ಕೊಪ್ಪಳ, ಡಿ.23: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟ ರಾಮನ ಬಂಟ ಹನುಮನ ಜನ್ಮಸ್ಥಳ ಅಂತಲೇ ಪ್ರಸಿದ್ಧಿ ಪಡೆದಿದೆ. ನಾಳೆ (ಡಿ.24) ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ದೇಶದ ವಿವಿಧ ಮೂಲೆಗಳಿಂದ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬರಲಿದ್ದಾರೆ. ಹೀಗಾಗಿ ಕೊಪ್ಪಳ ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆಯಿಂದ ಅಂಜನಾದ್ರಿ ಬೆಟ್ಟದಲ್ಲಿ ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹನುಮ ಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟ ಇದೀಗ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ವಿದ್ಯುತ್ ದೀಪಗಳಿಂದ ಅಂಜನಾದ್ರಿ ಬೆಟ್ಟ ಕಂಗೊಳಿಸಿತ್ತಿದ್ದು ನೋಡುಗರ ಕಣ್ಣಿಗೆ ವೈಭವಯುತವಾಗಿ ಕಾಣುತ್ತಿದೆ. ರಾತ್ರಿ ಸಮಯದಲ್ಲಿ ಜಗಮಗಿಸೋ ದೀಪಗಳಲ್ಲಿ ಕಂಗೊಳಿಸಿದ ಅಂಜನಾದ್ರಿ ಬೆಟ್ಟವನ್ನು ನೋಡಿ ಆಂಜನೇಯನ ಭಕ್ತರು ಆನಂದಿಸುತ್ತಿದ್ದಾರೆ.
ಚಾತುರ್ಮಾಸ್ಸದಲ್ಲಿ ರಾವಣನ ವಿರುದ್ಧ ಯುದ್ದಕ್ಕೆ ಹೋಗಲು ಹನುಮ ಸಂಕಲ್ಪವನ್ನು ಮಾಡಿ ತಪಸ್ಸು ಮಾಡುತ್ತಾನೆ. ಇದೇ ಕಾರಣಕ್ಕೆ ಹನುಮನ ಭಕ್ತರು ಚಾತುರ್ಮಾಸದ ಸಮಯದಲ್ಲಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಸಂಕಲ್ಪ ಮಾಡಿ ಹನುಮ ಮಾಲೆಯನ್ನು ಧರಿಸುತ್ತಾರೆ. ಡಿಸೆಂಬರ್ 24 ರಂದು ಅಂಜನಾದ್ರಿ ಬೆಟ್ಟಕ್ಕೆ ಬಂದು ಹನುಮ ಮಾಲೆಯನ್ನು ವಿಸರ್ಜಿಸಲಿದ್ದಾರೆ.
ಕೆಆರ್ಪಿಪಿ ಸಂಸ್ಥಾಪಕ ಮತ್ತು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ನಿನ್ನೆ ಹನುಮ ಮಾಲೆ ಧರಿಸಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಹನುಮ ಮಾಲೆ ಧರಿಸಿದರು. ಕಳೆದ ವರ್ಷ ಹನುಮ ಮಾಲೆ ಧರಿಸಿಯೇ ಗಂಗಾವತಿ ಕ್ಷೇತ್ರದಲ್ಲಿ ಚುನಾವಣೆ ಗೆ ಸ್ಪರ್ಧಿಸೋದಾಗಿ ಜನಾರ್ದನ ರೆಡ್ಡಿ ಘೋಷಿಸಿದ್ದರು. ನಂತರ ಗಂಗಾವತಿ ಕೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.