ದಾಂಡೇಲಿ : ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಅರಣ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರರಾಷ್ಟ್ರೀಯ ಕಾನ್ಪರೆನ್ಸ್’ನಲ್ಲಿ ನಗರದ ನಿವಾಸಿ ಸಸ್ಯ ಸಂಹಿತ ಅವರು ಜೀವವೈವಿಧ್ಯ ಮತ್ತು ಮತ್ತು ಅದರ ಸುಸ್ಥಿರ ಬಳಕೆ ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನವನ್ನು ಪಡೆದು ನಗರಕ್ಕೆ ಕೀರ್ತಿಯನ್ನು ತಂದಿದ್ದಾರೆ. ಈ ಬಗ್ಗೆ ಶನಿವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ಕಳೆದ ಮೂರು ದಿನಗಳವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಜನರು ತಮ್ಮ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಜರ್ಮನಿಯ ಗೊಟಿಗೆನ್ ವಿಶ್ವ ವಿದ್ಯಾಲಯದಲ್ಲಿ ಪಿಹೆಚ್‌ಡಿ ಮುಗಿಸಿರುವ ಸಸ್ಯ ಸಂಹಿತ ಅವರು ಪರಿಸರಕ್ಕೆ ಸಂಬಂಧಪಟ್ಟಂತೆ ವಿಶೇಷ ಅಧ್ಯಯನವನ್ನು ನಡೆಸಿದ್ದಾರೆ. ರಾಷ್ಟ್ರ, ಅಂತರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕಾಲೇಜು ಶಿಕ್ಷಣದ ಅವಧಿಯಲ್ಲಿಯೇ ಉರಗ ಪ್ರೇಮಿಯಾಗಿ ಗಮನ ಸೆಳೆದಿದ್ದರು.
ಇವರು ಗ್ರೀನ್ ಇಂಡಿಯಾ ಸಂಸ್ಥೆಯ ನಿರ್ದೇಶಕರಾದ ಡಾ.ಬಿ.ಪಿ.ಮಹೇಂದ್ರಕುಮಾರ್ ಮತ್ತು ಸಿಂಚನ ದಂಪತಿಗಳ ಸುಪುತ್ರಿಯಾಗಿದ್ದಾರೆ. ಇವರ ಸಾಧನೆಗೆ ನಗರದ ಗಣ್ಯರನೇಕರು ಹರ್ಷವನ್ನು ವ್ಯಕ್ತಪಡಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.