ಅಂಕೋಲಾ: ಎಕ್ಕಾ ರಾಜ ರಾಣಿ ನಿನ್ನ ಕೈ ಒಳಗೆ, ಹಿಡಿ ಮಣ್ಣು ನಿನ್ನ ಬಾಯೊಳಗೆ ಎನ್ನುವ ದಿ.ಪುನೀತ್ ರಾಜಕುಮಾರ್ ಚಲನಚಿತ್ರದ ಹಾಡೊಂದನ್ನು ನೆನಪಿಸುವಂತೆ ಅಂಕೋಲಾ ತಾಲೂಕಿನಲ್ಲಿ ಕೈಚಳಕದಿಂದ ಡಬ್ಬ ಅಲ್ಲಾಡಿಸುತ್ತ ಮಂಡ ಹೂಡಿ ಗುಡಿಸಿ ಗಂಡಾಂತರ ಮಾಡುತ್ತಿರುವ ಪ್ರಕರಣಗಳು ಅಧಿಕವಾಗುತ್ತಿದೆ.
ದಯವಿಟ್ಟು ಕುಟ್ಕುಟಿ ಆಟ ಬಂದ್ ಮಾಡಿ ಎಂದು ಪೊಲೀಸ್ ಠಾಣೆಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಆಡಳಿತ ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವರು ತಕರಾರು ತೆಗೆಯುತ್ತಿದ್ದಾರೆ. ಕುಟ್ಕುಟಿ ಆಟ ಬಂದ್ ಮಾಡದೇ ಇದ್ದಲ್ಲಿ ಧರಣಿ ಕುಳಿತು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ನಂತರ ಸ್ವಲ್ಪ ಪ್ರಮಾಣದಲ್ಲಿ ಈ ಹಾವಳಿ ಬಂದ್ ಆಗಿದೆ
ಎಲ್ಲರಿಗೂ ಸಮಪಾಲು ಸಮಬಾಳು.
ಮಾಡುತ್ತಿರುವುದು ಕಾನೂನು ಬಾಹಿರ ಚಟುವಟಿಕೆ. ಈ ಆಟದ ಮೂಲಕ ಬೆವರು ಸುರಿಸದೇ ಹಣಗಳಿಕೆ ಮಾಡಬಹುದು ಎನ್ನುವ ಗೋಜಿಗೆ ಬಿದ್ದ ಅನೇಕರು ಎಲ್ಲವನ್ನೂ ಕಳೆದು ಸುಲಭ ಸಾಲ ನೀಡುವ ಫೈನಾನ್ಸ್ ಗಳತ್ತ ಚಿತ್ತ ಹರಿಸಿದ್ದು ಇದೆ. ಮನೆ ಮುಂದೆ ಫೈನಾನ್ಸ್ ಗಳ ವಾಹನದ ಮೇಲೆ ಬಂದವರು ಧಮಕಿ ಹಾಕಿದಾಗಲೇ ಅಕ್ಕ ಪಕ್ಕದವರಿಗೆ ಗೊತ್ತಾಗಿದ್ದು ಕುಟ್ಕುಟಿ ಆಡಿ ದುಡ್ಡು ಕಳೆದುಕೊಂಡು ಸಾಲಕ್ಕೆ ಬಲಿಯಾಗಿದ್ದಾನೆ ಎನ್ನುವುದು. ಹಾಗಿದ್ದೂ ಈ ಕುಟ್ಕುಟಿ ಆಟಕ್ಕೆ ಬಲು ಡಿಮ್ಯಾಂಡ್. ಜನರ ಹಣವನ್ನು ಸುಲಭವಾಗಿ ಪೀಕಬಹುದು ಎನ್ನುವುದು ಏಜೆಂಟ್ ಗಳ ಲೆಕ್ಕಾಚಾರ. ಈ ಮಧ್ಯೆ ಕೆಲವೆಡೆ ತಮ್ಮ ಸಾರಥ್ಯದಲ್ಲಿ ಆಟ ನಡೆಯಬೇಕು ಎಂದು ಕೆಲವರು, ಅದರಲ್ಲಿ ನಮಗೂ ಪಾಲೂ ಬೇಕು ಎಂದು ಹಲವರ ಬೇಡಿಕೆ. ಕಮಿಷನ್ ಬೇಡ ಎನ್ನುತ್ತಾ ಆ ನೆಪದಲ್ಲಿ ಬೇರೆ ಏನಾದರೂ ಕೊಡುಗೆ ಪಡೆಯುವವರೂ ಇಲ್ಲಿದ್ದಾರೆ.
ಒಟ್ಟಿನಲ್ಲಿ ಅಧಿಕಾರಿ, ರಕ್ಷಕ, ಸೇವಕ, ಪ್ರತಿನಿಧಿ ಎನ್ನದೆ ಎಲ್ಲರಿಗೂ ಸಮಪಾಲು ನೀಡಿ ಸಮಬಾಳು ಬದುಕೋಣ ಗೌಪ್ಯವಾಗಿ ಎಂದು ಹಿರಿಯರ ಮಾರ್ಗದರ್ಶನ ಕೂಡ ಈ ಆಟಕ್ಕೆ ಇದೆ.