ಕುಮಟಾ ತಾಲೂಕಿನ ಹೊಸಾಡು ಅಮೃತದಾರೆ ಗೋಶಾಲೆ ಮತ್ತು ಗೋ ಸಂಧ್ಯಾ ಸಮಿತಿಯವರು ಅಮೃತಧಾರೆ ಗೋಶಾಲೆ ಆವರಣದಲ್ಲಿ ಹಮ್ಮಿಕೊಂಡ ಗೋ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ ಬಿ. ಗಣಪತಿ, ಗೋಗಳನ್ನು ಉಳಿಸುವ ಅಭಿಯಾನ ಜನರಿಂದಲೇ ನಡೆಯಬೇಕು ಎಂದು ಹೇಳಿದ್ರು…
ಸನಾತನ ಧರ್ಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೊಬ್ಬೆ ಹೊಡೆಯುವ ನಾವು, ಸನಾತನ ಧರ್ಮದ ಮೂಲವಾದ ಗೋವನ್ನು ಮರೆಯುತ್ತಿದ್ದೇವೆ. ಗೋವಿನ ಉತ್ಪನ್ನವೇ ಇಲ್ಲದೆ ಯಾವುದೇ ಒಂದು ಧಾರ್ಮಿಕ ಕಾರ್ಯ ನಡೆಯಲೂ ಸಾಧ್ಯವಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ನಾವು ಗೋವನ್ನು ದೂರ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಗನ್ ಹಿಡಿದು ಗೋ ಶಾಲೆ ನಡೆಸುವ ಪರಿಸ್ಥಿತಿ ಇದೆ. ಗೋಧಾಮಗಳಿಗೆ ಸರಕಾರ ಕೊಟ್ಟಿದ್ದೇನು ಎಂದು ಪ್ರಶ್ನಿಸಿದ ಅವರು, ಗೋ ಉಳಿಸುವ ಅಭಿಯಾನ ಜನರಿಂದಲೇ ನಡೆಯಬೇಕು. ಗೋವಿನ ಉತ್ಪನ್ನ ಖರೀಧಿಸಿ ಗೋ ಶಾಲೆಯ ಅಂಬಾಸಿಡರ್ ನಾವಾಗಬೇಕು ಎಂದು ಕರೆ ನೀಡಿದ್ರು…
ಉದ್ಯಮಿ ವಿದ್ಯಾಧರ ಹೆಗಡೆ ಮಾತಾನಾಡಿ ಗೋವಿನ ಸಂರಕ್ಷಣೆಯಂತೆಯೇ, ಹಳ್ಳಿಗರನ್ನೂ ನಮ್ಮಲ್ಲಿಯೇ ಉಳಿಸಿಕೊಳ್ಳುವ ಅಗತ್ಯತೆ ಇದೆ. ಅದಕ್ಕೂ ಅಭಿಯಾನ ನಡೆಯಬೇಕು. ನಮ್ಮಲ್ಲಿ ಅವಕಾಶಗಳು ಸಾಕಷ್ಟು ಇದೆ. ಅದನ್ನು ಹೇಗೆ ಬಳಸಿಕೊಂಡು ಯುವಕರನ್ನು ಊರಿನತ್ತ ಮುಖ ಮಾಡುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಗೋಶಾಲೆಯ ಅಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ ಗೋ ಶಾಲೆಯನ್ನು ಸ್ವಾವಲಂಬಿಯಾಗಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಈಗ 40% ರಷ್ಟು ಹಣವನ್ನು ಗೋವಿನ ಉತ್ಪನ್ನದಿಂದಲೇ ಪಡೆಯುತ್ತಿದ್ದೇವೆ. ಅದನ್ನು 100% ರಷ್ಟು ಆಗಬೇಕೆಂದರೆ ಒಂದು ಥಿಂಕ್ ಟ್ಯಾಂಕ್ ಅವಶ್ಯಕತೆಯಿದೆ. ಅಂತಹವರನ್ನು ಸೇರಿಸಿ ಹೊಸ ಹೊಸ ಯೋಜನೆ ಮಾಡಲಿದ್ದೇವೆ ಎಂದು ಹೇಳಿದ್ರು.
ನಿವೃತ್ತ ಪ್ರಾಂಶುಪಾಲ ವಿ.ಎಸ್ ಹೆಗಡೆ, ಗೋ ಶಾಲೆಯ ಖಜಾಂಚಿ ಜಿ.ಎಸ್ ಹೆಗಡೆ ಗೋಶಾಲೆಯ ಉಪಾಧ್ಯಕ್ಷ ಸುಬ್ರಾಯ ಭಟ್ಟ ವಾರ್ಷಿಕ ವರದಿ ವಾಚಿಸಿದರು. ಗೋ ಶಾಲೆಯ ಪ್ರಧಾನ ಕಾರ್ಯದರ್ಶಿ ಆರ್.ಜಿ ಉಗ್ರು ಗೋ ಸಂಧ್ಯಾದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ ಭಟ್ಟ ಸುವರ್ಣಗದ್ದೆ ಸ್ವಾಗತಿಸಿದರು. ಗೋ ಸಂಧ್ಯಾ ಸಮಿತಿಯ ಅಧ್ಯಕ್ಷ ಆರ್.ಜಿ ಭಟ್ಟ ವಂದಿಸಿದರು. ವೇದಿಕೆಯಲ್ಲಿದ್ದರು. ಅರುಣ ಹೆಗಡೆ ನಿರೂಪಿಸಿದರು.
ಗೋ ಶಾಲೆಯ ಪರಿಸರದಲ್ಲಿ ಮಕ್ಕಳಿಗಾಗಿ ಗೋವುಗಳ ಒಡನಾಟಕ್ಕೆ ಅವಕಾಶ ಕಲ್ಪಿಸಿದ್ದರು. ಆಲೆಮನೆಯ ಸಿಹಿಯಾದ ಕಬ್ಬಿನ ಹಾಲು, ಬಿಸಿ ಬೆಲ್ಲ ಖರೀದಿಸಲು ಜನರು ಮುಗಿಬಿದ್ದರು. ಕಬ್ಬಿನ ಹಾಲಿನ ದೋಸೆ, ಮಿರ್ಚಿ ಹಾಗೂ ಕಬ್ಬಿನ ಹಾಲಿನ ಇತರ ತಿಂಡಿ ತಿನಿಸುಗಳು ಗಮನ ಸೆಳೆದವು. ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಗೋಶಾಲೆಯ ಸಮಿತಿಯ ಸದಸ್ಯರು ಹಾಗೂ ಕೆಲವು ದಾನಿಗಳು ಊಟದ ವ್ಯವಸ್ಥೆಯ ಖರ್ಚು ವೆಚ್ಚವನ್ನು ಭರಿಸಿ, ಗೋ ಶಾಲೆಯಿಂದ ಯಾವುದೇ ಊಟದ ಖರ್ಚು ಬಳಸದಂತೆ ಗೋ ಸೇವೆಗೆ ಮುಂದಾಗಿ ಸಾರ್ವಜನಿಕರ ಮೆಚ್ಚುಗೆ ಪಡೆದರು. ಗೋ ಕಾಣಿಕೆ ನೀಡಿದ ದಾನಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು….