ಎರಡನೇ ಟೆಸ್ಟ್​ಗು ಮುನ್ನ ಮೊಹಮ್ಮದ್ ಶಮಿ ಬದಲು ಭಾರತ ತಂಡ ಸೇರಿದ ಆವೇಶ್ ಖಾನ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ. ಸೆಂಚುರಿಯನ್​ನಲ್ಲಿ ಹೀನಾಯ ಸೋಲು ಕಂಡ ಟೀಮ್ ಇಂಡಿಯಾ ಇದೀಗ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ರೋಹಿತ್ ಪಡೆಗೆ ಶುಭಸುದ್ದಿ ಸಿಕ್ಕಿದೆ

ಜನವರಿ 3 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಗಾಯಾಳು ಮೊಹಮ್ಮದ್ ಶಮಿ ಬದಲಿಗೆ ಅವೇಶ್ ಖಾನ್ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆ ಮಾಡಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡಿದೆ. ಅವೇಶ್ ಖಾನ್ ಅವರು ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ತಂಡದ ಭಾಗವಾಗಿದ್ದರು.

ಮೊದಲ ಟೆಸ್ಟ್​ನಲ್ಲಿ ಭಾರತದ ಬೌಲಿಂಗ್ ವಿಭಾಗದಲ್ಲಿ ಜಸ್​ಪ್ರಿತ್ ಬುಮ್ರಾ ಬಿಟ್ಟರೆ ಮತ್ಯಾರು ಪರಿಣಾಮಕಾರಿಯಾಗಿ ಗೋಚರಿಸಲಿಲ್ಲ. ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಟ ಏಕದಿನದಂತೆ ರನ್ ಕೊಟ್ಟಿದ್ದರು. ಇದೀಗ ಆವೇಶ್ ಆಗಮನದಿಂದ ಎರಡನೇ ಟೆಸ್ಟ್​ನಲ್ಲಿ ಬದಲಾವಣೆ ಖಚಿತವಾಗಿದೆ. ಈ ಮೂಲಕ ಆವೇಶ್ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಲಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಆಡುತ್ತಿರುವ ಅವೇಶ್, ಪ್ರಸ್ತುತ ಬೆನೋನಿಯ ವಿಲೋಮೂರ್ ಪಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ನಾಲ್ಕು ದಿನಗಳ ಪಂದ್ಯದಲ್ಲಿ ಭಾರತ ‘ಎ’ ತಂಡದ ಆಡುತ್ತಿದ್ದಾರೆ. ಇಲ್ಲಿ 23.3 ಓವರ್‌ಗಳಲ್ಲಿ 54 ರನ್ 5 ವಿಕೆಟ್ ಕಬಳಿಸಿದ್ದಾರೆ

38 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಅವೇಶ್ 22.65 ರ ಸರಾಸರಿಯಲ್ಲಿ 149 ವಿಕೆಟ್‌ಗಳನ್ನು ಮತ್ತು ಏಳು ಬಾರಿ ಐದು ವಿಕೆಟ್‌ ಕಿತ್ತ ಸಾಧನೆ ಸೇರಿದಂತೆ 3.12 ಎಕಾನಮಿ ರೇಟ್‌ಗಳನ್ನು ಹೊಂದಿದ್ದಾರೆ. 19 T20I ಮತ್ತು ಎಂಟು ODIಗಳನ್ನು ಆಡಿರುವ ಅವೇಶ್ ಇದೀಗ ಟೆಸ್ಟ್ ಕ್ರಿಕೆಟ್​ಗೂ ಕಾಲಿಡಲಿದ್ದಾರೆ.

ಮೊನ್ನೆಯಷ್ಟೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಆರಂಭಿಕ ಏಕದಿನ ಪಂದ್ಯದಲ್ಲಿ ಅವೇಶ್ 4-27 ರ ವೃತ್ತಿಜೀವನದ ಅತ್ಯುತ್ತಮ ಸಾಧನೆ ಮಾಡಿದರು. ಆವೇಶ್ ಅವರು ಎರಡನೇ ಟೆಸ್ಟ್​ನಲ್ಲಿ ಪ್ರಸಿದ್ಧ್ ಕೃಷ್ಣ ಜಾಗದಲ್ಲಿ ಆಡುವ ಸಂಭವವಿದೆ. ಇವರು ಮೊದಲ ಟೆಸ್ಟ್​ನಲ್ಲಿ ದುಬಾರಿಯಾಗಿದ್ದರು.