ಪಂಚಸೂತ್ರಗಳಿಲ್ಲದೇ ಕ್ರೀಡಾಬದುಕಿನಲ್ಲಿ ಯಶಸ್ಸಿಲ್ಲ…!

ಆಟದ ತೋಟ : ಯಾವುದೇ ಕ್ರೀಡೆ ಆಗಿರಲಿ ಅದರಲ್ಲಿ ತೊಡಗಿಸಿಕೊಂಡಿರುವ ಆಟಗಾರ ವಿಶ್ವಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಬಹುಕಾಲದವರೆಗೆ ಪ್ರತಿಷ್ಠಾಪಿಸಿಕೊಂಡು ಸಾಗಬೇಕೆಂದಾದ್ರೆ, ಆತ ಕ್ರೀಡೆಗೆ ಸಂಬಂಧಿಸಿದ ಕೆಲವು ಮೂಲಭೂತ ಸಂಗತಿಗಳನ್ನು ಮೈಗೂಡಿಸಿಕೊಳ್ಳ ಬೇಕಾದದ್ದು ತೀರಾ ಅತ್ಯಗತ್ಯ. ಅಂದರೆ ಮಾತ್ರ ಆತ ಕ್ರೀಡಾ ಬಾನಂಗಳದಲ್ಲಿ ದ್ರುವತಾರೆಯಂತೆ ಸದಾ ಕಂಗೊಳಿಸಲು ಸಾಧ್ಯ. ಇಲ್ಲದಿದ್ದಲ್ಲಿ ಕ್ಷಣಿಕವಾಗಿ ಪ್ರಜ್ವಲಿಸಿ ಮರೆಯಾಗಿ ಹೋಗುವ ಉಲ್ಕೆ ಎನಿಸಿಕೊಂಡು ಬಿಡುತ್ತಾನೆ.

ಹಾಗಿದ್ದರೆ ಯಾವೆಲ್ಲ ಸಂಗತಿಗಳು ಒಬ್ಬ ಕ್ರೀಡಾಪಟುವನ್ನು “ಪ್ರತಿಭಾನ್ವಿತ” ಎಂಬಲ್ಲಿಂದ “ಪ್ರಭುದ್ಧ” ಎಂಬಲ್ಲಿಯವರೆಗೆ ಕೊಂಡೊಯ್ಯಬಹುದು ಎಂಬುದಾಗಿ ವಿಶ್ಲೇಷಿಸಿ ನೋಡಿದಾಗ ಈ ಕೆಳಗಿನ ಕೆಲವು ಸಂಗತಿಗಳು ಪ್ರಮುಖವಾಗಿ ಗೋಚರಿಸುತ್ತವೆ.

ಪ್ರಥಮವಾಗಿ ತಾಂತ್ರಿಕ ನೈಪುಣ್ಯತೆ (Technic)

ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಯಾವುದೇ ವ್ಯಕ್ತಿ, ಆ ಕ್ಷೇತ್ರದಲ್ಲಿ ಮಹತ್ಸಾಧನೆ ಗೈಯುವ ಗುರಿ ಹೊಂದಿದ್ದಲ್ಲಿ,  ಆ ಕ್ರೀಡೆಯ ತಾಂತ್ರಿಕ ಕೌಶಲ್ಯತೆಯನ್ನು ಚೆನ್ನಾಗಿ ಮನಗಂಡಿದ್ದರೆ ಮಾತ್ರ ಸಾಲದು, ಅದನ್ನು ಮೈಗೂಡಿಸಿಕೊಂಡಿರಬೇಕು.

ತಾಳ್ಮೆ ಹಾಗೂ ಧೃಡ ಸಂಕಲ್ಪ(Patience And Temperament)

ತನ್ನ ಕ್ರೀಡಾ ಪಯಣದ ಮಾರ್ಗದಲ್ಲಿ ಎಷ್ಟೇ ಕಠಿಣ ಸವಾಲುಗಳು ಅಥವಾ ವಿಷಮ ಪರಿಸ್ಥಿತಿ ಎದುರಾದರೂ  ತಾಳ್ಮೆಯನ್ನು ಕಳೆದುಕೊಳ್ಳದೆ, ಮನಸ್ಸಿನಲ್ಲಿ ಮಡುಗಟ್ಟಿರುವ ಸಾಧಿಸಬೇಕೆಂಬ ಧೃಡ ಸಂಕಲ್ಪದಿಂದ ವಿಮುಖನಾಗದೇ ಇರುವಂತ ಮನೋಭಾವ ಹೊಂದಿರಬೇಕು.

ಪ್ರಭುದ್ಧತೆ ಹಾಗೂ ಗಾಂಭೀರ್ಯತೆ (Maturity And Seriousness)

ಪ್ರತಿಸ್ಪರ್ಧಿಗಳ ಕೊಂಕು ವರ್ಥನೆಗಳಿಗೆ ವಿವೇಚನೆ ಕಳೆದುಕೊಳ್ಳದೇ ಗಾಂಭೀರ್ಯದಿಂದಲೇ ವರ್ತಿಸುವ ಹಾಗೂ  ಪಂದ್ಯದಲ್ಲಿ ಎಷ್ಟೇ  ಕಠಿಣ ಪರಿಸ್ಥಿತಿ ಎದುರಾದರೂ ಅದನ್ನು ಸಮಚಿತ್ತದಿಂದ ಎದುರಿಸುವ ಪ್ರಭುದ್ಧತೆಯನ್ನು ಹೊಂದಿರಬೇಕು.

ಸಾಮರ್ಥ್ಯ ಹಾಗೂ ದೌರ್ಬಲ್ಯ ದ ಅರಿವು (Strength And Weakness)

ಮೈದಾನಕ್ಕಿಳಿಯುವ ಪ್ರತಿಯೊಬ್ಬ ಆಟಗಾರರಿಗೂ ತನ್ನ ಸಾಮರ್ಥ್ಯ ಹಾಗೂ ದೌರ್ಬಲ್ಯದ ಬಗ್ಗೆ ಚೆನ್ನಾಗಿ ಅರಿವು ಇರಬೇಕು. ತಂಡದ ಯಶಸ್ಸಿಗೆ ತನ್ನಲ್ಲಿರುವ ಪರಿಮಿತ ಸಾಮರ್ಥ್ಯವನ್ನು ಹೇಗೆ ಸದ್ಬಳಕೆ ಮಾಡಬೇಕೆಂಬ ಬುದ್ಧಿಮತ್ತೆ, ಪರಿಜ್ಞಾನ ಇರಬೇಕು.

ಸಂಭ್ರಮ (Enjoy)

ಆಟಗಾರ ತಾನು ಆಡುವ ಆಟವನ್ನು ಸಂಭ್ರಮಿಸಬೇಕು ಆದರೆ ಸಂಭ್ರಮವೇ ಆಟವಾಗಬಾರದು. ಎಷ್ಟೇ ತಮಾಷೆ, ಕುಹಕಗಳನ್ನು ಮೈದಾನದಲ್ಲಿ ಪ್ರದರ್ಶಿಸಿದರೂ ಅದು ಎಲ್ಲೆ ಮೀರದಂತೇ, ಅವನ ಆಟದ ಮೇಲೆ ದುಷ್ಪರಿಣಾಮ ಬೀರದಂತೇ ಎಚ್ಚರಿಕೆ ವಹಿಸಬೇಕು.

ಇವೆಲ್ಲ ಸಂಗತಿಗಳೊಂದಿಗೆ ಪರೀಶ್ರಮ (Hard Work) ಸಮರ್ಪಣಾ ಮನೋಭಾವ (Dedication), ಏಕಾಗ್ರತೆ (Concentration), ನಿರಂತರತೆ (Consistency) ಈ ಎಲ್ಲಾ ಗುಣ ಸ್ವಭಾವಗಳನ್ನು ಮೈಗೂಡಿಸಿಕೊಂಡಲ್ಲಿ ಮಾತ್ರ ಆಟಗಾರನೊಬ್ಬ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಳ್ಳಬಲ್ಲ.

ಇತ್ತೀಚಿನ ದಿನಗಳಲ್ಲಿ ಭಾರತ ಕ್ರಿಕೆಟ್ ಆಯ್ಕೆ ಸಮಿತಿ ಬಹಳಷ್ಟು  ಯುವ ಪ್ರತಿಭಾನ್ವಿತ ಆಟಗಾರರಿಗೆ ತುಂಬಾ ಅವಕಾಶಗಳನ್ನು ನೀಡುತ್ತಿದೆ. ಆದರೆ ಅವರಲ್ಲಿ ಕೆಲವರನ್ನು ಹೊರತುಪಡಿಸಿದರೆ ಉಳಿದವರು ತಮಗೆ ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಷ್ಟೊಂದು ಯಶಸ್ಸನ್ನು ಗಳಿಸುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣ ಏನೆಂದರೆ ಅವರು ಆಟದ ಮೂಲಭೂತ ಸಂಗತಿಗಳನ್ನು (Basic Things) ತಮ್ಮ ಕ್ರೀಡಾ ಬದುಕಿನಲ್ಲಿ ಅಳವಡಿಸಿಕೊಳ್ಳದಿರುವುದು.

ನಾಡಿಗೆ ಭವಿಷ್ಯದ ಭರವಸೆಯ ತಂಡ ಕಟ್ಟಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಆಯ್ಕೆ ಸಮಿತಿ ಯುವ ಪ್ರತಿಭಾನ್ವಿತರಿಗೆ ಅವಕಾಶ ಒದಗಿಸಿ ಕೊಡುವ ಕ್ರಮ  ಸ್ವಾಗತಾರ್ಹ ಅಂಶ, ಎನಿಸಿದರೂ ಕೂಡಾ ಈ ಅವಸರದಲ್ಲಿ ಕೆಲವು ಹಿರಿಯ, ಅನುಭವಿ, ಧೈಹಿಕ ಕ್ಷಮತೆ ಹಾಗೂ ಕ್ರೀಡಾ ಕ್ಷಮತೆಯಲ್ಲಿ ಇನ್ನೂ ಸಾಕಷ್ಟು ಕಸು ಹೊಂದಿರುವ ,ನಿವೃತ್ತಿಯ ಅಂಚಿನಲ್ಲಿರುವ ಆಟಗಾರರಿಗೆ ಅವಕಾಶ ವಂಚನೆ ಆಗದಂತೆಯೂ ಜಾಗರೂಕತೆ ವಹಿಸಬೇಕು. ಅಂದರೆ ಮಾತ್ರ ಹಳೆಯ ಬೇರಿನ ಮೇಲೆ ಹೊಸ ಚಿಗುರು ಮೂಡಿ ಸೊಗಸಾದ ಮರವನ್ನು ಕಾಣಬಹುದು…

ಟಿ.ಜಿ.ಹೆಗಡೆ, ಮಾಜಿ ಕ್ರಿಕೆಟಿಗರು, ಮಾಗೋಡು