ಕಾರವಾರ, ಫೆ.22: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗುತ್ತಿದ್ದು, ಇದೀಗ ಮೊದಲ ಸಾವು ಪ್ರಕರಣ ದಾಖಲಾಗಿದೆ. ಮಂಗನ ಕಾಯಿಲೆಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿದ್ದ ಸಿದ್ದಾಪುರದ ಜಿಡ್ಡಿ ಗ್ರಾಮದ 65 ವರ್ಷದ ಮಹಿಳೆ ಇದೀಗ ಮೃತಪಟ್ಟಿದ್ದಾರೆ.
ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 43 ಮಂಗನ ಕಾಯಿಲೆ ಪ್ರಕರಣಗಳು ದಾಖಲಾಗಿವೆ. ಎಲ್ಲಾ ಪ್ರಕರಣಗಳು ಸಿದ್ದಾಪುರ ತಾಲೂಕಿನಲ್ಲೇ ಪತ್ತೆಯಾಗಿವೆ. ಈ ತಾಲೂಕಿನಲ್ಲಿ ಮಂಗನ ಕಾಯಿಲೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಸೂಕ್ತ ಲಸಿಕೆ ಇಲ್ಲದೆ ಆರೋಗ್ಯ ಸಿಬ್ಬಂದಿ ಆತಂಕದಲ್ಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪೂರ ತಾಲೂಕಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗಿದೆ. ಜನವರಿ ತಿಂಗಳ ಅಂತ್ಯದ ವಾರ ಹಾಗೂ ಫೆಬ್ರವರಿ ತಿಂಗಳ ಮೊದಲ ವಾರದ ನಡುವೆ 37 ಜನರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿತ್ತು. 6 ಜನ ತಾಲೂಕು ಆಸ್ಪತ್ರೆ ಹಾಗೂ 6 ಜನ ಮಂಗಳೂರು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರೋಗ ಉಲ್ಭಣಗೊಳ್ಳುತ್ತಿರುವ ಬೆನ್ನಲ್ಲೆ ಮಂಗನ ಸಾವಿನ ಆತಂಕದಲ್ಲಿ ಸಿದ್ಧಾಪೂರದ ಜನರಿದ್ದಾರೆ. ಸಿದ್ದಾಪೂರದಲ್ಲಿ ಮಂಗನ ಕಾಯಿಲೆ ಆರಂಭ ಆದ ಬಳಿಕ ಇದುವರೆಗೆ ಮೂರು ಮಂಗಗಳು ಸಾವನ್ನಪ್ಪಿವೆ. ಆದರೆ ಆ ಬಗ್ಗೆ ಹೇಳಿಕೆ ನೀಡಲು ಜಿಲ್ಲಾಡಳಿತ ಹಿಂದೇಟು ಹಾಕಿದೆ. ಮಂಗ ಸಾವನಪ್ಪಿದೆ, ಆದರೆ ಯಾವುದರಿಂದ ಸತ್ತಿದೆ ಎಂಬ ಖಚಿತ ಮಾಹಿತಿ ಇಲ್ಲ ಎಂದಿದ್ದರು. ರೋಗ ಉಲ್ಭಣ ಜೊತೆಗೆ ಮಂಗನ ಸಾವು ಹೆಚ್ಚಿನ ಆತಂಕ ಸೃಷ್ಟಿಸಿದೆ.
ರಾಜ್ಯಕ್ಕೆ ಮಂಗನ ಕಾಯಿಲೆ ಭೀತಿ
ರಾಜ್ಯದಲ್ಲಿ ಮಂಗನ ಖಾಯಿಲೆ ಆತಂಕ ಶುರುವಾಗಿದೆ. ನವೆಂಬರ್ ನಿಂದ ಮೇ ತಿಂಗಳ ಅವಧಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಹಠಾತ್ ಜ್ವರ, ಶರೀರದಲ್ಲಿ ತೀವ್ರ ಸ್ನಾಯುಗಳ ನೋವು, ತಲೆ ನೋವು ಇತ್ಯಾದಿ ರೋಗ ಲಕ್ಷಣಗಳಾಗಿವೆ.
ರೋಗ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದ್ದಾರೆ. ರೋಗ ಲಕ್ಷಣ ಕಂಡು ಬಂದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಪ್ರಾಥಮಿಕ ಚಿಕಿತ್ಸೆ ಪಡೆದು KFD ಪರೀಕ್ಷೆಗೆ ರಕ್ತ ಮಾದರಿಯನ್ನು ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕಾಡಿಗೆ ಹೋಗುವ ಮುನ್ನ ಇಲಾಖೆ ಉಚಿತವಾಗಿ ನೀಡುವ DEPA ತೈಲವನ್ನು ಲೇಪಿಸಿಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಡಿಹೆಚ್ಓ ಗಳು ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.