ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ 15ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಪರ್ತ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾಚರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಮೆಲ್ಬೋರ್ನ್ ತಂಡದ ನಾಯಕ ನಿಕ್ ಮ್ಯಾಡಿನ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಪರ್ತ್ ಸ್ಕಾಚರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಮೊದಲ ಓವರ್ನ 5ನೇ ಎಸೆತದಲ್ಲಿ ಆರಂಭಿಕ ಆಟಗಾರ ಝಾಕ್ ಕ್ರಾಲಿ (1) ಔಟಾದರೆ, ಇದರ ಬೆನ್ನಲ್ಲೇ ಕೂಪರ್ ಕೊನೊಲಿ (0) ವಿಕೆಟ್ ಒಪ್ಪಿಸಿದ್ದರು. ಕೇವಲ 4 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪರ್ತ್ ಸ್ಕಾಚರ್ಸ್ ತಂಡಕ್ಕೆ ಈ ಹಂತದಲ್ಲಿ ನಾಯಕ ಆರೋನ್ ಹಾರ್ಡಿ ಹಾಗೂ ಜೋಶ್ ಇಂಗ್ಲಿಸ್ ಆಸರೆಯಾದರು.
ಮೂರನೇ ವಿಕೆಟ್ಗೆ ಜೊತೆಯಾದ ಹಾರ್ಡಿ (57) ಹಾಗೂ ಜೋಶ್ ಇಂಗ್ಲಿಸ್ (64) ಶತಕದ ಜೊತೆಯಾಟವಾಡಿದರು. ಆ ಬಳಿಕ ಬಂದ ಲಾರಿ ಇವಾನ್ಸ್ 24 ರನ್ಗಳ ಕೊಡುಗೆ ನೀಡಿದರು. ಅಷ್ಟರಲ್ಲಾಗಲೇ ತಂಡದ ಮೊತ್ತ 150 ರನ್ಗಳ ಗಡಿದಾಟಿತು.
ಕೇವಲ 5 ರನ್ಗಳಿಗೆ 7 ವಿಕೆಟ್ ಪತನ:
16 ಓವರ್ಗಳಲ್ಲಿ 155 ರನ್ಗಳ ಗಡಿದಾಟಿದ್ದ ಪರ್ತ್ ಸ್ಕಾಚರ್ಸ್ ತಂಡವು ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿತ್ತು. ಆದರೆ ಡೆತ್ ಓವರ್ಗಳಲ್ಲಿ ಮಿಂಚಿನ ಬೌಲಿಂಗ್ ದಾಳಿ ಸಂಘಟಿಸಿದ ಮೆಲ್ಬೋರ್ನ್ ರೆನೆಗೇಡ್ಸ್ ಬೌಲರ್ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದರು.
ಪರಿಣಾಮ ಪರ್ತ್ ತಂಡವು ಕೇವಲ 5 ರನ್ ಕಲೆಹಾಕುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ 19.4 ಓವರ್ಗಳಲ್ಲಿ 162 ರನ್ಗಳಿಸಿ ಪರ್ತ್ ಸ್ಕಾಚರ್ಸ್ ತಂಡ ಆಲೌಟ್ ಆಗಿದೆ.
ಪಂದ್ಯ ಗೆದ್ದ ಪರ್ತ್ ಸ್ಕಾಚರ್ಸ್:
ಪರ್ತ್ ಸ್ಕಾಚರ್ಸ್ ನೀಡಿದ 163 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ಕುಸಿತಕ್ಕೊಳಗಾಯಿತು.
4ನೇ ಕ್ರಮಾಂಕದಲ್ಲಿ ಶಾನ್ ಮಾರ್ಷ್ 36 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 59 ರನ್ ಬಾರಿಸಿದರೂ ಉಳಿದ ಬ್ಯಾಟರ್ಗಳಿಂದ ಸಾಥ್ ಸಿಕ್ಕಿರಲಿಲ್ಲ. ಅಂತಿಮವಾಗಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 149 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಪರ್ತ್ ಸ್ಕಾಚರ್ಸ್ ತಂಡ 13 ರನ್ಗಳ ರೋಚಕ ಜಯ ಸಾಧಿಸಿದೆ.
ಪರ್ತ್ ಸ್ಕಾಚರ್ಸ್ ಪ್ಲೇಯಿಂಗ್ ಇಲೆವೆನ್: ಕೂಪರ್ ಕೊನೊಲಿ , ಝಾಕ್ ಕ್ರಾಲಿ , ಆರೋನ್ ಹಾರ್ಡಿ (ನಾಯಕ) , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಲಾರಿ ಇವಾನ್ಸ್ , ನಿಕ್ ಹಾಬ್ಸನ್ , ಆಷ್ಟನ್ ಅಗರ್ , ಜ್ಯೆ ರಿಚರ್ಡ್ಸನ್ , ಆಂಡ್ರ್ಯೂ ಟೈ , ಜೇಸನ್ ಬೆಹ್ರೆನ್ಡಾರ್ಫ್ , ಲ್ಯಾನ್ಸ್ ಮೋರಿಸ್.
ಮೆಲ್ಬೋರ್ನ್ ರೆನೆಗೇಡ್ಸ್ ಪ್ಲೇಯಿಂಗ್ ಇಲೆವೆನ್: ಜೋ ಕ್ಲಾರ್ಕ್ , ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ಜೇಕ್ ಫ್ರೇಸರ್- ಮೆಕ್‌ಗುರ್ಕ್ , ನಿಕ್ ಮ್ಯಾಡಿನ್ಸನ್ (ನಾಯಕ) , ಶಾನ್ ಮಾರ್ಷ್ , ಜೊನಾಥನ್ ವೆಲ್ಸ್ , ವಿಲ್ ಸದರ್ಲ್ಯಾಂಡ್ , ಟಾಮ್ ರೋಜರ್ಸ್ , ಕೇನ್ ರಿಚರ್ಡ್ಸನ್ , ಆ್ಯಡಂ ಝಂಪಾ , ಮುಜೀಬ್ ಉರ್ ರೆಹಮಾನ್.