಹೇಳಿದ್ದರು.