ದೇಶಕ್ಕಾಗಿ ಗೋಡ್ಸೆ ಗಾಂಧಿಯನ್ನು ಕೊಂದ : ಸಾಧ್ವಿ ಹೇಳಿಕೆ ಸಮರ್ಥಿಸಿಕೊಂಡ ಪ್ರಮೋದ್ ಮುತಾಲಿಕ್

ಗಾಂಧಿ ಕೊಂದ ಗೋಡ್ಸೆ ರಾಷ್ಟ್ರಭಕ್ತ ಎಂದು ಭೋಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಹೇಳಿಕೆಯನ್ನು ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಸಾಧ್ವಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಹಾಗೂ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಡೌಟ್ ಎನ್ನುವ ವಿಚಾರವಾಗಿಯೂ ಅಸಾಮಾಧಾನ ಹೊರಹಾಕಿದ್ದಾರೆ.

ಬಾಗಲಕೋಟೆ, ಮಾ.10 : ಗಾಂಧಿ ಕೊಂದ ಗೋಡ್ಸೆ ರಾಷ್ಟ್ರಭಕ್ತ ಎಂದು ಭೋಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik), ಪ್ರಜ್ಞಾ ಸಿಂಗ್ ಅವರಿಗೆ ಟಿಕೆಟ್ ಕೊಡಬೇಕಿತ್ತು. ಗೋಡ್ಸೆ ಒಬ್ಬ ದೇಶಭಕ್ತ ಅಂತ ಸಾಧ್ವಿ ಹೇಳಿದ್ದು ದೊಡ್ಡ ಅಪರಾಧವೇ? ಹೌದು ಗೋಡ್ಸೆ ದೇಶಭಕ್ತನೇ ಆಗಿದ್ದ. ಗುಂಡು ಹಾಕಿದ್ದು ತಪ್ಪು ಇರಬಹುದು. ಆದರೆ ದೇಶದ್ರೋಹಿಯಲ್ಲ, ಸುಫಾರಿ ಕಿಲ್ಲರ್ ಅಲ್ಲ. ಆಸ್ತಿಗೋಸ್ಕರ ಕೊಲೆ‌ಮಾಡಲಿಲ್ಲ. ದೇಶಕ್ಕಾಗಿ ಕೊಂದ. ದೇಶದ ಹಿತಕ್ಕಾಗಿ ಕೊಲೆ‌ ಮಾಡಿದ. ಕೊಲೆಯನ್ನು ನಾನು ಒಪ್ಪುವುದಿಲ್ಲ ಆದರೆ ನಾಡಿನ ಹಿನ್ನೆಲೆಯಲ್ಲಿ ವಿಚಾರಧಾರೆ ಇದೆ ಎಂದರು.

ಕಲಾದಗಿಯಲ್ಲಿ ಮಾತನಾಡಿದ ಅವರು, ಈಗ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಅಂತವರಿಗೂ ಟಿಕೆಟ್ ತಪ್ಪಿಸುವುದಾ ಎಂದು ಪ್ರಶ್ನಿಸಿದರು. ಹಿಂದುತ್ವಕ್ಕಾಗಿ ಒಂಬತ್ತು ವರ್ಷ ಜೈಲಲ್ಲಿ‌ ಕಳೆದವರು ಅವರು. ಇದು ವಿಕೃತ ಕಡೆ ಹೊರಟಿದೆ, ಹೊಂದಾಣಿಕೆ ಸರಿಯಲ್ಲ. ತಿದ್ದಿಕೊಳ್ಳಬೇಕು ಎಂದು ಬಿಜೆಪಿ ನಾಯಕರಿಗೆ ಮುತಾಲಿಕ್ ಸಲಹೆ ನೀಡಿದರು.

ಲೋಕಸಭೆ ಚುನಾವಣೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ನಾನು ರಾಜಕೀಯ ಕ್ಲೋಸ್ ಮಾಡಿಬಿಟ್ಟಿದ್ದೇನೆ. ನಾನು ಅದರಲ್ಲಿ ವಿಫಲನಾಗಿದ್ದೇನೆ. ನನ್ನನ್ನು ಸ್ವೀಕಾರ ಮಾಡುವಂತ ಮಾನಸಿಕತೆ ಇಂದಿನ‌ ಬಿಜೆಪಿಗಿಲ್ಲ. ಬಿಜೆಪಿಯವರಿಗೆ ಜಾತಿ ದುಡ್ಡು ಇದೇ ಬೇಕು. ಹಾಗಾಗಿ ನನ್ನಂತವರು ಬೇಡ ಆಗಿದೆ. ಅದಕ್ಕಾಗಿ ಪ್ರಾಮಾಣಿಕವಾಗಿ ಹಿಂದುತ್ವ ಮಾಡುತ್ತಾ ಹೋಗುತ್ತೇನೆ ಎಂದು ನಾನು ನಿಶ್ಚಯ ಮಾಡಿದ್ದೇನೆ ಎಂದರು.

ಹಿಂದುತ್ವ, ಅಭಿವೃದ್ಧಿ ಎರಡನ್ನೂ ಮಾಡುವ ಏಕೈಕ ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ ಅವರಿಗೆ ಲೋಕಸಭಾ ಟಿಕೆಟ್ ಕೈ ತಪ್ಪುವ ಸಾಧ್ಯತೆ ವಿಚಾರವಾಗಿ ಮಾತನಾಡಿದ ಮುತಾಲಿಕ್, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಡೌಟ್ ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ. ಪ್ರತಾಪ್ ಸಿಂಹ ಅವರಿಗೆ ಎಂಪಿ ಟಿಕೆಟ್ ಡೌಟ್ ಅನ್ನುವಂತಹದ್ದು ಆಗಬಾರದು. ಇಡೀ ಕರ್ನಾಟಕದಲ್ಲಿ ಹಿಂದುತ್ವ ಹಾಗೂ ಅಭಿವೃದ್ಧಿಯನ್ನು ಸಮಾನಾಗಿ ತಹೊಂಡು ಹೋಗುತ್ತಿರುವ ಏಕೈಕ ಸಂಸದರಾಗಿದ್ದಾರೆ. ಅಂತಹವರಿಗೆ ಡೌಟ್ ಅನ್ನುವ ಚರ್ಚೆಯೇ ಆಗಬಾರದು. ಕಣ್ಣು ಮುಚ್ಚಿ ಟಿಕೆಟ್ ಕೊಡಬೇಕು ಎಂದರು.

ಇವತ್ತಿನ ದುರ್ಬಲ, ನಿಷ್ಕ್ರಿಯ ಸಂಸದರ ಸಾಲಿನಲ್ಲಿ ಪ್ರತಾಪ್ ಸಿಂಹ ಅವರನ್ನು ಹೋಲಿಕೆ ಕೂಡ ಮಾಡಲು ಆಗಲ್ಲ. ಅಷ್ಟು ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಬೇರೆ ರಾಜಕೀಯ ವ್ಯಕ್ತಿಗಳ ತರಃ ಬಾಲ ಬಡಕತನ, ಲಾಭಿ‌ಮಾಡುವುದು, ಇನ್ಯಾರಿಗೋ ಸಲಾಂ ಹೊಡೆಯುವುದು ಮಾಡಿಲ್ಲ. ಮಾಡುವ ಅವಶ್ಯಕತೆಯೂ‌ ಇಲ್ಲ. ಅಭಿವೃದ್ಧಿಯಲ್ಲಿ ಪ್ರತಾಪ್ ಸಿಂಹ ನಂಬರ್ 1. ಕರ್ನಾಟಕದಲ್ಲಿ ಪ್ರತಾಪ್ ಸಿಂಹ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕೇಂದ್ರ ಸರ್ಕಾರ ಯಾಕೆ ಇವರ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತಿದೆ ಎಂವುದು ಗೊತ್ತಾಗುತ್ತಿಲ್ಲ. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಡದೇ ಇದ್ದರೆ, ಕರ್ನಾಟಕದ ನಾಗರಿಕರು, ಯುವಕರು ಸಿಡಿದೇಳುತ್ತಾರೆ. ಒಬ್ಬ ಪ್ರಮಾಣಿಕ ಸಂಸದನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ನಿಮ್ಮ ಬಗ್ಗೆ ಕೆಟ್ಟ ಸಂದೇಶ ಹೋಗುತ್ತದೆ. ಇದು ಸರಿಯಲ್ಲ, ಇದರ ಹಿಂದೆ ಯಾರ ಕೆಲಸ ಮಾಡುತ್ತಿದ್ದಾರೆ, ಕಾಲ ಏಳಿತಿದ್ದಾರೆ ನನಗೆ ಗೊತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಕರ್ನಾಟಕದ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಮೈಸೂರಿನಿಂದ ಕೈ ಅಭ್ಯರ್ಥಿಯಾಗಿ ಯತೀಂದ್ರ ಅವರನ್ನು ಕಣಕ್ಕಿಳಿಸಲು, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಲು ಬಿಜೆಪಿ ಕಾಂಗ್ರೆಸ್ ರಾಜ್ಯ ನಾಯಕರ ಒಳ ಒಪ್ಪಂದವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಲು ಒಳ ಒಪ್ಪಂದಗಳು ಏನೇನು ಆಟ ನಡೆಯತ್ತಿದೆ. ಅದು ನಾಳೆ ಬಿಜೆಪಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಎಚ್ಚರಿಕೆ ಕೊಡುತ್ತೇನೆ ಎಂದರು.

ಸಿದ್ದರಾಮಯ್ಯ ಅವರೇ ಇರಬಹದು, ಇನ್ಯಾರದ್ದೋ ಕೈವಾಡ ಇರಬಹುದು. ಇದು ಬಿಜೆಪಿಯ ರಾಷ್ಟ್ರೀಯ ನಾಯಕತ್ವಕ್ಕೆ‌ ಶೋಭೆ‌ ತರುವಂತಹದ್ದಲ್ಲ. ಪ್ರತಾಪ್ ಸಿಂಹ ಕೇವಲ ಹಿಂದುತ್ವ ಅಭಿವೃದ್ಧಿ ಎಂದು ಹೇಳಿಕೆ ಕೊಡುವುದಲ್ಲ. ಅವರು ನೇರವಾಗಿ ಕಾರ್ಯಕ್ಕೆ ಇಳಿದಿದ್ದಾರೆ ಎಂದರು.

ಹಿಂದೂ ಕಾರ್ಯಕರ್ತ ರಾಜು ಹತ್ಯೆಯ ಸಮಯದಲ್ಲಿ ತಲ್ವಾರ್ ಹಿಡಕೊಂಡವರಿಗೆ ಎಚ್ಚರಿಕೆ ಕೊಟ್ಟಂತ ಏಕೈಕ ಸಂಸದ ಅವರು. ನೂರಾರು‌ ಕಿಲೋಮೀಟರ್ ಪಾದಯಾತ್ರೆ ಮಾಡಿ, ಯಶಸ್ವಿಯಾಗಿ ಹನುಮ ಜಯಂತಿಯನ್ನ ಮಾಡಿದ ಏಕೈಕ ಸಂಸದ ಅವರು. ಬೆಂಗಳೂರು- ಮೂಸೂರು ರಸ್ತೆ ಅಭಿವೃದ್ಧಿ ಮಾಡಿಸಿದ್ದು ಯಾರು? ಎಂದು ಪ್ರಶ್ನಿಸಿದರು.

ಎಷ್ಟು ಪರಿಶ್ರಮ ಪಟ್ಟಿದ್ದಾರೆ ಅವರು, ಕೇಂದ್ರ ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿದ್ದಾರೆ. ಇನ್ಯಾರಿಗೋ ಸಹಾಯ‌ ಮಾಡುವ ದೃಷ್ಟಿಯಿಂದ ಅಂತವರಿಗೆ ನೀವು ಒಳ ಒಪ್ಪಂದ ನೀವು ಟಿಕೆಟ್ ತಪ್ಪಿಸುವುದನ್ನ ಕರ್ನಾಟಕದ ಮತದಾರ, ನಾಗರಿಕರು ಕ್ಷಮಿಸುವದಿಲ್ಲ. ಅವರಿಗೆ ಟಿಕೆಟ್ ತಪ್ಪಿಸಿದರೆ, ಅಕ್ಷ್ಯಮ ಅಪರಾಧ ಮಾಡಿದಂತೆ. ನಾವು ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ಕೊಡುತ್ತೇನೆ ಎಂದರು.