ಮದವೇರಿದ ಕಾಡಾನೆ ಜೊತೆ ಕಾದಾಡಿ ಮಂಡಿ ಊರಿದ ಅರ್ಜುನ; ಕಾರ್ಯಾಚರಣೆ ವಿಡಿಯೋ ಲಭ್ಯ

ಮೈಸೂರು, ಡಿ.10: ಕಾಡಾನೆ ಜೊತೆಗಿನ ಕಾದಾಟದಲ್ಲಿ ವೀರಮರಣವನ್ನಪ್ಪಿದ ದಸರಾ ಅಂಬಾರಿ ಆನೆ ಅರ್ಜುನನ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ಯವಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯ ಆರೋಪವೂ ಕೇಳಿ ಬಂದಿದ್ದು ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಅರ್ಜುನ ಆನೆಗೆ ಕಾಡಾನೆ ಅಟ್ಯಾಕ್‌ ಮಾಡಿದ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಕಾರ್ಯಾಚರಣೆಯ ಕೊನೆಯ 2 ನಿಮಿಷದ ವಿಡಿಯೋ, ಕಾರ್ಯಾಚರಣೆಗೆ ಕಾಡಿನ ಒಳಗೆ‌ ಹೋದ ಫೋಟೋಗಳು ಲಭ್ಯವಾಗಿವೆ. ಈ ಮೂಲಕ ತಪ್ಪು ಎಲ್ಲಿ ನಡೆದಿದೆ ಎಂಬ ವಿಚಾರ ಸ್ಪಷ್ಟವಾಗಿ ಸೆರೆಯಾಗಿದೆ.

ಡಿಸೆಂಬರ್ 4ರಂದು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಸಮೀಪದ ಬಾಳೆಕೆರೆ ಬಳಿ ಅಡಗಿದ್ದ ಒಂಟಿ ಸಲಗ ಸೆರೆ ಹಿಡಿಯಲು ನಡೆಸಲಾಗಿದ್ದ ಕಾರ್ಯಾಚರಣೆ ಆರಂಭಕ್ಕೂ ಮುನ್ನ ಸಾಕಾನೆಗಳಿಗೆ ಪೂಜೆ ಸಲ್ಲಿಸಿದ್ದ ಫೋಟೋ ಸೇರಿದಂತೆ ಅರ್ಜುನ ಆನೆಯ ಹಲವು ಫೋಟೋಗಳು ಹಾಗೂ ಆನೆಗಳ ಕಾದಾಟದ ವಿಡಿಯೋ ಲಭ್ಯವಾಗಿವೆ. ವಿಡಿಯೋದಲ್ಲಿ ನೀಲಗಿರಿ ತೋಪಿನಲ್ಲಿ ನಿಂತಿದ್ದ ಮದವೇರಿದ್ದ ಕಾಡಾನೆ ಅರ್ಜುನ ಆನೆ ಮೇಲೆ ದಾಳಿ ಮಾಡಿತ್ತು. ಈ ವೇಳೆ ಅರ್ಜುನ ಆನೆಯ ಮೇಲೆ ನಾಲ್ವರು ಕುಳಿತಿದ್ದರು. ಅರ್ಜುನ ಆನೆ ಮಾವುತ ವಿನು ಆತನ ಹಿಂದೆ ವೈದ್ಯ ರಮೇಶ್, ಅವರ ಹಿಂದೆ ಭೀಮ ಆನೆಯ ಮಾವುತ ಗುಂಡ, ಅವರ ಹಿಂದೆ ಅನಿಲ್ ಎಂಬ ಹುಡುಗ ಕೂತಿದ್ದರು. ಮೊದಲ ಬಾರಿ ಕಾಡಾನೆ ದಾಳಿ ಮಾಡಿದಾಗ ಅರ್ಜುನ ಹಾಗೂ ಸಿಬ್ಬಂದಿ ಕಾಡಾನೆಯನ್ನು ಓಡಿಸಿದ್ದರು. ಮೊದಲ ಬಾರಿ ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿದಾಗ ವಿಚಲಿತರಾಗದ ಅರ್ಜುನ ಹಾಗೂ ಇತರರು ಬೀಳುವ ಸ್ಥಿತಿಯಲ್ಲೂ ಹೋರಾಡಿ ಕಾಡಾನೆಯನ್ನು ಹಿಮ್ಮೆಟ್ಟಿಸಿದ್ದರು.

ಗುರಿ ತಪ್ಪಿ ಪ್ರಶಾಂತ್ ಆನೆಗೆ ಅರೆವಳಿಕೆ

ಮೊದಲ ಕಾದಾಟದ ವೇಳೆ ಅರ್ಜುನ ಆನೆ ಮೇಲೆ ಇದ್ದ ಡಾ ರಮೇಶ್ ಕೈಯಲ್ಲಿದ್ದ ಅರೆವಳಿಕೆ ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಸ್ಥಿತಿಯಲ್ಲಿ ಫಯರ್ ಆಗಿದೆ. ಡಾ. ರಮೇಶ್‌ರಿಂದ ಫಯರ್ ಆದ ಅರವಳಿಕೆ‌ ಪ್ರಶಾಂತ್ ಆನೆಗೆ ತಗುಲಿದೆ. ಆಗ ಕಾಡಾನೆ ಮತ್ತೆ ವಾಪಸ್ ಓಡಿ ಹೋಗಿದೆ. ತಕ್ಷಣವೇ ಅರ್ಜನ ಆನೆಯಿಂದ ಇಳಿದು ಡಾ ರಮೇಶ್, ವಿನು, ಗುಂಡ ಎಲ್ಲರೂ ಪ್ರಶಾಂತ್ ಆನೆ ನೋಡಲು ದೌಡಾಯಿಸಿದ್ದಾರೆ. ಆಗ ಅನಿಲ್ ಮಾತ್ರವೇ ಅರ್ಜುನ ಆನೆ ಮೇಲೆ ಕುಳಿತಿದ್ದರು. ಈ ವೇಳೆ ಕಾಡಾನೆ ಮತ್ತೆ ಅರ್ಜುನ ಆನೆ ಮೇಲೆ ದಾಳಿ ಮಾಡಿದೆ. ಆಗ ಅನಿಲ್ ಕೆಳಗೆ ಬಿದ್ದಿದ್ದಾರೆ. ಮೊದಲ ಕಾದಾಟದ ವೇಳೆ ಚೆರ್ರೆ ಹಾಗೂ ಕೂಳೆಯಿಂದ ಗಾಯಗೊಂಡಿದ್ದ ಅರ್ಜುನ ಸಹಾಯಕ್ಕೆ ಯಾರು ಇಲ್ಲದೆ ಕಾದಾಟದಲ್ಲಿ ಸೋತು ಸಾವನ್ನಪ್ಪಿದ್ದಾನೆ.

ಅರ್ಜುನನ ಸಾವಿಗೆ ಕಾರಣವಾದ ವಿಕ್ರಾಂತ್

ಅರ್ಜುನ ಆನೆಯನ್ನು ಕೊಂದ‌ ಕಾಡಾನೆಗೆ ವಿಕ್ರಾಂತ್ ಎಂದು ಅರಣ್ಯ ಇಲಾಖೆ‌ ತಾತ್ಕಾಲಿಕ ಹೆಸರು ನೀಡಿದೆ. ನ 24 ರಿಂದ ಒಟ್ಟು 6 ಆನೆಗಳ ಕಾರ್ಯಾಚರಣೆ ಯಶಸ್ವಿಯಾಗಿದೆ. ಮೂರು ಹೆಣ್ಣು ಆನೆ, ಎರಡು ಗಂಡು ಆನೆ, ಒಂದು ಮಕ್ನಾ ಆನೆ (ಗಂಡು ಅಲ್ಲದ ಹೆಣ್ಣು ಅಲ್ಲದ) ಎಲ್ಲಾ‌ 6 ಆನೆಗಳಿಗೆ ರೇಡಿಯೋ ಕಾಲರ್ ಹಾಕಿ ಸ್ಥಳಾಂತರ ಮಾಡಲಾಗಿತ್ತು. ಇನ್ನು ಮೂರು ಆನೆಗಳ ಕಾರ್ಯಾಚರಣೆ ಬಾಕಿ ಇತ್ತು. ವಿಕ್ರಾಂತ್ ಆನೆ‌ ಏಳನೇ ಟಾರ್ಗೆಟ್ ಆಗಿತ್ತು. ವಿಕ್ರಾಂತ್ ಆನೆಯನ್ನು ಹುಡುಕಿ ಹೊರಟಿದ್ದ ಅರ್ಜುನ ನೇತೃತ್ವದ ತಂಡಕ್ಕೆ ಸೋಲಾಗಿದ್ದು ಅರ್ಜುನ ಬಲಿಯಾಗಿದ್ದಾನೆ.