ಬೆಳಗಾವಿ, ಡಿಸೆಂಬರ್ 12: ಕಳೆದ ವಿಧಾನಸಭೆ ಚುನಾವಣೆ ವೇಳೆ ವರುಣಾ ಕ್ಷೇತ್ರದ ಮತದಾರರಿಗೆ ಸಿಎಂ ಸಿದ್ದರಾಮಯ್ಯ ಕುಕ್ಕರ್, ಐರನ್ ಬಾಕ್ಸ್ ಹಂಚಿಕೆ ಮಾಡಿದ್ದರೆಂಬ ಆರೋಪಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳದ ರಾಜ್ಯ ಚುನಾವಣಾಧಿಕಾರಿ ವಿರುದ್ಧ ಆರ್‌ಟಿಐ ಕಾರ್ಯಕರ್ತರೊಬ್ಬರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ರಾಜ್ಯ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿತ್ತು. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅರೋಪಿಸಿದ್ದಾರೆ. ಜತೆಗೆ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮೇಲೆ ಕ್ರಮ ಜರುಗಿಸಲು ಒತ್ತಾಯಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ವಿಚಾರವಾಗಿ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಭೀಮಪ್ಪ ಗಡಾದ್, ಕೇಂದ್ರ ಚುನಾವಣಾ ಆಯೋಗವೂ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದಾಖಲೆ ಸಮೇತ ದೂರು ನೀಡಿದರೂ ರಾಜ್ಯ ಚುನಾವಣೆ ಆಯೋಗದ ಮುಖ್ಯ ಚುನಾವಣಾಧಿಕಾರಿ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ, ‘ದೂರು ಅರ್ಜಿಯ ಕುರಿತು ಭಾರತ ಚುನಾವಣೆ ಆಯೋಗದ ಮಾರ್ಗದರ್ಶನ ಕೋರಲಾಗಿದೆ’ ಎಂದು ಲಿಖಿತ ಉತ್ತರ ನೀಡಿದ್ದಾರೆ. ಐರನ್ ಬಾಕ್ಸ್, ಕುಕ್ಕರ್ ಹಂಚಿದ್ದರಿಂದ ನಮ್ಮ ತಂದೆ ಗೆದ್ದಿದ್ದರು ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಯತೀಂದ್ರ ಸಿದ್ದರಾಮಯ್ಯ ಭಾಷಣದ ವಿಡಿಯೋ ವೈರಲ್ ಆಗಿತ್ತು ಎಂದು ಭೀಮಪ್ಪ ಗಡಾದ್ ಹೇಳಿದ್ದಾರೆ.
ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಆಗಿದ್ದು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೆವು. ಸೆಪ್ಟೆಂಬರ್ 21ರಂದು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದ್ದೆವು. ಇದಕ್ಕೆ, ಅಕ್ಟೋಬರ್ 4ರಂದು ದೂರು ಅರ್ಜಿ ಬಗ್ಗೆ ಕೇಂದ್ರ ಚುನಾವಣೆ ಆಯೋಗದ ಮಾರ್ಗದರ್ಶನ ಕೇಳಿದ್ದಾಗಿ ಲಿಖಿತ ಉತ್ತರ ನೀಡಿದ್ದಾರೆ. ಕೇಂದ್ರ ಚುನಾವಣೆ ಆಯೋಗದ ಮಾರ್ಗದರ್ಶನ ಕೋರಿ ಬರೆದ ಪತ್ರದ ನಕಲು ಪ್ರತಿ ನೀಡುವಂತೆ ಡಿಸೆಂಬರ್ 1ರಂದು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದೆವು. ಆಗ, ಆಯೋಗದಿಂದ ಕೋರಲಾದ ಮಾರ್ಗದರ್ಶನಕ್ಕೆ ಸಂಬಂಧಿಸಿದ ಪ್ರತಿ ಇನ್ನೂ ಸ್ವೀಕೃತವಾಗಿಲ್ಲ. ಸ್ವೀಕೃತವಾದ ಬಳಿಕ ಮಾಹಿತಿ ನೀಡುವುದಾಗಿ ಲಿಖಿತ ಉತ್ತರ ನೀಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಹೀಗಾಗಿ ಕೇಂದ್ರ ಚುನಾವಣೆ ಆಯೋಗಕ್ಕೆ ಇ-ಮೇಲ್ ಮೂಲಕ ಹಾಗೂ ಪೋಸ್ಟ್ ಮೂಲಕ ದೂರು ನೀಡಿದ್ದಾಗಿ ಭೀಮಪ್ಪ ಗಡಾದ್ ಹೇಳಿದ್ದಾರೆ.