ಹಿರೇಗುತ್ತಿ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸೆಕೆಂಡರಿ ಹೈಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನ

ಕುಮಟಾ: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಗ್ರಾಮೀಣ ಪ್ರತಿಭೆಗಳು ಸಮಾಜದ ಮುನ್ನೆಲೆಗೆ ಬರುತ್ತಾರೆ ಈ ನಿಟ್ಟಿನಲ್ಲಿ ಸೆಕೆಂಡರಿ ಹೈಸ್ಕೂಲ್ ಹಾಗೂ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪಾತ್ರ ಬಹುಮುಖ್ಯವಾಗಿದೆ” ಎಂದು ಕಾಂಗ್ರೇಸ್ ಪಕ್ಷದ ಮುಖಂಡರಾದ ನಿವೇದಿತ್ ಆಳ್ವಾ ನುಡಿದರು.

ಅವರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಹಾಗೂ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಿರೇಗುತ್ತಿಯಲ್ಲಿ ನಡೆದ 2023-2024 ರ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ಕಲಿಕೆಯ ವಾತಾವರಣ ಉತ್ತಮವಾಗಿದೆ. ಸಮುದಾಯದ ಸಹಭಾಗಿತ್ವವಿದೆ. ಈ ಹೈಸ್ಕೂಲ್ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.

ವಿಜ್ಞಾನ ವಸ್ತುಪ್ರದರ್ಶನದ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷ ಶಾಂತಾ ಎನ್ ನಾಯಕ, ಸಾಮಾಜಿಕವಾಗಿ ಉತ್ತಮ ವ್ಯಕ್ತಿತ್ವ ಹೊಂದಿ ಸಮಾಜದ ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕು. ಕೇವಲ ಅಂಕಗಳಿಕೆಗಾಗಿ ಶಿಕ್ಷಣವಿರದೇ ಜೀವನಕ್ಕಾಗಿ, ಸಮಾಜದ ವಿಕಸನಕ್ಕಾಗಿ ಶಿಕ್ಷಣವಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎಸ್ ನಾಯಕ ಮಾತನಾಡಿ, ಸೆಕೆಂಡರಿ ಹೈಸ್ಕೂಲಿನಲ್ಲಿ 285 ವಿದ್ಯಾರ್ಥಿಗಳು ಹಾಗೂ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ ನಲ್ಲಿ 85 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕಲಿಕೆಗೆ ಉತ್ತಮ ವಾತಾವರಣ ಒದಗಿಸಲಾಗಿದೆ ಎಂದರು.

ಶ್ರೀ ಮಹಾಲಸಾ ಸಿದ್ದಿ ವಿನಾಯಕ ಟೆಂಪಲ್ ಟ್ರಸ್ಟ್ ಮಾದನಗೇರಿಯ ಧರ್ಮದರ್ಶಿ ಸುನೀಲ್ ಪೈ ಮಾತನಾಡಿ ಜೀವನದಲ್ಲಿ ಬಾಹ್ಯ ಸೌಂದರ್ಯ ಮುಖ್ಯವಲ್ಲ ಆತ್ಮ ಸೌಂದರ್ಯ ಬಹುಮುಖ್ಯ ಗುರಿ ಮುಟ್ಟಲು ನಂಬಿಕೆ, ದೃಢತೆ ಇರುವುದು ಅವಶ್ಯಕ ಎಂದರು.

ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್, ಉದ್ಯಮಿ ನಾಗರಾಜ ಹಿತ್ತಲಮಕ್ಕಿ ಮಾತನಾಡಿದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನುಷಾ ಹರಿಕಂತ್ರ, ಲಕ್ಷ್ಮೀಶ ಹಳ್ಳೇರ, ದೇವಕಿ ಗೌಡ, ವಿಜ್ಞಾನದ ರಾಜ್ಯ, ರಾಷ್ಟ್ರಮಟ್ಟದ ಸಾಧನೆಗಾಗಿ ವಿಜ್ಞಾನ ಶಿಕ್ಷಕ ಮಹಾದೇವ ಬಿ ಗೌಡ, ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಕುಮಾರಿ ಸಾನಿಕಾ ನಾಯ್ಕ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಸುವರ್ಣ ಭಂಡಾರಕ‌ರ್, ಚೈತನ್ಯ ಮುಕ್ತಿ, ಎನ್.ವಿ ಶ್ರೀನಾಗ, ಸಂಪತ್ ನಾಯ್ಕ ಇವರನ್ನು ಸನ್ಮಾನಿಸಲಾಯಿತು
ಹಿರೇಗುತ್ತಿ ಪದವಿಪೂರ್ವ ಕಾಲೇಜ್ ಪ್ರಾಚಾರ್ಯ ನಾಗರಾಜ ವಿ ಗಾಂವಕರ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಸೆಕ್ರೆಟರಿ ಮೋಹನ ಬಿ ಕೆರೆಮನೆ, ಸದಸ್ಯರಾದ ಎನ್.ಟಿ.ನಾಯಕ, ಮೋಹನ ಗಾಂವಕರ, ರಮಾನಂದ ಪಟಗಾರ, ಭಾಗೀರಥಿ ಹಳ್ಳೇರ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ವೆಂಕಮ್ಮ ಹರಿಕಂತ್ರ, ಸದಸ್ಯರಾದ ಮಂಗಲಾ ಹಳ್ಳರ, ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ, ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಮುಖ್ಯಾಧ್ಯಾಪಕಿ ಸುಮನ್ ಫರ್ನಾಂಡಿಸ್‌ ಉಪಸ್ಥಿತರಿದ್ದರು.
ಚೈತನ್ಯ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಜಾನಕಿ ಗೊಂಡ ವರದಿ ವಾಚಿಸಿದರು. ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ಸ್ವಾಗತಿಸಿದರು. ಶಿಕ್ಷಕ ಎನ್ ರಾಮು ಹಿರೇಗುತ್ತಿ ನಿರೂಪಿಸಿದರು.