ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ಶ್ರೇಯಾಂಕದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದಿವೆ. ಅದರಂತೆ ಇತ್ತೀಚೆಗಷ್ಟೇ ನಡೆದ ಏಕದಿನ ವಿಶ್ವಕಪ್ ವೇಳೆ ಬ್ಯಾಟರ್ಗಳ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದ ಟೀಂ ಇಂಡಿಯಾದ ಸ್ಟಾರ್ ಓಪನರ್ ಶುಭ್‌ಮನ್ ಗಿಲ್ ಈಗ ಏಕದಿನದಲ್ಲಿ ನಂಬರ್ ಒನ್ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಗಿಲ್ ಬದಲಿಗೆ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಮತ್ತೆ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ವಿಶ್ವಕಪ್ ನಂತರ ಶುಭಮನ್ ಗಿಲ್ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿಲ್ಲ. ಹಾಗೆಯೇ ಬಾಬರ್ ಕೂಡ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿಲ್ಲ. ಆದರೂ ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಮಾತ್ರ ಇಬ್ಬರ ಸ್ಥಾನ ಅದಲು ಬದಲಾಗಿದೆ.
2ನೇ ಸ್ಥಾನಕ್ಕೆ ಕುಸಿದ ಗಿಲ್
ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ರ‍್ಯಾಂಕಿಂಗ್‌ನಲ್ಲಿ 824 ರೇಟಿಂಗ್‌ನೊಂದಿಗೆ ಬಾಬರ್ ಆಝಂ ನಂಬರ್ ಒನ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ವಾಸ್ತವವಾಗಿ ಕಳೆದ ವಾರ ಶ್ರೇಯಾಂಕಗಳು ಬಿಡುಗಡೆಯಾದಾಗಲೂ ಬಾಬರ್ ಅವರ ರೇಟಿಂಗ್ ಒಂದೇ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ಶುಭ್‌ಮನ್ ಗಿಲ್ ಅವರ ರೇಟಿಂಗ್ ಕುಸಿದಿದೆ. ಗಿಲ್ ಅವರ ರೇಟಿಂಗ್ ಕಳೆದ ವಾರ 826 ರಷ್ಟಿತ್ತು, ಅದು ಈಗ 810 ಕ್ಕೆ ಇಳಿದಿದೆ. ಅಂದರೆ ಬಾಬರ್ ಆಝಂ ನಂಬರ್ ಒನ್ ಸ್ಥಾನಕ್ಕೆ ಏರಿದಲ್ಲದೆ, ಗಿಲ್ ಅವರನ್ನು ಭಾರಿ ಅಂತರದಿಂದ ಹಿಂದೆ ಹಾಕಿದ್ದಾರೆ.
ಈಗ ಪ್ರಶ್ನೆ ಏನೆಂದರೆ ಶುಭ್‌ಮಾನ್ ರೇಟಿಂಗ್ ಹೇಗೆ ಕುಸಿಯಿತು? ಎಂಬುದು. ವಾಸ್ತವವಾಗಿ, ಈ ಅವಧಿಯಲ್ಲಿ ಪಾಕಿಸ್ತಾನ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ. ಅದಕ್ಕೇ ಬಾಬರ್ ಆಝಂ ರೇಟಿಂಗ್ ಹೇಗಿತ್ತೋ ಅದೇ ಮುಂದುವರೆದಿದೆ. ಆದರೆ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ಆಡಿದ್ದು, ಈ ಸರಣಿಯಲ್ಲಿ ಶುಭ್‌ಮನ್ ಗಿಲ್ ಆಡಿಲ್ಲ. ಒಂದು ವೇಳೆ ತಂಡ ಏಕದಿನ ಸರಣಿಯನ್ನು ಆಡಿ, ಆಟಗಾರ ಆ ತಂಡದಲ್ಲಿ ಆಡದಿದ್ದರೆ, ಅವನ ರೇಟಿಂಗ್ ಸ್ವಯಂಚಾಲಿತವಾಗಿ ಕುಸಿಯುತ್ತದೆ. ಇದೇ ಕಾರಣಕ್ಕೆ ಬಾಬರ್ಗಿಂತ ಎರಡು ರೇಟಿಂಗ್ ಪಾಯಿಂಟ್ಗಳಿಂದ ಮುಂದಿದ್ದ ಶುಭ್‌ಮನ್ ಗಿಲ್ ಇದೀಗ 14 ಅಂಕ ಹಿಂದೆ ಬಿದ್ದಿದ್ದಾರೆ. ಇದೀಗ ಶುಭ್‌ಮನ್ ಗಿಲ್ ಮೂರನೇ ಏಕದಿನ ಪಂದ್ಯದಲ್ಲೂ ಆಡುವುದಿಲ್ಲ, ಹೀಗಾಗಿ ಮುಂಬರುವ ವಾರಗಳಲ್ಲಿ ಅವರ ರೇಟಿಂಗ್ ಮತ್ತಷ್ಟು ಕುಸಿಯಲಿದೆ.
ಮೂರನೇ ಸ್ಥಾನದಲ್ಲಿ ಕೊಹ್ಲಿ
ಶುಭ್‌ಮನ್ ಗಿಲ್ ಜೊತೆಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ರೇಟಿಂಗ್ ಕೂಡ ಕುಸಿದಿದೆ. ಆದರೆ ಇದಾದ ಬಳಿಕವೂ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರ ರೇಟಿಂಗ್ ಈ ಮೊದಲು 791 ರಷ್ಟಿತ್ತು, ಅದು ಈಗ 775 ಕ್ಕೆ ಇಳಿದಿದೆ. ಆದರೂ ಕೊಹ್ಲಿ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ರೋಹಿತ್ ಶರ್ಮಾ ಅವರ ರೇಟಿಂಗ್ ಮೊದಲು 769 ಆಗಿತ್ತು, ಅದು ಈಗ 754 ಕ್ಕೆ ಇಳಿದಿದೆ. ಡೇವಿಡ್ ವಾರ್ನರ್ ಅವರ ರೇಟಿಂಗ್ ಮೊದಲಿನಂತೆಯೇ ಇದ್ದು, ಅವರು 745 ರೇಟಿಂಗ್‌ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಟಾಪ್ 10 ರಲ್ಲಿ ಇನ್ಯಾರಿದ್ದಾರೆ?
ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡೇರಿಲ್ ಮಿಚೆಲ್ 743 ರೇಟಿಂಗ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಏಳನೇ ಸ್ಥಾನದಲ್ಲಿ ಐರಿಶ್ ಬ್ಯಾಟ್ಸ್‌ಮನ್ ಹ್ಯಾರಿ ಟೆಕ್ಟರ್ ಇದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರೋಸಿ ವ್ಯಾನ್ ಡೆರ್ ಡಸ್ಸೆನ್ 717 ರೇಟಿಂಗ್‌ನೊಂದಿಗೆ ಒಂದು ಸ್ಥಾನವನ್ನು ಕಳೆದುಕೊಂಡಿದ್ದು, 8ನೇ ಸ್ಥಾನಕ್ಕೆ ಜಾರಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲಾನ್ 707 ರೇಟಿಂಗ್‌ನೊಂದಿಗೆ 9 ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ 705 ರೇಟಿಂಗ್‌ನೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ.