ಜ್ಞಾನವಾಪಿ ಮಸೀದಿ ಪ್ರಕರಣ: ಮುಸ್ಲಿಂ ಕಡೆಯ 5 ಅರ್ಜಿಗಳನ್ನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ಉತ್ತರಪ್ರದೇಶ, ಡಿ.19: ಜ್ಞಾನವಾಪಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಹಿಂದೂ ಸಮುದಾಯಕ್ಕೆ ಜಯವಾಗಿದೆ. ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಮರುಸ್ಥಾಪಿಸುವ ಬಗ್ಗೆ ಹಿಂದೂ ಸಮುದಾಯ ಸಲ್ಲಿಸಿದ ಅರ್ಜಿಯನ್ನು ಹಾಗೂ ಬಾಕಿ ಉಳಿದಿರುವ ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಮತ್ತು ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ 5 ಅರ್ಜಿಗಳನ್ನು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ರಾಷ್ಟ್ರೀಯ ಪ್ರಾಮುಖ್ಯತೆ ಹಾಗೂ 1991 ಕಾಯಿದೆ ಅನುಸಾರವಾಗಿ ಧಾರ್ಮಿಕ ಆರಾಧನೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈಗಾಗಲೇ ಈ ಬಗ್ಗೆ ಕಾನೂನತ್ಮಕವಾಗಿ ತನಿಖೆ ಹಾಗೂ ವಿಚಾರಣೆಗಳು ನಡೆಯುತ್ತಿದೆ. ಜ್ಞಾನವಾಪಿ ಮಸೀದಿಯ ಸಮಗ್ರ ಸಮೀಕ್ಷೆಯನ್ನು ನಡೆಸಲು ಏಪ್ರಿಲ್ 8, 2021 ರ ವಾರಣಾಸಿ ನ್ಯಾಯಾಲಯದ ಆದೇಶ ನೀಡಿತ್ತು. ಇದನ್ನು ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ (ಎಐಎಂಸಿ) ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಪ್ರಶ್ನಿಸಿತ್ತು.

ಡಿಸೆಂಬರ್ 8 ರಂದು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಎರಡು ಕಡೆಯ ವಾದವನ್ನು ಆಲಿಸಿದ ನಂತರ ಈ ತೀರ್ಪು ನೀಡಿದ್ದಾರೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ನಿರ್ವಹಣೆಯನ್ನು ನೋಡಿಕೊಳ್ಳುವ ಎಐಎಂಸಿ, ವಾರಣಾಸಿ ನ್ಯಾಯಾಲಯದಲ್ಲಿ ದಾಖಲಾದ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿದೆ, ಇದರಲ್ಲಿ ಹಿಂದೂ ಅರ್ಜಿದಾರರು ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಮರುಸ್ಥಾಪಿಸಲು ಕೋರಿದ್ದಾರೆ.