IPL 2024: ರೋಹಿತ್ ಶರ್ಮಾ ಮೇಲೆ ಕಣ್ಣಿಟ್ಟ ಗುಜರಾತ್ ಟೈಟಾನ್ಸ್

ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೇಡ್ ವಿಂಡೋ ಮೂಲಕ ಖರೀದಿಸಿ ನಾಯಕನ ಪಟ್ಟ ನೀಡಿದೆ.

ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಮಾಜಿ ಕ್ಯಾಪ್ಟನ್​ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲದೆ ಹಿಟ್​ಮ್ಯಾನ್ ಈ ಬಾರಿ ಕೇವಲ ಬ್ಯಾಟರ್​ ಆಗಿ ಮುಂಬೈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅತ್ತ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಪದಚ್ಯುತಿಗೊಳ್ಳುತ್ತಿದ್ದಂತೆ, ಇತ್ತ ಕೆಲ ಫ್ರಾಂಚೈಸಿಗಳು ಹಿಟ್​ಮ್ಯಾನ್​ ಖರೀದಿಗೆ ಆಸಕ್ತಿ ತೋರಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಮುಂದಿಟ್ಟ ಟ್ರೇಡಿಂಗ್ ಆಫರ್​ ಅನ್ನು ಮುಂಬೈ ಇಂಡಿಯನ್ಸ್ ತಿರಸ್ಕರಿಸಿದೆ.

ಇದರ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ಕೂಡ ರೋಹಿತ್ ಶರ್ಮಾ ಅವರ ಖರೀದಿಗೆ ಮುಂದಾಗಿರುವುದು ಬಹಿರಂಗವಾಗಿದೆ. ಹಿಟ್​ಮ್ಯಾನ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಗುಜರಾತ್ ಫ್ರಾಂಚೈಸಿ ಬಯಸಿತ್ತು. ಅದರಂತೆ ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆಯನ್ನೂ ಕೂಡ ನಡೆಸಿದೆ.

ಆದರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾಗಾಗಿ ಮುಂದಿಟ್ಟ ಆಫರ್​ ಅನ್ನೂ ಕೂಡ ಮುಂಬೈ ಇಂಡಿಯನ್ಸ್​ಗೆ ಒಪ್ಪಿಗೆಯಾಗಿರಲಿಲ್ಲ. ಎರಡೂ ಫ್ರಾಂಚೈಸಿಗಳು ಸಹಮತಕ್ಕೆ ಬಾರದ ಕಾರಣ ಇದೀಗ ಈ ಡೀಲ್ ಕೂಡ ಕ್ಯಾನ್ಸಲ್ ಆಗಿದೆ ಎಂದು ವರದಿಯಾಗಿದೆ.

ಇದಾಗ್ಯೂ ರೋಹಿತ್ ಶರ್ಮಾ ಅವರಿಗಾಗಿ ತೆರೆಮರೆಯ ಪ್ರಯತ್ನವಂತು ಮುಂದುವರೆಯಲಿದೆ. ಏಕೆಂದರೆ ಐಪಿಎಲ್ ಹರಾಜಿನ ಬಳಿಕ, ಅಂದರೆ ಡಿಸೆಂಬರ್ 20 ರಿಂದ ಟ್ರೇಡ್ ವಿಂಡೋ ಓಪನ್ ಆಗಲಿದೆ. ಈ ವೇಳೆ ಮತ್ತೆ ಕೆಲ ಫ್ರಾಂಚೈಸಿಗಳು ರೋಹಿತ್ ಶರ್ಮಾ ಖರೀದಿಗಾಗಿ ಮುಂದಾಗುವ ಸಾಧ್ಯತೆಯಿದೆ.

ಅದರಂತೆ ಮುಂಬೈ ಇಂಡಿಯನ್ಸ್ ಜೊತೆ ಯಾವುದಾದರೂ ಫ್ರಾಂಚೈಸಿ ಡೀಲ್ ಕುದುರಿಸಿಕೊಳ್ಳಲು ಯಶಸ್ವಿಯಾದರೆ ರೋಹಿತ್ ಶರ್ಮಾ ಬೇರೊಂದು ತಂಡದ ಪರ ಕಣಕ್ಕಿಳಿಯಬಹುದು. ಹೀಗಾಗಿ ಐಪಿಎಲ್ ಹರಾಜಿನ ಬಳಿಕ ಹಿಟ್​ಮ್ಯಾನ್ ಖರೀದಿಗಾಗಿ ಕೆಲ ಫ್ರಾಂಚೈಸಿಗಳು ಭರ್ಜರಿ ಪ್ಲ್ಯಾನ್ ರೂಪಿಸುವ ಸಾಧ್ಯತೆಗಳಿವೆ.