IPL 2024: ಐಪಿಎಲ್​ನಲ್ಲಿ ಮಹತ್ವದ ಬದಲಾವಣೆ: ಹೊಸ ನಿಯಮ ಜಾರಿ

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಗಾಗಿ ವೇದಿಕೆ ಸಿದ್ಧವಾಗಿದೆ. ಪ್ರಸ್ತುತ ಮಾಹಿತಿ ಪ್ರಕಾರ ಮಾರ್ಚ್ 22 ರಿಂದ ಈ ಬಾರಿಯ ಐಪಿಎಲ್ ಶುರುವಾಗಲಿದೆ. ಅದಕ್ಕೂ ಮುನ್ನ ಐಪಿಎಲ್​ನಲ್ಲಿನ ಕೆಲ ನಿಯಮಗಳನ್ನು ಬದಲಿಸಲು ಬಿಸಿಸಿಐ ಮುಂದಾಗಿದೆ.

ಅದರಂತೆ ಐಪಿಎಲ್ ಸೀಸನ್ 17 ರಲ್ಲಿ ಬೌಲರ್​ಗಳಿಗೆ ಅನುಕೂಲವಾಗುವಂತೆ ಒಂದೇ ಓವರ್​ನಲ್ಲಿ 2 ಬೌನ್ಸರ್ ಎಸೆಯಲು ಅವಕಾಶ ನೀಡಲಾಗುತ್ತದೆ. ಈ ಹಿಂದೆ ಒಂದು ಓವರ್​ನಲ್ಲಿ ಒಂದೇ ಬೌನ್ಸರ್​ ಎಸೆಯಬಹುದಿತ್ತು. 2ನೇ ಬೌನ್ಸರ್ ಅನ್ನು ಅಂಪೈರ್ ನೋ ಬಾಲ್ ಎಂದು ಪರಿಗಣಿಸುತ್ತಿದ್ದರು.

ಆದರೆ ಮುಂದಿನ ಐಪಿಎಲ್​ನಲ್ಲಿ ಒಂದೇ ಓವರ್​ನಲ್ಲಿ 2 ಬೌನ್ಸರ್​ಗಳನ್ನು ಎಸೆಯಲು ಅವಕಾಶವಿರಲಿದೆ. ಈ ಮೂಲಕ ಬ್ಯಾಟ್ಸ್​ಮನ್ ಹಾಗೂ ಬೌಲರ್​ ನಡುವೆ ಸಮನಾದ ಸ್ಪರ್ಧೆಯನ್ನು ಮೂಡಿಸಲು ಬಿಸಿಸಿಐ ಮುಂದಾಗಿದೆ.

ಇದರ ಜೊತೆಗೆ ಈ ಬಾರಿ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಯಲ್ಲಿರಲಿದೆ. ಅಂದರೆ ಟಾಸ್ ಸಮಯದಲ್ಲಿ ತಂಡಗಳು ಪ್ಲೇಯಿಂಗ್ ಇಲೆವೆನ್ ಘೋಷಿಸುವ ವೇಳೆ, 5 ಆಟಗಾರರನ್ನು ಹೆಸರಿಸಬಹುದು. ಈ 5 ಆಟಗಾರರಲ್ಲಿ, ಯಾವುದೇ ಒಬ್ಬ ಆಟಗಾರನನ್ನು ಪಂದ್ಯದ ಮಧ್ಯದಲ್ಲಿ ಮತ್ತೊಬ್ಬ ಆಟಗಾರನ ಬದಲಿಯಾಗಿ ಆಡಿಸಬಹುದಾಗಿದೆ.

ಇಂಪ್ಯಾಕ್ಟ್ ಪ್ಲೇಯರ್​ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ತಂತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪ್ಲೇಯಿಂಗ್ ಇಲೆವೆನ್​ನಿಂದ ಒಬ್ಬ ಆಟಗಾರನನ್ನು ಬದಲಿಸಲು ಅವಕಾಶವನ್ನು ನೀಡಲಾಗುತ್ತದೆ. ಆದರೆ ಈ ನಿಯಮವನ್ನು ಬಳಸಲೇಬೇಕೆಂಬ ನಿಯಮವಿಲ್ಲ. ಅಂದರೆ ಇಂತಹದೊಂದು ಆಯ್ಕೆಯನ್ನು ಪ್ರಯೋಗಿಸುವುದು ತಂಡಕ್ಕೆ ಬಿಟ್ಟ ವಿಷಯ.

ಒಟ್ಟಿನಲ್ಲಿ ಈ ಬಾರಿಯ ಐಪಿಎಲ್​ನ ಓವರ್​ಗಳಲ್ಲಿ 2 ಬೌನ್ಸರ್​ಗಳು ಇರುವುದರಿಂದ ಬ್ಯಾಟ್ಸ್​ಮನ್​ನ ಚಿಂತೆ ಹೆಚ್ಚಾಗಲಿದಂತು ಸತ್ಯ. ಏಕೆಂದರೆ ಈ ಹಿಂದೆ ಒಂದು ಬೌನ್ಸರ್ ಮುಗಿದ ಬಳಿಕ ಮತ್ತೆ ಬೌನ್ಸರ್ ಎಸೆಯುವುದಿಲ್ಲ ಎಂಬುದು ಗೊತ್ತಿರುತ್ತಿತ್ತು. ಆದರೆ ಈ ಬಾರಿ 6 ಎಸೆತಗಳಲ್ಲಿ 2 ಬೌನ್ಸರ್ ಇರುವುದರಿಂದ ಬೌಲರ್​ಗಳು ಪರಿಸ್ಥಿತಿಗೆ ತಕ್ಕಂತೆ ಬೌನ್ಸರ್ ಪ್ರಯೋಗಿಸಲಿದ್ದಾರೆ. ಹೀಗಾಗಿ ಅಂತಿಮ ಓವರ್​ಗಳ ವೇಳೆ ಪಂದ್ಯವು ರೋಚಕತೆ ಪಡೆಯಲಿರುವುದನ್ನು ನಿರೀಕ್ಷಿಸಬಹುದು.