ಪರೀಕ್ಷಾ ಪೇ ಚರ್ಚಾ: ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ ಯಶಸ್ಸಿನ ಸೂತ್ರಗಳಿವು…..

ಜನವರಿ ಅಂತ್ಯ ಹಾಗೂ ಫೆಬ್ರುವರಿ ತಿಂಗಳು ಆರಂಭ ಆಗುತ್ತಿದ್ದಂತೆಯೇ ದೇಶಾದ್ಯಂತ ಪರೀಕ್ಷಾ ಜ್ವರ ಶುರುವಾಗುತ್ತದೆ. ಮಾರ್ಚ್‌ನಿಂದ ಜುಲೈ ತಿಂಗಳವರೆಗೆ ದೇಶಾದ್ಯಂತ ಪ್ರಾಥಮಿಕ ಶಾಲೆಗಳಿಂದ ಹಿಡಿದು ಸ್ನಾತಕೋತ್ತರ ಪದವಿ ಕಾಲೇಜುಗಳವರೆಗೆ ವಿವಿಧ ಹಂತದಲ್ಲಿ ಪರೀಕ್ಷೆಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ದವಾಗುವ ಹಂತದಲ್ಲೇ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ನಡೆಸಿದ ಪ್ರಧಾನಿ ಮೋದಿಯವರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಹಲವು ಅಗತ್ಯ ಸಲಹೆ ನೀಡಿದ್ದಾರೆ…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.1
ಮಕ್ಕಳನ್ನು ಇತರರೊಂದಿಗೆ ಹೋಲಿಸುವುದನ್ನು ತಪ್ಪಿಸಿ
ಪರೀಕ್ಷೆ ಸಮಯದಲ್ಲಿ ಮಕ್ಕಳ ಕುಟುಂಬದ ಪಾತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಒತ್ತು ಕೊಟ್ಟು ಮಾತನಾಡಿದ್ರು. ಪರೀಕ್ಷೆ ಸಮಯದಲ್ಲಿ ಪೋಷಕರು ಮತ್ತು ಕುಟುಂಬದವರು ಮಕ್ಕಳ ಮೇಲೆ ಒತ್ತಡವನ್ನು ಹೇರುತ್ತಾರೆ. ಪೋಷಕರು ಬೇರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಸ್ತಾರೆ. ಆದ್ರೆ ಇದು ಸರಿಯಾದ ಕ್ರಮವಲ್ಲ ಎಂದ ಪ್ರಧಾನಿ, ಮಕ್ಕಳನ್ನು ಈ ರೀತಿ ಹೋಲಿಕೆ ಮಾಡುವುದು ತಪ್ಪು ಎಂದು ಹೇಳಿದ್ರು. ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸುವುದರಂದ, ಅವರಲ್ಲಿರುವ ನಿಜವಾದ ಪ್ರತಿಭೆ ಕುಂಟಿತವಾಗುತ್ತದೆ ಎಂದು ಹೇಳಿದ್ರು…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.2
ಸ್ನೇಹಿತರೊಂದಿಗೆ ಮಕ್ಕಳ ಸ್ಪರ್ಧೆಯನ್ನು ತಪ್ಪಿಸಿ
ನೇರ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ವಿಡಿಯೋವೊಂದನ್ನು ದೃಷ್ಟಾಂತವಾಗಿ ವಿವರಿಸಿದ್ರು. ಈ ವಿಡಿಯೋದಲ್ಲಿ ಕೆಲವು ವಿಶೇಷ ಚೇತನ ಮಕ್ಕಳು ಓಡುತ್ತಿದ್ದಾರೆ. ಅದರಲ್ಲಿ ಒಂದು ಮಗು ಬೀಳುತ್ತದೆ. ಆದರೆ ಉಳಿದ ಮಕ್ಕಳು ಮೊದಲು ಆ ಮಗುವನ್ನು ಎದ್ದು ನಿಲ್ಲಿಸಿ ಓಡಲು ಪ್ರಾರಂಭಿಸ್ತಾರೆ. ಈ ವಿಡಿಯೋ ತೋರಿಸಿದ ಪ್ರಧಾನಿಯವರು, ಇದು ವಿಶೇಷ ಚೇತನ ಮಕ್ಕಳ ಜೀವನದ ಬಗ್ಗೆ ಇರಬಹುದು. ಆದ್ರೆ ಇದು ನಮಗೆ ದೊಡ್ಡ ಸಂದೇಶವನ್ನು ನೀಡುತ್ತದೆ. ನೀವು ನಿಮ್ಮೊಂದಿಗೆ ಸ್ಪರ್ಧಿಸಬೇಕೇ ಹೊರತು, ನಿಮ್ಮ ಸ್ನೇಹಿತರ ಜೊತೆಗಲ್ಲ ಅನ್ನೋದನ್ನು ಪ್ರಧಾನಿ ಅದ್ಭುತವಾಗಿ ವಿವರಸಿದ್ರು…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.3
ಪಾಲಕರು, ಮಕ್ಕಳ ನಡುವೆ ಪೈಪೋಟಿ ಮಾಡುವುದು ಸರಿಯಲ್ಲ!
ಜೀವನದಲ್ಲಿ ಯಾವುದೇ ಸವಾಲುಗಳಿಲ್ಲದಿದ್ದರೆ ಜೀವನ ಅರ್ಥಹೀನವಾಗುತ್ತದೆ. ಸ್ಪರ್ಧೆ ಇರಬೇಕು ಎಂದು ಹೇಳಿದ ಪ್ರಧಾನಿ, ಸ್ಪರ್ಧೆ ಆರೋಗ್ಯಕರವಾಗಿರಬೇಕು. ಪರೀಕ್ಷೆಯ ಚರ್ಚೆಯಲ್ಲಿ ನಾನು ಮೊದಲ ಬಾರಿಗೆ ಈ ರೀತಿಯ ಪ್ರಶ್ನೆಯನ್ನು ಎದುರಿಸಿದ್ದೇನೆ. ಕೆಲವೊಮ್ಮೆ ಅದರ ವಿಷ ಮತ್ತು ಬೀಜಗಳನ್ನು ಕುಟುಂಬದ ಪರಿಸರದಲ್ಲಿಯೇ ಬಿತ್ತಲಾಗುತ್ತದೆ. ಮನೆಯಲ್ಲಿಯೂ ಸಹ ಇಬ್ಬರು ಸಹೋದರ ಸಹೋದರಿಯರ ನಡುವೆ ತೀವ್ರ ಸ್ಪರ್ಧೆಯ ಭಾವನೆಯನ್ನು ಪೋಷಕರಿಂದ ಬಿತ್ತಲಾಗಿದೆ. ನಿಮ್ಮ ಸ್ವಂತ ಮಕ್ಕಳ ನಡುವೆ ಅಂತಹ ಹೋಲಿಕೆಗಳನ್ನು ಮಾಡಬೇಡಿ ಎಂದು ನಾನು ವಿನಂತಿಸುತ್ತೇನೆ. ಬಹಳ ಸಮಯದ ನಂತರ ಈ ಬೀಜವು ವಿಷಕಾರಿ ಮರವಾಗುತ್ತದೆ. ಹೆತ್ತವರು ಯಾರನ್ನಾದರೂ ಭೇಟಿಯಾದಾಗ, ತಮ್ಮ ಮಗುವಿನ ಬಗ್ಗೆ ಹೇಳಿದಾಗ ಅದು ಆ ಮಗುವಿನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಎಂದು ಪೋಷಕರಿಗೆ ಕಿವಿ ಮಾತು ಹೇಳಿದ್ರು…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.4
ಸಂಗೀತ ಶಿಕ್ಷಕರು ಇಡೀ ಶಾಲೆಯ ಒತ್ತಡವನ್ನು ನಿವಾರಿಸಬಹುದು
ಸಂಗೀತ ಶಿಕ್ಷಕರು ಇಡೀ ಶಾಲೆಯ ಮಕ್ಕಳ ಒತ್ತಡವನ್ನು ಹೋಗಲಾಡಿಸಬಹುದು ಎಂದು ಪ್ರಧಾನಿ ಮೋದಿ ಪೋಷಕರಿಗೆ ಕಿವಿ ಮಾತು ಹೇಳಿದ್ರು. ಮೊದಲ ದಿನದಿಂದ ಪರೀಕ್ಷೆಯವರೆಗೂ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಬಾಂಧವ್ಯ ವೃದ್ಧಿಯಾಗಬೇಕು. ಇದರಿಂದ ಪರೀಕ್ಷೆ ದಿನ ವಿದ್ಯಾರ್ಥಿಗಳ ಮೇಲೆ ಒತ್ತಡವಿರುವುದಿಲ್ಲ. ಶಿಕ್ಷಕರು ಪಠ್ಯಕ್ರಮವನ್ನು ಮೀರಿ ವಿದ್ಯಾರ್ಥಿಗಳೊಂದಿಗೆ ಬಾಂಧವ್ಯ ಸ್ಥಾಪಿಸಿದ್ರೆ, ಸಣ್ಣ ಸಮಸ್ಯೆಗಳ ಸಮಯದಲ್ಲಿಯೂ ಅವರು ಒತ್ತಡ ಮುಕ್ತರಾಗಿ ನಿಲ್ಲುತ್ತಾರೆ ಎಂದು ಹೇಳಿದ್ರು…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.5
ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸುವುದು ಶಿಕ್ಷಕರ ಕೆಲಸ
ಎಲ್ಲ ವೈದ್ಯರು ಔಷಧಿಯನ್ನು ಕೊಡ್ತಾರೆ. ಆದ್ರೆ ಕೆಲವು ವೈದ್ಯರು ಹೆಚ್ಚು ಯಶಸ್ವಿಯಾಗುತ್ತಾರೆ. ಯಾಕಂದ್ರೆ ಅವರು ಔಷಧಿ ತೆಗೆದುಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ರೋಗಿಯನ್ನು ಮತ್ತೊಮ್ಮೆ ಕರೆದು ತಪಾಸಣೆ ಮಾಡ್ತಾರೆ. ಈ ಬಂಧ ರೋಗಿಯನ್ನು ಅರ್ಧದಷ್ಟು ಗುಣಪಡಿಸುತ್ತದೆ. ಹೀಗೆ ಶಿಕ್ಷಕರು ಕೂಡ, ವಿದ್ಯಾರ್ಥಿಯ ಕಲಿಕೆಯ ಸಾಮರ್ಥ್ಯವನ್ನು ಬಿಗಿಯಾಗಿಸಬೇಕು. ಶಿಕ್ಷಕರ ಕೆಲಸ ಉದ್ಯೋಗ ಬದಲಿಸುವುದಲ್ಲ. ವಿದ್ಯಾರ್ಥಿಯ ಬದುಕನ್ನು ಬದಲಾಯಿಸುವುದು ಎಂದು ಪ್ರಧಾನಿ ಮೋದಿ ಸಂವಾದದಲ್ಲಿ ಶಿಕ್ಷಕರಿಗೆ ಸಲಹೆ ನೀಡಿದ್ರು…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.6
ಪರೀಕ್ಷೆಗೂ ಮುನ್ನ 10 ನಿಮಿಷ ನಕ್ಕು ತಮಾಷೆ ಮಾಡಿ
ಪರೀಕ್ಷೆಗೂ ಮುನ್ನ ಆರಾಮವಾಗಿ ಕುಳಿತುಕೊಳ್ಳಿ, 5-10 ನಿಮಿಷ ತಮಾಷೆ ಮಾಡಿ ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಹೇಳಿದ್ರು. ನಿಮ್ಮಲ್ಲೇ ನೀವು ಕಳೆದುಹೋಗಿ, ಆಗ ನೀವು ಪರೀಕ್ಷೆಯಿಂದ ಹೊರಬರುತ್ತೀರಿ. ನಂತರ ಪ್ರಶ್ನೆ ಪತ್ರಿಕೆ ನಿಮ್ಮ ಕೈಗೆ ಬಂದಾಗ, ನೀವು ಅದನ್ನು ಆರಾಮವಾಗಿ ಬರೆಯಲು ಸಾಧ್ಯವಾಗುತ್ತದೆ. ಇಲ್ಲಾ ಅಂದ್ರೆ ನಾವು ಬೇರೆ ವಿಷಯಗಳ ಮೇಲೆ ಗಮನ ಕೊಡುತ್ತೇವೆ. ಈ ಮೂಲಕ ನಮ್ಮ ಶಕ್ತಿಯನ್ನು ಅನಗತ್ಯವಾಗಿ ವ್ಯರ್ಥ ಮಾಡುತ್ತೇವೆ. ನಾವು ನಮ್ಮಲ್ಲೇ ಕಳೆದುಹೋಗಬೇಕು. ಬಾಲ್ಯದಿಂದಲೂ ನಾವು ಅರ್ಜುನ್ ಮತ್ತು ಪಕ್ಷಿನೋಟದ ಕಥೆಯನ್ನು ಕೇಳಿದ್ದೇವೆ, ಅದನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮ್ಮ ಆತಂಕಕ್ಕೆ ಕಾರಣವೇನೆಂದರೆ, ಪರೀಕ್ಷೆಯ ಸಮಯದಲ್ಲಿ ನಿಮಗೆ ಸಮಯ ಮೀರಬಹುದು ಅನ್ನೋ ಭೀತಿಯುರುತ್ತೆ. ಆದ್ರೆ ನೀವು ಮೊದಲಿಗೆ ಇಡೀ ಪೇಪರ್ ಅನ್ನು ಓದಿ ಮತ್ತು ನಂತರ ನೀವು ಯಾವುದಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಅನ್ನೋ ಯೋಚನೆ ಬರುತ್ತದೆ ಎಂದು ಹೇಳಿದ್ರು…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.7
ಪರೀಕ್ಷಾ ಹಾಲ್ನಲ್ಲಿ ನಿಮ್ಮ ಮೇಲೆ ವಿಶ್ವಾಸವಿಡಿ
ಇಂದು, ಪರೀಕ್ಷೆಯಲ್ಲಿ ದೊಡ್ಡ ಸವಾಲು ಬರೆಯುವುದು. ಹೀಗಾಗಿ ಅಭ್ಯಾಸದ ಮೇಲೆ ನಿಮ್ಮ ಗಮನವನ್ನು ಇರಿಸಿ. ಪರೀಕ್ಷೆಯ ಮೊದಲು, ವಿಷಯದ ಬಗ್ಗೆ ಅಥವಾ ನೀವು ಓದಿದ್ದನ್ನು ಪದೆ ಪದೆ ಬರೆಯಿರಿ. ಹಾಗೇ ನೀವು ಬರೆದಿದ್ದನ್ನು ಸರಿಪಡಿಸಿಕೊಳ್ಳಿ. ಯಾಕಂದ್ರೆ ನಿಮಗೆ ಈಜಲು ತಿಳಿದಿದ್ದರೆ ನೀರಿಗೆ ಹೋಗುವ ಭಯವಿಲ್ಲ. ಅಭ್ಯಾಸ ಮಾಡುವವನಿಗೆ ತಾನು ಜಯಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ. ಹೀಗಾಗಿ ನೀವು ಎಷ್ಟು ಹೆಚ್ಚು ಬರೆಯುತ್ತೀರೋ ಅಷ್ಟು ತೀಕ್ಷ್ಣತೆ ನಿಮಗೆ ಸಿಗುತ್ತದೆ. ಪರೀಕ್ಷಾ ಹಾಲ್ನಲ್ಲಿ ನೀವು ವೇಗವಾಗಿ ಬರೆಯುತ್ತಿದ್ರೆ, ನಿಮ್ಮ ಅಕ್ಕ ಪಕ್ಕದವರ ಮೇಲೆ ನಿಮಗೆ ಗಮನ ಹೋಗುವುದಿಲ್ಲ. ನೀವು ಪರೀಕ್ಷೆಯ ಮೇಲೆ ಗಮನ ಕೇಂದ್ರಿಕರಿಸುತ್ತೀರಿ. ಹೀಗಾಗಿ ಪರೀಕ್ಷಾ ಹಾಲ್ನಲ್ಲಿ ನೀವು ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.8
ಆರೋಗ್ಯಕರ ಮನಸ್ಸಿಗೆ ಆರೋಗ್ಯಕರ ದೇಹ ಅಗತ್ಯ
ಇನ್ನು ಅತೀಯಾಗಿ ಮೊಬೈಲ್ ಬಳಸುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದ ಪ್ರಧಾನಿ, ನಿಮ್ಮಲ್ಲಿ ಅನೇಕ ವಿದ್ಯಾರ್ಥಿಗಳು ಮೊಬೈಲ್ ಫೋನ್ಗಳನ್ನು ಬಳಸುತ್ತಿರಬಹುದು. ಕೆಲವರು ಗಂಟೆಗಟ್ಟಲೆ ಅವುಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಂಡಿರಬಹುದು. ಆದರೆ ನಾನು ಫೋನ್ ಚಾರ್ಜ್ ಮಾಡದಿದ್ರೆ, ಅದರ ಬಳಕೆ ಕಡಿಮೆಯಾಗುತ್ತದೆ ಎಂದು ನೀವು ಯಾವತ್ತಾದ್ರೂ ಯೋಚಿಸಿದ್ದೀರಾ..? ಮೊಬೈಲ್ ಕೆಲಸ ಮಾಡಲು ಚಾರ್ಜ್ ಮಾಡಬೇಕಾದ್ರೆ, ದೇಹವನ್ನೂ ಚಾರ್ಜ್ ಮಾಡಬೇಕು. ಮೊಬೈಲ್ ಫೋನ್ಗೆ ಚಾರ್ಜಿಂಗ್ ಅಗತ್ಯವಿರುವಂತೆ ದೇಹಕ್ಕೂ ಚಾರ್ಜ್ ಅಗತ್ಯವಿದೆ. ಅದಿಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಜೀವನವನ್ನು ಸ್ವಲ್ಪ ಸಮತೋಲನಗೊಳಿಸಬೇಕು. ನಾವು ಆರೋಗ್ಯವಾಗಿಲ್ಲದಿದ್ದರೆ, ನಾವು ಮೂರು ಗಂಟೆಗಳ ಕಾಲ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗದಿರಬಹುದು. ಹೀಗಾಗಿ ಆರೋಗ್ಯಕರ ಮನಸ್ಸಿಗೆ ಆರೋಗ್ಯಕರ ದೇಹ ಅಗತ್ಯ. ಇದರರ್ಥ ನೀವು ಕುಸ್ತಿ ಮಾಡಬೇಕು ಎಂದಲ್ಲ. ಒಂದು ಪುಸ್ತಕವನ್ನು ತೆಗೆದುಕೊಂಡು ಅದನ್ನು ಸೂರ್ಯನ ಬೆಳಕಿನಲ್ಲಿ ಓದಿ ಏಕೆಂದರೆ ದೇಹವನ್ನು ರೀಚಾರ್ಜ್ ಮಾಡಲು ಸೂರ್ಯನ ಬೆಳಕು ಕೂಡ ಬೇಕಾಗುತ್ತದೆ ಎಂದು ಟಿಪ್ಸ್ ನೀಡಿದ್ರು…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.9
ರೀಲ್ಸ್ ನೋಡಿ ಸಮಯ ವ್ಯರ್ಥಮಾಡಬೇಡಿ..!
ಒಂದರ ಹಿಂದೆ ಒಂದರಂತೆ ರೀಲ್ಸ್ ನೋಡುತ್ತಾ ಹೋದರೆ ಸಮಯ ವ್ಯರ್ಥವಾಗುತ್ತದೆ. ನಿದ್ದೆ ಕೆಡುತ್ತೀರಿ. ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ರು. ನಿದ್ರೆಯನ್ನು ಕಡಿಮೆ ಅಂದಾಜು ಮಾಡಬೇಡಿ. ಆಧುನಿಕ ಆರೋಗ್ಯ ವಿಜ್ಞಾನವು ನಿದ್ರೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಿಮಗೆ ಬೇಕಾದಷ್ಟು ನಿದ್ದೆ ಮಾಡದಿದ್ರೆ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪದೇ ಪದೆ ರೀಲ್ಸ್ ನೋಡಿ ಸಮಯ ವ್ಯರ್ಥ ಮಾಡದೇ ಅಭ್ಯಾಸ ಕಡೆಗೆ ಗಮನ ಕೊಡಿ ಎಂದಿದ್ದಾರೆ…

ಪ್ರಧಾನಿ ನರೇಂದ್ರ ಮೋದಿ ಟಿಪ್ಸ್ – ನಂ.10
ನಿಮ್ಮ ನಿರ್ಧಾರದಲ್ಲಿ ಸ್ಪಷ್ಟತೆ ಇರಲಿ
ಇನ್ನು ಮಕ್ಕಳು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಪ್ರಧಾನಿ ಮೋದಿ ಅದ್ಭುತವಾಗಿ ವಿವರಿಸಿದ್ರು. ಇಂದು ರಾಷ್ಟ್ರೀಯ ಶಿಕ್ಷಣ ನೀತಿಯಿಂದ, ನಿಮಗೆ ಸಾಕಷ್ಟು ಅನುಕೂಲವನ್ನು ತಂದಿದೆ. ನಿಮ್ಮ ಕ್ಷೇತ್ರ ಮತ್ತು ಮಾರ್ಗವನ್ನು ನೀವು ಬದಲಾಯಿಸಬಹುದು. ಆದ್ರೆ ನೀವು ನಿಮ್ಮದೇ ಆದ ಪ್ರಗತಿಯನ್ನು ಸಾಧಿಸಬೇಕು. ಮಕ್ಕಳ ಪ್ರತಿಭೆಯನ್ನು ತೋರ್ಪಡಿಸುವ ರೀತಿಯಲ್ಲಿ ಪೋಷಕರು ಅವರನ್ನು ನೋಡಬೇಕು. ಯಾವುದೇ ಪರಿಸ್ಥಿತಿಯಲ್ಲೂ ನಾವು ನಿರ್ಣಾಯಕರಾಗಿರಬೇಕು. ಇದಕ್ಕೆ ಉದಾಹರಣೆ ಅಂದ್ರೆ, ನೀವು ನಿಮ್ಮ ಕುಟುಂಬದರವೊಂದಿಗೆ ರೆಸ್ಟೋರೆಂಟ್ಗೆ ಹೋದ್ರೆ, ಮೊದಲು ನೀವು ಅಂದುಕೊಂಡಿದ್ದ ಆರ್ಡರ್ ಮಾಡುತ್ತೇನೆ ಎಂದು ಭಾವಿಸಬಹುದು. ಆದ್ರೆ ನಿಮ್ಮ ಪಕ್ಕದ ಟೇಬಲ್ ಮೇಲಿದ್ದ ತಿನಿಸು ನೋಡಿದಾಗ, ನಿಮ್ಮ ಮನಸ್ಸನ್ನು ಬದಲಾಯಿಸುತೀರಿ. ಈ ರೀತಿ ನಿಮಗೆ ಜೀವನದಲ್ಲಿ ತೃಪ್ತಿಯಿಲ್ಲದಂತಾಗುತ್ತೆ. ಡೈನಿಂಗ್ ಟೇಬಲ್ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದವರು, ಎಂದಿಗೂ ಆಹಾರವನ್ನು ಆನಂದಿಸಲು ಸಾಧ್ಯವಿಲ್ಲ. ಹೀಗಾಗಿ ನೀವು ತೆಗೆದುಕೊಳ್ಳುವ ನಿರ್ಣಯದಲ್ಲಿ ಸ್ಪಷ್ಟತೆ ಇರಲಿ ಎಂದು ಹೇಳಿದ್ರು…