ಮನಸ್ಸಿದ್ದರೆ ಮಾರ್ಗ ಉಂಟು.. ಭಲೇ ಬೋಪಣ್ಣ…!  

ಮನಸ್ಸಿನಲ್ಲಿ ಧೃಡ ಸಂಕಲ್ಪ, ಗುರಿ ಸಾಧಿಸಬೇಕೆಂಬ ಛಲ ಇದ್ದರೆ ಹರೆಯ ಎಂದೂ ಅಡ್ಡಬರಲಾರದು . ಹರೆಯ ಎನ್ನುವುದು ಸಂಖ್ಯೆ ಅಷ್ಟೆ ಹೊರತು  ಅದು ವ್ಯಕ್ತಿಯ ಸಾಧನೆಗೆ ಸವಾಲು ಅಲ್ಲ. ಈ ಮಾತಿಗೆ ತಾಜಾ ಉದಾಹರಣೆ ರೋಹನ್ ಬೋಪಣ್ಣ…

43 ರ ಹರೆಯ ಅಂದರೆ ಅದು ಕ್ರೀಡಾಪಟುವೊಬ್ಬನ ಪಾಲಿಗೆ ಸುವರ್ಣ ಕಾಲ ಖಂಡೀತ ಅಲ್ಲ. ಅದರಲ್ಲೂ ದೈಹಿಕ ಸಾಮರ್ಥ್ಯವನ್ನೇ ಪ್ರಮುಖವಾಗಿ ಅವಲಂಬಿತವಾಗಿರುವ ಟೆನಿಸ್ ಕ್ರೀಡೆಯಲ್ಲಿ ಇದು ಪರಿಪಕ್ವ ಹರೆಯ ಖಂಡಿತ ಅಲ್ಲವೇ ಅಲ್ಲ… ಆದರೆ ಈ ಎಲ್ಲಾ ವೈರುದ್ಯಗಳ ನಡುವೆಯೂ ಕೊಡಗಿನ ಕಲಿ ನಮ್ಮ ನಾಡಿನ ಹೆಮ್ಮೆಯ ಕ್ರೀಡಾಪಟು ರೋಹನ್ ಬೋಪಣ್ಣ, ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ತೋರ್ಪಡಿಸಿದ ಉತ್ಕೃಷ್ಟ ಪ್ರದರ್ಶನ, ಟೆನಿಸ್ ಅಭಿಮಾನಿಗಳ ಸೃತಿ ಪಟಲದಲ್ಲಿ ಚಿರಕಾಲ ನೆಲೆ ನಿಲ್ಲುವಂತಾಗಿದೆ…

ಹಲವು ವರ್ಷಗಳಿಂದ ಟೆನಿಸ್ ಕ್ರೀಡೆಗೆ ತಮ್ಮನ್ನು ಸಮರ್ಪಿಸಿಕೊಂಡು, ಡೆವಿಸ್ ಕಪ್ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಾ, ವಿವಿಧ ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಾ, ಕ್ರೀಡಾ ಬದುಕಿನ ಏಳು ಬೀಳುಗಳನ್ನು ಕಂಡು ಪ್ರಭುದ್ದತೆಯ ಸಾಕಾರ ಮೂರ್ತಿ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಅಪಾರ ಅನುಭವವನ್ನು ದಾರೆ ಎರೆದು ಸಹ ಆಟಗಾರ್ತಿಗೆ ಕಾಲಕಾಲಕ್ಕೆ ಸಲಹೆ ಸೂಚನೆ ನೀಡುತ್ತಾ, ಹುರಿದುಂಬಿಸುತ್ತಾ ಮಿಕ್ಸ್ ಡಬಲ್ಸ್ ವಿಭಾಗದಲ್ಲಿ ನಾಡಿಗೆ ಚಿನ್ನದ ಪದಕ ಗಳಿಸಿಕೊಟ್ಟಿದ್ದು ಅವಿಸ್ಮರಣೀಯ…

ಲಿಯಾಂಡರ್ ಪೇಸ್ ಹಾಗೂ ಮಹೇಶ ಭೂಪತಿ ನಂತರ ವಿಶ್ವ ಟೆನಿಸ್ ರಂಗದಲ್ಲಿ ನಾಡಿಗೆ ಕೀರ್ತಿ ತಂದುಕೊಟ್ಟ ಶ್ರೇಯಸ್ಸು ರೋಹನ್ ಬೋಪಣ್ಣ ಅವರದ್ದು. ಆರು ಅಡಿ ನಾಲ್ಕು ಅಂಗುಲ ಎತ್ತರದ ಸಧೃಡ ಶರೀರದ ಅಜಾನುಭಾಹು ಬೋಪಣ್ಣ ತಮ್ಮ ಸುದೀರ್ಘ ಕ್ರೀಡಾ ಬದುಕಿನಲ್ಲಿ ಸಿಂಗಲ್ಸ್‌ಗಿಂತ ಡಬಲ್ಸ್‌ನಲ್ಲಿಯೇ ವಿಶೇಷ ಸಾಧನೆಗೈಯುವುದರೊಂದಿಗೆ ಡಬಲ್ಸ್‌ನ ವಿಶೇಷ ತಜ್ಞ ಎನಿಸಿಕೊಂಡಿದ್ದಾರೆ. ಪಾಕಿಸ್ತಾನದ ಕುರೇಶಿ ಜೊತೆಗೂಡಿ ಬಹುಕಾಲ ಹಲವಾರು ಪಂದ್ಯಾವಳಿಗಳಲ್ಲಿ ಮಿಂಚಿನಂತಹ ಆಟ ಆಡಿ ಅನೇಕ ಪ್ರಶಸ್ತಿಗಳನ್ನು ಗೆದ್ದು ಅಪ್ರತಿಮ ಸಾಧನೆ ಗೈದಿದ್ದಾರೆ. ಈ ಜೋಡಿಯ ಸುಂಟರ ಗಾಳಿಯಂತಹ ಆಟಗಾರಿಕೆಗೆ ಮನಸೋತ ಅಭಿಮಾನಿಗಳು ಅವರನ್ನು ಇಂಡೋ ಪಾಕ್ ಎಕ್ಸ್ ಪ್ರೆಸ್ ಎಂತಲೇ ಮೆಚ್ಚುಗೆಯಿಂದ ಕರೆಯುತ್ತಿದ್ದರು …

ಇಷ್ಟೆಲ್ಲ ಇದ್ದೂ ಗ್ರ್ಯಾನ್‌ ಸ್ಲಾಮ್‌ ಡಬಲ್ಸ್ ಪ್ರಶಸ್ತಿ ಈ ತನಕ ಅವರಿಗೆ ಕೈಗೆಟಕಿರಲಿಲ್ಲ. ಯುಎಸ್ ಓಪನ್‌ನಲ್ಲಿ ಎರಡು ಸಲ ಪೈನಲ್ ಗೆ ಪ್ರವೇಶಿಸಿದ್ದ ಬೋಪಣ್ಣ, ವಿಂಬಲ್ಡನ್‌ನಲ್ಲಿ ಮೂರು ಬಾರಿ ಹಾಗೂ ಪ್ರೆಂಚ್ ಓಪನ್‌ನಲ್ಲಿ ಒಮ್ಮೆ ಸೆಮಿ ಪೈನಲ್ ತನಕ ಸಾಗಿದ್ದರು. ಅದೇ ರೀತಿ ಮಿಕ್ಸ್ ಡಬಲ್ಸ್‌ನಲ್ಲಿ  ಒಮ್ಮೆ ಪ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿ ಗಳಿಸಿದ್ದು, ಎರಡು ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪೈನಲ್ ಪ್ರವೇಶ ಮಾಡಿದ್ದು ಹಾಗೂ ಒಮ್ಮೆ ಯುಎಸ್ ಓಪನ್‌ನಲ್ಲಿ ಸೆಮಿ ಪೈನಲ್ ಪ್ರವೇಶಿಸಿದ್ದು ಅವರ ಇಲ್ಲಿಯವರೆಗಿನ ಶ್ರೇಷ್ಠ ಸಾಧನೆ ಎನಿಸಿದೆ…

ಇತ್ತೀಚೆಗೆ ಮೆಲ್ಬೋರ್ನ್‌ನಲ್ಲಿ ಸಂಪನ್ನಗೊಂಡ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಬೋಪಣ್ಣ, ಮ್ಯಾಥ್ಯೂ ಎಬ್ಡೆನ್ ಎನ್ನುವವರ ಜೊತೆಗೂಡಿ ಅಂಕಣಕ್ಕಿಳಿದು ಅಪ್ರತಿಮ ಆಟಗಾರಿಕೆ ಪ್ರದರ್ಶನ ನೀಡಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಳ್ಳುವುದರ ಮೂಲಕ ತಮ್ಮ ಸುದೀರ್ಘ ಕ್ರೀಡಾ ಬದುಕಿನ ಕನಸನ್ನು ನನಸಾಗಿಸಿಕೊಂಡರು.

ಇದರ ಜೊತೆಯಲ್ಲಿ 43 ರ ಹರೆಯದಲ್ಲಿ ಪ್ರಶಸ್ತಿಯನ್ನ ಗೆದ್ದ ಬೋಪಣ್ಣ , ಈ ಪ್ರಶಸ್ತಿಯನ್ನ ಗಳಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ಐತಿಹಾಸಿಕ ಧಾಖಲೆ ತಮ್ಮದಾಗಿಸಿಕೊಂಡ್ರು. ಈ ಪ್ರಚಂಡ ಆಟ ಹಾಗೂ ಸಾಧನೆಯಿಂದಾಗಿ ಅವರಿಂದು ಡಬಲ್ಸ್‌ನ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಎಂಬ ಗೌರವಕ್ಕೂ ಪಾತ್ರರಾದರು. ಅದೂ ಕೂಡಾ ಅಗ್ರ ಕ್ರಮಾಂಕ ಪಡೆದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯೊಂದಿಗೆ ಈ ಸಾಧನೆಗೆ ಬಾಜನರಾದರು…

ಈ ವಿದ್ಯಾಮಾನಗಳನ್ನೆಲ್ಲ ಅವಲೋಕಿಸಿದರೆ, ವ್ಯಕ್ತಿಯ ಸಾಧನೆಗೆ ಹರೆಯ ಮುಖ್ಯವಲ್ಲ, ಬದಲಾಗಿ ಮನೋಭಲ ಮುಖ್ಯ ಎನ್ನುವ ಸಂಗತಿ  ನಮಗೆ ಮನದಟ್ಟವಾಗುತ್ತದೆ. Hat’s of to Rohan Bhopanna.

ಟಿ.ಜಿ.ಹೆಗಡೆ, ಮಾಜಿ ಕ್ರಿಕೆಟಿಗರು, ಮಾಗೋಡು