ಚಾಮರಾಜನಗರ, ಡಿಸೆಂಬರ್ 13: ಬುಡಕಟ್ಟು ವ್ಯಕ್ತಿಯೊಬ್ಬರು ನಾಪತ್ತೆಯಾದ ಒಂದು ದಿನದ ನಂತರ ಅವರ ಅರ್ಧ ದೇಹವು ಮಂಗಳವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪತ್ತೆಯಾಗಿದೆ. ಹುಲಿ ದಾಳಿಯಿಂದ ಅವರು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅರ್ಧ ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯನ್ನು ಬಸವ (54) ಎಂದು ಗುರುತಿಸಲಾಗಿದೆ.
ಬಸವ ಅವರು ಚಾಮರಾಜನಗರ ಜಿಲ್ಲೆಯ ಆಡಿನಕಣಿವೆ ಹಾಡಿಯ ಬಳಿ ಬಿಟಿಆರ್ ವ್ಯಾಪ್ತಿಯಲ್ಲಿ ಉರುವಲು ಸಂಗ್ರಹಿಸಲು ಮತ್ತು ಜಾನುವಾರುಗಳನ್ನು ಮೇಯಿಸಲು ಹೋಗಿದ್ದಾಗ ಗುಲಿ ದಾಳಿ ಮಾಡಿರು ಸಾಧ್ಯತೆ ಇದೆ. ಬಸವ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಬಸವನ ಅವರ ಸಾವಿನ ಸುದ್ದಿ ಹೊರಬಿದ್ದ ನಂತರ, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಸವ ಅವರು ಅರಣ್ಯ ಅತಿಕ್ರಮಣ ಮಾಡಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ಘೋಷಿಸಲು ಅರಣ್ಯಾಧಿಕಾರಿಗಳು ನಿರಾಕರಿಸಿದ್ದರು. ಇದರಿಂದ ಗ್ರಾಮಸ್ಥರು ಅಸಮಾಧಾನಗೊಂಡು ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಕ್ರಿಯೆ ವಿಳಂಬವಾಯಿತು.
ಸಂತ್ರಸ್ತ ವ್ಯಕ್ತಿಯ ಕುಟುಂಬದವರಿಗೆ ಆರ್ಥಿಕ ಪರಿಹಾರ ನೀಡುವ ಕುರಿತು ಸರ್ಕಾರದಿಂದ ಮುಂದಿನ ನಿರ್ದೇಶನವನ್ನು ಕೋರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಮಾನವೀಯತೆಯ ಆಧಾರದ ಮೇಲೆ ಸಂತ್ರಸ್ತ ಕುಟುಂಬಕ್ಕೆ ಬಿಟಿಆರ್ ನಿರ್ದೇಶಕ ಪಿ ರಮೇಶ್ ಕುಮಾರ್ ಅವರು 2 ಲಕ್ಷ ರೂ ಚೆಕ್ ವಿತರಿಸಿದ್ದಾರೆ ಎಂದು ವರದಿಯಾಗಿದೆ.
ಕಲ್ಲಹಳ್ಳಿಯಲ್ಲಿ ಹುಲಿ ದಾಳಿ
ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿಯಲ್ಲಿ ಮಂಗಳವಾರ ರಾತ್ರಿ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಕಲ್ಲಹಳ್ಳಿ-ಸಂಪಿಗೆಪುರ ಮಾರ್ಗದಲ್ಲಿ ಹುಲಿ ಸಂಚರಿಸುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಪದೇ ಪದೆ ಹುಲಿ ಕಾಣಿಸಿರುವ ಕಾರಣ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.