IPL 2024: ಬೇರೆ ತಂಡದ ಪರ ಕಣಕ್ಕಿಳಿಯಲಿದ್ದಾರಾ ರೋಹಿತ್ ಶರ್ಮಾ? ಇಲ್ಲಿದೆ ಉತ್ತರ

IPL 2024: ಈ ಬಾರಿಯ ಐಪಿಎಲ್​ ಆರಂಭಕ್ಕೂ ಮುನ್ನ ಏನು ಬೇಕಾದರೂ ನಡೆಯಬಹುದು. ಏಕೆಂದರೆ ಕೆಲ ದಿನಗಳ ಹಿಂದೆಯಷ್ಟೇ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ ಆಗಿದ್ದಾರೆ. ಇಂತಹದೊಂದು ಅಚ್ಚರಿಯ ಬದಲಾವಣೆ ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

ಏಕೆಂದರೆ ಹಾರ್ದಿಕ್ ಪಾಂಡ್ಯ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ಸೈಡ್​ ಲೈನ್​ಗೆ ಸರಿದಿರುವುದು ಮುಂಬೈ ಇಂಡಿಯನ್ಸ್​ ತಂಡದ ಯಶಸ್ವಿ ಕ್ಯಾಪ್ಟನ್ ರೋಹಿತ್ ಶರ್ಮಾ. ಮುಂಬೈ ತಂಡವನ್ನು 6 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಿಟ್​ಮ್ಯಾನ್, ಹಾರ್ದಿಕ್ ನಾಯಕತ್ವದಲ್ಲಿ ಆಡಲಿದ್ದಾರಾ ಎಂಬುದೇ ಈಗ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರ- ಇಲ್ಲ ಎನ್ನುವುದಾದರೆ…ಅತ್ತ ರೋಹಿತ್ ಶರ್ಮಾ ಅವರನ್ನು ಖರೀದಿಸಲು ಕೆಲ ಫ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಹಿತ್ ಅವರನ್ನು ಟ್ರೇಡ್​ ಮಾಡಿಕೊಳ್ಳಲು ಮುಂಬೈ ಇಂಡಿಯನ್ಸ್​ ಜೊತೆ ಮಾತುಕತೆ ನಡೆಸಿದೆ. ಆದರೆ ಈ ಮಾತುಕತೆ ಫಲಪ್ರದವಾಗಿಲ್ಲ.

ಇತ್ತ ಇನ್ನೂ ಕೆಲ ಫ್ರಾಂಚೈಸಿಗಳು ರೋಹಿತ್ ಶರ್ಮಾ ಅವರನ್ನು ಟ್ರೇಡ್ ಮಾಡಿಕೊಳ್ಳಲು ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ. ಆದರೆ ಇದೀಗ ಟ್ರೇಡ್ ವಿಂಡೋ ಕ್ಲೋಸ್ ಆಗಿದೆ. ಅಂದರೆ ಐಪಿಎಲ್ ಹರಾಜಿಗೂ ಮುನ್ನ ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಲು ಡಿಸೆಂಬರ್ 12 ರವರೆಗೆ ಗಡುವು ನೀಡಲಾಗಿತ್ತು.

ಆದರೀಗ ಮಿನಿ ಹರಾಜಿನ ಬಳಿಕ ಮತ್ತೆ ಟ್ರೇಡ್ ವಿಂಡೋ ಓಪನ್ ಆಗಲಿದೆ. ಅಂದರೆ ಡಿಸೆಂಬರ್ 19 ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಡಿಸೆಂಬರ್ 20 ರಂದು ಟ್ರೇಡ್ ವಿಂಡೋ ಮತ್ತೆ ಓಪನ್ ಆಗಲಿದೆ. ಈ ಮೂಲಕ ಬೇರೊಂದು ತಂಡದ ಆಟಗಾರರನ್ನು ಇನ್ನೊಂದು ತಂಡ ಟ್ರೇಡ್ ಮಾಡಿ ಖರೀದಿಸಬಹುದು.

ಇತ್ತ ಡಿಸೆಂಬರ್ 20 ರಿಂದ ಟ್ರೇಡ್ ವಿಂಡೋ ಓಪನ್ ಆದರೆ ಮುಂದಿನ ಒಂದು ತಿಂಗಳುಗಳ ಕಾಲ ಆಟಗಾರರ ಖರೀದಿಗೆ ಮತ್ತು ಮಾರಾಟಕ್ಕೆ ಅವಕಾಶ ಇರಲಿದೆ. ಹೀಗಾಗಿಯೇ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಏನು ಬೇಕಾದರೂ ನಡೆಯಬಹುದು ಎಂದಿರುವುದು.

ಇದೀಗ ಐಪಿಎಲ್ ಹರಾಜಿನ ಬಳಿಕ ಮತ್ತೆ ಟ್ರೇಡ್ ವಿಂಡೋ ಓಪನ್ ಆಗುತ್ತಿರುವುದರಿಂದ ಕೆಲ ಫ್ರಾಂಚೈಸಿಗಳು ರೋಹಿತ್ ಶರ್ಮಾ ಅವರ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಐಪಿಎಲ್ ಹರಾಜಿನ ಬಳಿಕ ಹಿಟ್​ಮ್ಯಾನ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಕೆಲ ತಂಡಗಳು ಮುಂದಾಗುವುದು ಖಚಿತ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ ಪ್ರಯತ್ನ ನಡೆಸುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ​ ಪರವೇ ಕಣಕ್ಕಿಳಿಯಲಿದ್ದಾರೆ ಎನ್ನಲಾಗುವುದಿಲ್ಲ. ಬದಲಾಗಿ ಮುಂದಿನ ಒಂದು ತಿಂಗಳೊಳಗೆ ರೋಹಿತ್ ಶರ್ಮಾ ಅವರನ್ನು ಬೇರೊಂದು ತಂಡ ಟ್ರೇಡ್ ಮಾಡಿಕೊಳ್ಳಲು ಯಶಸ್ವಿಯಾದರೆ ಐಪಿಎಲ್ 2024 ರಲ್ಲಿ ಹಿಟ್​ಮ್ಯಾನ್ ಹೊಸ ಜೆರ್ಸಿಯಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿಯೇ ಈ ಬಾರಿಯ ಐಪಿಎಲ್​ನಲ್ಲಿ ಏನು ಬೇಕಾದರೂ ನಡೆಯಬಹುದು.