ಲೋಕಸಭೆ ಭದ್ರತಾ ಲೋಪ: ಮನೋರಂಜನ್ ಮನೆಗೆ 2 ಬಾರಿ ಬಂದಿದ್ದ ಸಾಗರ್ ಶರ್ಮಾ

ಮೈಸೂರು, ಡಿಸೆಂಬರ್ 15: ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹಾಗೂ ಮೈಸೂರು ಪೊಲೀಸರಿಂದ ತನಿಖೆಗಳು ನಡೆಯುತ್ತಿದ್ದು ಆರೋಪಿ ಮನೋರಂಜನ್ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಇದೇ ವೇಳೆ, ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಮೈಸೂರಿನಲ್ಲಿರುವ ಮನೋರಂಜನ್ ನಿವಾಸಕ್ಕೆ 2 ಬಾರಿ ಬಂದುಹೋಗಿದ್ದ ಎಂಬುದು ತಿಳಿದುಬಂದಿದೆ.

ಸಾಗರ್ ಬಗ್ಗೆ ಮನೋರಂಜನ್ ತನ್ನ ತಂದೆ, ತಾಯಿಗೂ ಸುಳ್ಳು ಹೇಳಿದ್ದ. ಕಾಲೇಜಿನ ಸಹಪಾಠಿ ಎಂದು ಪರಿಚಯಿಸಿದ್ದ. ಮೈಸೂರಿನ ವಿಜಯನಗರದಲ್ಲಿರುವ ಡಿ.ಮನೋರಂಜನ್ ಮನೆಗೆ ಸಾಗರ್​ ಶರ್ಮಾ ಎರಡು ಬಾರಿ ಬಂದಿದ್ದು, ಮನೆಯಲ್ಲಿ ಊಟ ಮಾಡಿ ಹೋಗಿದ್ದ. ಆತ ಆಟೋ ಚಾಲಕನಾಗಿದ್ದರೂ ಸಹಪಾಠಿ ಎಂದು ಮನೋರಂಜನ್​ ಸುಳ್ಳು ಹೇಳಿದ್ದ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ.

ಸಾಗರ್ ಶರ್ಮ ಮೈಸೂರಿನಲ್ಲಿ ಎಲ್ಲೆಲ್ಲಿ ಓಡಾಡಿದ್ದ, ಬೇರೆ ಯಾರನ್ನೆಲ್ಲ ಸಂಪರ್ಕ ಮಾಡಿದ್ದ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಮೈಸೂರಿಗೆ ಬಂದು ಹೋಗಿದ್ದನ್ನು ಮನೋಹರ್ ಕುಟುಂಬಸ್ಥರು ಕೂಡ ಖಚಿತ ಪಡಿಸಿದ್ದಾರೆ.

ಮೈಸೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸ ಕೂಡ ಇರುವುದರಿಂದ ಮತ್ತಷ್ಟು ಆತಂಕ‌‌ ವ್ಯಕ್ತವಾಗಿದೆ. ಸಾಗರ್ ಶರ್ಮಾ ಮೈಸೂರಿಗೆ ಎರಡು ಬಾರಿ ಬಂದಿದ್ದರ ಉದ್ದೇಶ ಏನು ಎನ್ನುವುದರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಮೈಸೂರಿನಲ್ಲಿ ಬಿಗಿ ಭದ್ರತೆ

ಲೋಕಸಭೆ ಭದ್ರತಾ ಉಲ್ಲಂಘನೆ ವಿಚಾರವಾಗಿ ಒಬ್ಬ ಆರೋಪಿಯ ಮನೆ ಇರುವ ಹಾಗೂ ಮತ್ತೊಬ್ಬ ಆರೋಪಿ ಓಡಾಡಿದ್ದ ಮೈಸೂರಿನಲ್ಲಿ ಬಿಗಿ ಭದ್ರತೆ ಮುಂದುವರಿಸಲಾಗಿದೆ. ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರೋ ಆರೋಪಿ ಮನೋರಂಜನ್ ನಿವಾಸಕ್ಕೆ ಕೂಡ ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ.

ಈ ಮಧ್ಯೆ, ಮನೋರಂಜನ್ ಹಿನ್ನೆಲೆ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಆದರೆ ಮನೋರಂಜನ್ ಲೋಕಸಭಾ ಕಲಾಪಕ್ಕೆ ದಾಳಿ ಮಾಡಿದ್ದು ಯಾಕೆಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆತ ಈಗಾಗಲೇ ದೆಹಲಿ ಪೊಲೀಸರ ವಶದಲ್ಲಿದ್ದಾನೆ.

ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ

ಸಂಸತ್‌ನಲ್ಲಿ ಕೋಲಾಹಲ ನಡೆಸಿದ ಯುವಕರಿಗೆ ಪಾಸ್ ನೀಡಿದ ವಿಚಾರವಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರಿನಲ್ಲಿ ಶುಕ್ರವಾರವೂ ಪ್ರತಿಭಟನೆ ನಡೆದಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಸದಸ್ಯರು ಪ್ರತಾಪ್ ಸಿಂಹ ಕೈಯಲ್ಲಿ ಬಾಂಬ್ ಹಾಗೂ ಪಾಸ್ ಹಿಡಿದ ಭಾವಚಿತ್ರದ ಫ್ಲೆಕ್ಸ್ ಅನ್ನು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಹಾಕಿದ್ದಾರೆ. ಇದೀಗ ಪಾಲಿಕೆ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಲು ಮುಂದಾಗಿದ್ದಾರೆ.