ಅದು ಹಲವು ದಶಕಗಳಿಂದ ಗೋವುಗಳು ಮೇಯಲು ಮೀಸಲಿಟ್ಟಿದ್ದ ಜಾಗ . ಸರ್ಕಾರಿ ದಾಖಲೆಗಳಲ್ಲೂ ಗೋರಸ್ಥಾನ ಎಂದೇ ನಮೂದಾಗಿದ್ದು ಗ್ರಾಮಸ್ಥರು ಅದು ಹಾಗೆಯೇ ಇದೆ ಅಂದುಕೊಂಡಿದ್ದರು. ಆದರೆ ಇದೀಗ ಏಕಾಏಕಿ ಆ ಜಾಗ ಯಾರ ಗಮನಕ್ಕೂ ಬಾರದೇ ಸಮುದಾಯವೊಂದರ ಖಬರಸ್ತಾನವಾಗಿ ತಿದ್ದುಪಡಿಯಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕ ಪ್ರದೇಶವನ್ನ ಒಂದು ಕೋಮಿಗೆ ಸೀಮಿತಗೊಳಿಸಿದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹೌದು, ಕಾಳುಮೆಣಸಿನ ರಾಣಿ ಚೆನ್ನಾಭೈರಾದೇವಿ ಆಳಿದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಐತಿಹಾಸಿಕ ಮಿರ್ಜಾನ್ ಕೋಟೆ ಇಂದಿಗೂ ತನ್ನ ಇತಿಹಾಸಿಕ ವೈಭವವನ್ನ ಕೋಟೆ ಮೂಲಕ ಸಾರುತ್ತಿದೆ. ಆದರೆ ಇಂತಹ ಐತಿಹಾಸಿಕ ಸ್ಥಳದಿಂದ ಕೆಲವೇ ಕಿಮೀ ದೂರದಲ್ಲಿರುವ ಜಾಗದ ನೂರಾರು ವರ್ಷಗಳ ಹಿಂದಿನ ಭೂದಾಖಲೆಗಳು ಇದ್ದಕ್ಕಿದ್ದಂತೆ ತಿದ್ದುಪಡಿಯಾಗಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮಿರ್ಜಾನ್ ಪಂಚಾಯಿತಿಯ ಹೆದ್ದಾರಿಯ ಪಕ್ಕದ ಸರ್ವೇ ನಂ.238ರಲ್ಲಿ 9 ಎಕರೆ 12 ಗುಂಟೆ ಜಾಗ ಗೋರಸ್ಥಾನ ಎಂದು ನಮೂದಾಗಿತ್ತು. 1932 ರಿಂದಲೂ ಇದೇ ಹೆಸರಿನಲ್ಲಿದ್ದ ಪಕ್ಕದ ಸರ್ವೆ ನಂಬರಿನ ಜಾಗವನ್ನ ಸರ್ಕಾರಿ ಶಾಲೆ ನಿರ್ಮಾಣಕ್ಕೂ ನೀಡಲಾಗಿದೆ. ಖಾಲಿ ಇದ್ದ ಜಾಗದಲ್ಲಿ ಗೋವುಗಳು ಮೇಯಲು ಹಾಗೂ ಶಾಲಾ ಮಕ್ಕಳ ಕ್ರೀಡಾಂಗಣವಾಗಿ ಬಳಕೆಯಾಗಿತ್ತು. ಆದರೆ ಇದೀಗ ಈ ಜಾಗವನ್ನು ಕಳೆದ 18 ವರ್ಷದ ಹಿಂದೆ ಖಬರಸ್ಥಾನವನ್ನಾಗಿ ಮಾಡಲಾಗಿದೆ.
ಮಿರ್ಜಾನದ ನಾಡಕಚೇರಿಗೆ 2005ರಲ್ಲಿ ಬಂದ ಕಂದಾಯ ನಿರೀಕ್ಷಕ ಎಂಎ ಖಾನ್, ತಹಸೀಲ್ದಾರ್ ಮಿರಾಂಡಾ ಹಾಗೂ ಉಪತಹಸೀಲ್ದಾರ್ ಶೇಕ್ ಎನ್ನುವವರು ಈ ದಾಖಲೆಗಳನ್ನ ತಿದ್ದುಪಡಿ ಮಾಡಿದ್ದಾರೆ. ಬಳಿಕ ಅಧಿಕಾರಿಗಳು ಇನ್ನೊಂದು ಹೆಜ್ಜೆ ಮುಂದುವರೆದು 2017-18 ರಲ್ಲಿ ಹಜರತ್ ಕಾಕಾ ತೋಫಿಕ್ ಹಾಗೂ ಕಾಕಾ ರಫೀಕ್ ಅವರ ದರ್ಗಾ ಅಥವಾ ಖಬರಸ್ಥಾನ್ ಎಂದು ದಾಖಲು ಮಾಡಿದ್ದಾರೆ. ಇದೀಗ ಈ ವಿಷಯ ಸಾರ್ವಜನಿಕರ ಗಮನಕ್ಕೆ ಬಂದಿದೆ. ಆದರೆ ಸಾರ್ವಜನಿಕರ ಗಮನಕ್ಕೆ ತಾರದೇ ಈ ರೀತಿ ಗೋರಕ್ಷಕ ಜಾಗವನ್ನ ಈ ರೀತಿ ಬದಲು ಮಾಡಿದ್ದಾಗಿ ಸ್ಥಳೀಯರು ಖಂಡಿಸಿದ್ದಾರೆ.
ಇನ್ನು ನೂರಾರು ವರ್ಷಗಳಿಂದ ಗೋವುಗಳ ಬಳಕೆಗಾಗಿ ಗೋರಸ್ಥಾನ ಇರುವುದನ್ನ ಒಂದೇ ಕೋಮಿನ ಅಧಿಕಾರಿಗಳು ಒಟ್ಟಾಗಿ ಈ ರೀತಿ ತಿದ್ದುಪಡಿ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರ ಗಮನಕ್ಕೂ ಬಂದಿಲ್ಲ. ಅಲ್ಲದೇ ಸರ್ಕಾರಿ ನಿಯಮದಂತೆ ಒಂದು ಸಮುದಾಯದ ಸ್ಮಶಾನಗಳಿಗೆ ಗರಿಷ್ಠ 20 ಗುಂಟೆ ಭೂಮಿ ಮಾತ್ರ ನೀಡಬಹುದಾಗಿದೆ.
ಆದರೆ ಇಲ್ಲಿ ದಾಖಲೆಗಳನ್ನ ತಿದ್ದುಪಡಿ ಮಾಡಿ ಬರೋಬ್ಬರಿ 9 ಎಕರೆ ಜಾಗಕ್ಕೆ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಇದರಿಂದ ಶಾಲೆಯ ಮಕ್ಕಳಿಗೆ ಓಡಾಟ ನಡೆಸಲು, ಆಟ ಆಡಲು, ಗೋವುಗಳಿಗೆ ಮೇಯಲು ಸ್ಥಳವೇ ಇಲ್ಲದಂತಾಗಿದೆ. ಕೂಡಲೇ ಜಿಲ್ಲಾಡಳಿತ ಪ್ರಕರಣದಲ್ಲಿ ಇರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಲ್ಲಿನ ಎಲ್ಲಾ ಅನಧಿಕೃತ ಕಟ್ಟಡಗಳನ್ನ ತೆಗೆಯಬೇಕು. ಇಲ್ಲದಿದ್ದಲ್ಲಿ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ.