ಕುಮಟಾ- ಮನುಷ್ಯನಿಗೆ ಸಾಧಿಸಲೇಬೇಕೆಂಬ ಛಲವೊಂದಿದ್ದರೆ ಸಾಧನೆಯ ಹಾದಿ ಕಷ್ಟವೇನಲ್ಲ. ಸೂಕ್ತ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸವಿದ್ದರೆ ದೈಹಿಕ ಹಾಗೂ ಮಾನಸಿಕ ನ್ಯೂನತೆಗಳನ್ನು ಮೀರಿ ಸಾಧನೆ ಮಾಡಬಹುದು ಎಂದು ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಅಭಿಪ್ರಾಯಪಟ್ಟರು. ಅವರು ಮಂಗಳವಾರ ಕುಮಟಾದಲ್ಲಿರುವ ದಯಾನಿಲಯ ವಿಶೇಷ ಚೇತನರ ಶಾಲೆಗೆ ಭೇಟಿ ನೀಡಿದ ವೇಳೆ ಹೇಳಿದರು.
ಅಪರೂಪದಲ್ಲಿಯೇ ಅಪರೂಪದಂತಿರುವ ದಯಾನಿಲಯ ಶಾಲೆಯು ತನ್ನದೇ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ. ಸಂಸ್ಥಾಪಕ ಸಿರಿಲ್ ಲೊಪಿಸ್ ಅವರು ಸಮಾನ ಮನಸ್ಕರ ಅದ್ಭುತ ತಂಡ ಕಟ್ಟಿಕೊಂಡು ಬುದ್ಧಿಮಾಂದ್ಯ ಮತ್ತು ವಿಶೇಷ ಚೇತನ ಮಕ್ಕಳಿಗೆ ಕಳೆದ ಹನ್ನೆರಡು ವರ್ಷಗಳಿಂದ ಟೇಬಲ್ ಟೆನಿಸ್, ಲಾನ್ ಟೆನಿಸ್, ಜೂಡೋ, ಸ್ವಿಮ್ಮಿಂಗ್, ಸ್ಕೇಟಿಂಗ್, ವೇಟ್ ಲಿಫ್ಟಿಂಗ್ ಸೇರಿದಂತೆ ವಿವಿಧ ಕ್ರೀಡೆಯಲ್ಲಿ ತರಬೇತಿ ನೀಡುತ್ತಿರುವುದು ಮಾತ್ರವಲ್ಲದೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಪದಕ ಪಡೆಯುತ್ತಿರುವುದು ಸಂತಸದ ವಿಚಾರ. ವಿಶೇಷ ಚೇತನರ ಸ್ಪೆಷಲ್ ಒಲಿಂಪಿಕ್ ವರ್ಲ್ಡ್ ಗೇಮ್ಸ್ ನಲ್ಲಿ ಈ ಶಾಲೆಯ ಮಕ್ಕಳ ಸಾಧನೆ ಅಭಿನಂದನಾರ್ಹ ಮತ್ತು ಪ್ರೇರಣಾದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ಸಿರಿಲ್ ಶಾಲೆಯ ಪ್ರತಿಭಾನ್ವಿತ ಮಕ್ಕಳು, ಒಳಾಂಗಣ ಕ್ರೀಡಾಂಗಣ, ಮಕ್ಕಳ ಕಚೇರಿ, ಕೈತೋಟ ಸೇರಿದಂತೆ ಎಲ್ಲ ವಿಭಾಗಳನ್ನು ಸವಿವರವಾಗಿ ಪರಿಚಯಿಸಿದರು. ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ನಾರಾಯಣ ಜಿ ನಾಯಕ, ಕುಮಟಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಎಲ್. ಭಟ್, ಜಿಲ್ಲಾ ಐಇಸಿ ಸಂಯೋಜಕರು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತಿತರಿದ್ದರು.