ಹುಬ್ಬಳ್ಳಿ, (ಡಿಸೆಂಬರ್ 15): ಹಳೇ ಹುಬ್ಬಳ್ಳಿಯಲ್ಲಿ ಗಲಭೆ ಪ್ರಕರಣದಲ್ಲಿ ಮತ್ತೆ 35 ಆರೋಪಿಗಳಿಗೆ ಜಾಮೀನು ದೊರೆತಿದೆ. ವಾಟ್ಸಾಪ್ ಸ್ಟೇಟಸ್ ವಿಚಾರವಾಗಿ 2022ರ ಏಪ್ರಿಲ್ 16ರಂದು ಹಳೇ ಹುಬ್ಬಳ್ಳಿಯಲ್ಲಿ ಎರಡು ಕೋಮುಗಳ ನಡುವೆ ಗಲಾಟೆಯಾಗಿತ್ತು. ಈ ಪ್ರಕರಣಕ್ಕೆ ಸಬಂಧಿಸಿದಂತೆ 35 ಆರೋಪಿಗಳಿಗೆ ಇಂದು(ಡಿಸೆಂಬರ್ 15) ಸುಪ್ರೀಂಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ಒಟ್ಟು 152 ಆರೋಪಿಗಳ ಬಂಧನವಾಗಿದ್ದು, ಈ ಹಿಂದೆ ಕೆಲ ಬಾಲಾಪರಾಧಿಗಳು ಸೇರಿ 10ಕ್ಕೂ ಹೆಚ್ಚು ಮಂದಿಗೆ ಜಾಮೀನು ಸಿಕ್ಕಿತ್ತು. ಮೊನ್ನೇ ಸೋಮವಾರ ಅಷ್ಟೇ ಬಂಧಿತರಾಗಿದ್ದ ಸಿಕಂದರ್ ಮತ್ತು ಇರ್ಫಾನ್ ನಾಲತವಾಡ ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಇದೀಗ 35 ಆರೋಪಿಗೂ ಸಹ ಜಾಮೀನು ಸಿಕ್ಕಿದೆ.
ಏನಿದು ಹುಬ್ಬಳ್ಳಿ ಗಲಭೆ ಪ್ರಕರಣ?
ಮಸೀದಿ ಮೇಲೆ ಭಗವಾಧ್ವಜ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕೆ ಏಪ್ರಿಲ್ 16, 2022ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಗಲಭೆ ನಡೆದಿತ್ತು. ಸಾವಿರಾರು ಮುಸ್ಲಿಮರು ಪೊಲೀಸ್ ಠಾಣೆ ಮುಂದೆ ಸೇರಿ ಗಲಾಟೆ ನಡೆಸಿದ್ದರು. ಈ ವೇಳೆ ಬೆಂಗಳೂರಿನ ಡಿಜೆ ಹಳ್ಳಿ-ಕೆಜೆ ಹಳ್ಳಿ ಪ್ರಕರಣದ ರೀತಿ ಪೊಲೀಸ್ ಠಾಣೆ, ಆಸ್ಪತ್ರೆ, ದೇವಸ್ಥಾನ, ಮನೆಗಳ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು. ಘಟನೆಯಲ್ಲಿ ಗಲಾಟೆಯಲ್ಲಿ 10ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂಗೊಂಡಿದ್ದು, ಇನ್ಸ್ಪೆಕ್ಟರ್ ಸೇರಿ 7 ಸಿಬ್ಬಂದಿ ಮೇಲೆ ಹಲ್ಲೆಯಾಗಿತ್ತು. ಈ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇನ್ನು ಈ ಗಲಭೆ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳು ದಾಖಲಾಗಿದ್ದು, ಒಟ್ಟು 152 ಆರೋಪಿಗಳ ಬಂಧನವಾಗಿತ್ತು.
ಪ್ರಕರಣ ಕೈ ಬಿಡಲು ಪತ್ರ ಬರೆದಿದ್ದ ಡಿಕೆಶಿ
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಕೈಬಿಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಡಿಕೆಶಿ ಅವರ ಪತ್ರ ಆಧರಿಸಿ ಪ್ರಕರಣದ ಮಾಹಿತಿಯನ್ನು ಸಲ್ಲಿಸುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಗೆ ಎಡಿಜಿಪಿ ಸೂಚಿಸಿದ್ದರು. ಪ್ರಕರಣ ಹಿಂಪಡೆಯುವ ಬಗ್ಗೆ ದಾಖಲೆ ಸಹಿತ ಅಭಿಪ್ರಾಯ ಹಾಗೂ ಸೆಪ್ಟೆಂಬರ್ 30ರೊಳಗೆ ಪ್ರಕರಣದ ಪೂರ್ಣ ವಿವರವನ್ನು ನೀಡುವಂತೆ ಸೂಚನೆ ಕೂಡ ನೀಡಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ ಅವರು ಗೃಹ ಇಲಾಖೆಗೆ ಪತ್ರ ಬರೆದಿರುವ ವಿಚಾರ ಸುದ್ದಿ ಆಗುತ್ತಿದಂತೆ ಬಿಜೆಪಿ ನಾಯಕರಿಂದ ಆಕ್ರೋಶ ವ್ಯಕ್ತವಾಗಿತ್ತು.