ಕದಂಬ ರಾಜರ ವಿಜಯ ಸಾರುವ ಕದಂಬ ಜ್ಯೋತಿ ಮೆರವಣಿಗೆ

ಕಾರವಾರ:- ಕದಂಬೋತ್ಸವದ ಅಂಗವಾಗಿ ಬನವಾಸಿಯ ಕದಂಬ ಮಹಾರಾಜರ ವಿಜಯದ ಸಂಕೇತವಾದ ಕದಂಬ ಜ್ಯೋತಿಯ ಮೆರವಣಿಗೆ ಮಾರ್ಚ್ 3 ರಂದು ಮಧ್ಯಾಹ್ನ 2.30 ಕ್ಕೆ ಗುಡ್ನಾಪುರದಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಕದಂಬ ಜ್ಯೋತಿಯ 2 ಮೆರವಣಿಗೆಗಳು ಜಿಲ್ಲೆಯಾದ್ಯಂತ ಮತ್ತು ಜಿಲ್ಲೆಯ ಹೊರಗೆ ಕದಂಬ ರಾಜರು ಆಳ್ವಿಕೆ ನಡೆಸಿದ್ದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಲಿದ್ದು, ಈ ಮೂಲಕ ಆ ಭಾಗದ ಜನತೆಗೆ ಕದಂಬ ರಾಜರು ಆಳ್ವಿಕೆಯ ಇತಿಹಸವನ್ನು ನೆನಪಿಸುವ ಜೊತೆಗೆ ಅಲ್ಲಿನ ಸಾರ್ವಜನಿಕರಿಗೆ ಕದಂಬೋತ್ಸವದ ಬಗ್ಗೆ ಮಾಹಿತಿ ನೀಡಿ, ಬನವಾಸಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನ ನೀಡಲಿದೆ.

 ಮೊದಲನೇ ಕದಂಬ ಜ್ಯೋತಿಯು ಹಾನಗಲ್ ಶಿಕಾರಿಪುರ, ಸಾಗರ, ಭಟ್ಕಳ, ಹೊನ್ನಾವರ, ಸಿದ್ದಾಪುರ ಮಾರ್ಗವಾಗಿ ಬನವಾಸಿಗೆ ಆಗಮಿಸಲಿದ್ದು, ಎರಡನೇ ಜ್ಯೋತಿಯು ಮುಂಡಗೋಡು, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಕಾರವಾರ, ಅಂಕೋಲ ಮಾರ್ಗವಾಗಿ ಬನವಾಸಿಗೆ ಆಗಮಿಸಲಿದ್ದು, ಎರಡೂ ಜ್ಯೋತಿಗಳು ಮಧುಕೇಶ್ವರ ದೇವಾಲಯದ ಬಳಿ ಸಂಗಮವಾಗಿ, ನಂತರ ಗಣ್ಯರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಕದಂಬೋತ್ಸವದ ವೇದಿಕೆ ಸ್ಥಳಕ್ಕೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 ಕದಂಬ ಜ್ಯೋತಿಯು ತಾಲೂಕು ಕೇಂದ್ರಗಳಿಗೆ ಆಗಮಿಸಿದಾದ ಅದನ್ನು ಗೌರವದಿಂದ ಸ್ವಾಗತಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬ0ದಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ಸಾರ್ವಜನಿಕರು ಕದಂಭೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕನ್ನಡಿಗರ ಪ್ರಥಮ ರಾಜವಂಶವಾದ ಕದಂಬರ ಇತಿಹಾಸ ಮತ್ತು ಕಾರ್ಯಕ್ರಮಗಳ ವೈಭವವನ್ನು ಕಣ್ತುಂಬಿ ಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.