ಸಾಮರ್ಥ್ಯಕ್ಕೆ, ಸಾಫಲ್ಯತೆಗೆ ಒಲಿದ ಸಾರಥ್ಯದ ಪಟ್ಟ

ಇತ್ತೀಚೆಗೆ ಸಂಪನ್ನಗೊಂಡ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಬೆನ್ನಲ್ಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಒಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ಈ ತನಕ ಮುಖ್ಯ ತರಬೇತುದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಹುಲ್ ದ್ರಾವಿಡ್ ಅವರನ್ನೇ ಇನ್ನೊಂದು ಅವಧಿಗೆ ಪುನರ್ ನೇಮಕ ಮಾಡಿದೆ.

ಭಾರತೀಯ ಕ್ರಿಕೆಟ್‌ನ ಅಬ್ಯುದಯದ ದೃಷ್ಟಿಯಿಂದ ಇದೊಂದು ಮಹತ್ವದ, ಸಮರ್ಪಕ ಹಾಗೂ ಆಹ್ಲಾದಕರ ಬೆಳವಣಿಗೆ ಎನ್ನಬಹುದು. ಒಬ್ಬ ಪ್ರಭುದ್ದ ತರಬೇತುದಾರನಿಗೆ ಯಾವೆಲ್ಲ ಗುಣಗಳು ತೀರಾ ಅವಶ್ಯಕವೊ ಅಂತಹ ಎಲ್ಲಾ ಸಂಪನ್ಮೂಲಗಳನ್ನು ದ್ರಾವಿಡ್‌ರಲ್ಲಿ ನಾವು ಯತೇಚ್ಛವಾಗಿ ಕಾಣಬಹುದಾಗಿದೆ.

ತಮ್ಮ ಕ್ರಿಕೆಟ್ ಬದುಕಿನ ಆರಂಭಿಕ ದಿನಗಳಿಂದ ಅಂದ್ರೆ ಹದಿನೈದು ವರ್ಷ ವಯೋಮಾನದ ಒಳಗಿನ ಕರ್ನಾಟಕ ತಂಡಕ್ಕೆ ಆಯ್ಕೆ ಆದಾಗಿನಿಂದ ಇಂದು ಭಾರತ ತಂಡದ ಪ್ರಧಾನ ತರಬೇತುದಾರ ಆಗುವವರೆಗಿನ ಅವರ ಕ್ರಿಕೆಟ್ ಪಯಣದುದ್ದಕ್ಕೂ ಅವರು ಮೈಗೂಡಿಸಿಕೊಂಡು ಬಂದಿರುವ ವ್ಯಕ್ತಿತ್ವ, ಗುಣಧರ್ಮವೇ ಅದಕ್ಕೆ ಸಾಕ್ಷಿಯಾಗಿದೆ…

ಒಬ್ಬ ವಿದೇಯ ವಿದ್ಯಾರ್ಥಿಯಲ್ಲಿರುವ ಶೃದ್ಧೆ ಹಾಗೂ ಆಸಕ್ತಿ, ತಪಸ್ಸಿಗೆ ಕುಳಿತಿರುವ ಋಶಿಯಲ್ಲಿ ಕಂಡುಬರುವ ಏಕಾಗ್ರತೆ ಹಾಗೂ ಸಂಕಲ್ಪ, ಸಿಪಾಯಿ ಹೊಂದಿರುವ ಶಿಸ್ತು ಹಾಗೂ ಛಲ, ಕಾರ್ಮಿಕನ ಪರಿಶ್ರಮ ಹಾಗೂ ನಿಯತ್ತು, ನುರಿತ ಚಾಲಕನ ತಾಳ್ಮೆ ಹಾಗೂ ಜವಾಬ್ದಾರಿ, ತಜ್ಞ ವೈದ್ಯರ ನೈಪುಣ್ಯತೆ ಹಾಗೂ ಕರ್ತವ್ಯ ಪ್ರಜ್ಞೆ, ಯೋಗಿಯಲ್ಲಿರಬೇಕಾದ ಶಾಂತ ಹಾಗೂ ಸಮಾಧಾನ ಚಿತ್ತ , ಚಾಣಕ್ಯ ನ ತಂತ್ರಗಾರಿಕೆ ಹಾಗೂ ಹಠ ಇವೆಲ್ಲದರ ಜೊತೆಗೆ ಸೋಲು-ಗೆಲುವು, ಯಶಸ್ಸು-ವೈಪಲ್ಯಗಳಿಗೆ ಹಿಗ್ಗದೆ ಕುಗ್ಗದೆ, ಉದ್ರೇಕಗೊಳ್ಳದೇ ಕ್ರೀಡಾಮನೋಬಾವದಿಂದ ಸ್ಪಂದಿಸುವ ಸ್ಥಿತಪ್ರಜ್ಞ ಮನೋಭಾವದಿಂದಾಗಿ ಅವರಿಂದು ವಿಶ್ವ ಕ್ರಿಕೆಟ್ ರಂಗದ ಸಂಭಾವಿತ ಗಣ್ಯ ವ್ಯಕ್ತಿ ಎನಿಸಿಕೊಂಡಿದ್ದಾರೆ .

ಭಾರತದಂತಹ ವಿಷಾಲವಾದ ದೇಶದ ಅತ್ಯಂತ ಜನಪ್ರಿಯ ಕ್ರೀಡೆಯ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರನಾಗಿ ಕಾರ್ಯ ನಿರ್ವಹಿಸುವುದು ನಿಜಕ್ಕೂ ತುಂಬಾ ಸವಾಲಿನ ಕೆಲಸ. ಇಲ್ಲಿನ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವಿವಿಧ ರಾಜ್ಯಗಳ ಒಟ್ಟೂ 38 ತಂಡಗಳು ಪಾಲ್ಗೊಳ್ಳುತ್ತವೆ. ಈ ಪಂದ್ಯಾವಳಿಗಳಲ್ಲಿ ಉತ್ತಮ ಸಾಧನೆಯೊಂದಿಗೆ ಭರವಸೆ ಮೂಡಿಸಿರುವ ಆಟಗಾರರನ್ನು ಆಯ್ಕೆ ಮಂಡಳಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಮಾಡುತ್ತದೆ. ದೇಶದ ಯಾವುದೋ ಮೂಲೆಯಿಂದ ಬಂದಂತಹ ಇಂತಹ ಯುವ ಪ್ರತಿಭಾನ್ವಿತ ಆಟಗಾರನ ಮನೋಸ್ಥಿತಿ, ಅವನ ಸಾಮರ್ಥ್ಯ ಹಾಗೂ ಲೋಪ ದೋಷಗಳನ್ನು ಅರ್ಥೈಸಿಕೊಂಡು, ಅದನ್ನೆಲ್ಲ ತಿದ್ದಿ , ತೀಡಿ ಒಪ್ಪ ಓರಣಗೊಳಿಸಿ ತನ್ನ ಕಾರ್ಯತಂತ್ರಕ್ಕೆ ಅವನನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜಾಣ್ಮೆ ತರಬೇತುದಾರನಿಗೆ ಇರಬೇಕಾದುದು ತುಂಬಾ ಅತ್ಯಗತ್ಯ. ಈ ನಿಟ್ಟಿನಲ್ಲಿ ನೋಡುವುದಾದರೆ ನಮ್ಮ ದೇಶದ ಕ್ರಿಕೆಟ್ ವ್ಯವಸ್ಥೆಯ ಆಮೂಲಾಗ್ರ ಪರಿಚಯ ಇರುವ ಹಾಗೂ ಅದರೊಂದಿಗೆ ನಿಕಟ ಸಂಪರ್ಕಹೊಂದಿರುವ ಸಮರ್ಥ ವ್ಯಕ್ತಿ ಮಾತ್ರ ತರಬೇತುದಾರನ ಜವಾಬ್ಧಾರಿಯನ್ನು ಸಮರ್ಪಕವಾಗಿ ನಿಭಾಯಿಸಬಲ್ಲ .

ರಾಹುಲ್ ದ್ರಾವಿಡ್ ತಮ್ಮ ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸುತ್ತಿದ್ದಂತೇ ಅವರನ್ನು ನ್ಯಾಶನಲ್ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತದೆ. ಇಲ್ಲಿನ ಅವರ ಉತ್ಕೃಷ್ಟ ನಿರ್ವಹಣೆಯ ಹಿನ್ನೆಲೆಯಲ್ಲಿ ಅವರನ್ನು ದೇಶದ ಅಂಡರ್‌ 19 ತಂಡದ ತರಬೇತುದಾರನನ್ನಾಗಿ ನಿಯುಕ್ತಗೊಳಿಸಲಾಗುತ್ತದೆ. ಇದರ ಜೊತೆಯಲ್ಲಿಯೇ ದೇಶದ ಯುವ ಪ್ರತಿಭಾನ್ವಿತ ಆಟಗಾರರ ತಂಡ ರಚಿಸಿ (ಭಾರತ A) ದ್ರಾವಿಡ್ ಅವರ ಸಾರಥ್ಯದಲ್ಲಿ ವಿದೇಶಗಳಿಗೆ ಕಳುಹಿಸಿ ಹಲವಾರು ಪಂದ್ಯಾವಳಿಗಳಲ್ಲಿ ಆಡಿಸಲಾಗುತ್ತದೆ.

ಈ ಅವಧಿಯಲ್ಲಿ ಭಾರತ ಕಿರಿಯರ ತಂಡ ಒಮ್ಮೆ ವಿಶ್ವ ಚಾಂಪಿಯನ್ ಎನಿಸಿಕೊಂಡರೆ, ಮತ್ತೊಮ್ಮೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ಇನ್ನು ವೀದೇಶಿ ಪ್ರವಾಸಗಳಲ್ಲಿ ಭಾರತ A ತಂಡ ಕೂಡಾ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಸಫಲವಾಯಿತು. ಹೀಗೆ ತಾನು ವಹಿಸಿಕೊಂಡ ಜವಾಬ್ಧಾರಿಗಳನ್ನು ಅತ್ಯಂತ ಸಮರ್ಪಕವಾಗಿ ಪೂರೈಸಿದ ದ್ರಾವಿಡ್‌ರ ಕಾರ್ಯಕ್ಷಮತೆ ಮೆಚ್ಚಿ ಅಂದಿನ ಸೌರವ್ ಗಂಗೂಲಿ ಮುಂದಾಳತ್ವದ ಬಿಸಿಸಿಐ ಕಮಿಟಿ ಅವರಿಗೆ ಪ್ರಥಮ ಬಾರಿಗೆ ರಾಷ್ಟ್ರೀಯ ತಂಡದ ಪ್ರಧಾನ ತರಬೇತುದಾರನ ಜವಾಬ್ಧಾರಿ ನೀಡಿತು…

ಹೀಗೆ ತರಬೇತುದಾರನಾಗಿ ತಮ್ಮ ಕ್ರೀಡಾ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ ದ್ರಾವಿಡ್‌ ಅವರಿಗೆ ಆರಂಭದಲ್ಲಿಯೇ ಹಲವು ಅನುಕೂಲಕರ ಸಂಗತಿಗಳು ಹಾಗು ಕೆಲವು ಪ್ರತಿಕೂಲಕರ ಪರಿಸ್ಥಿತಿ ಎದುರಾದವು. ಅನುಕೂಲಕರ ಸಂಗತಿಗಳನ್ನು ಅವಲೋಕಿಸುವುದಾದ್ರೆ, ಅಂದು ಭಾರತ ತಂಡದಲ್ಲಿ ಕೆಲವೇ ಕೆಲವು ಅನುಭವಿ ಹಿರಿಯ ಆಟಗಾರರು ಮಾತ್ರ ಇದ್ರೆ, ಹೆಚ್ಚಿನವರು ಉದಯೋನ್ಮುಖ ಯುವ ಆಟಗಾರರೇ ತುಂಬಿಕೊಂಡಿದ್ದರು. ಇಂತಹ ಎಲ್ಲ ಯುವ ಭರವಸೆಯ ಆಟಗಾರರು ಈ ಮೊದಲು ಭಾರತ ಕಿರಿಯರ ತಂಡ ಅಥವಾ ಭಾರತ A ತಂಡದಲ್ಲಿ ಆಡುವಾಗ ದ್ರಾವಿಡ್‌ರ ಗರಡಿಯಲ್ಲಿಯೇ ಪಳಗಿ ಬಂದವರಾಗಿದ್ದು, ದ್ರಾವಿಡ್ ಇವರೆಲ್ಲರ ಸಾಮರ್ಥ್ಯ ಹಾಗೂ ಪರಿಮಿತಿ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದರು. ಅದರ ಜೊತೆಗೆ ಆಟಗಾರರು ಹಾಗೂ ದ್ರಾವಿಡ್ ನಡುವೆ ಉತ್ತಮ ಬಾಂಧವ್ಯ, ತಿಳುವಳಿಕೆ, ಸ್ನೇಹಮಯ ವಾತಾವರಣ ನಿರ್ಮಾಣಗೊಂಡಿತ್ತು…

ಹೀಗಾಗಿ ದ್ರಾವಿಡ್‌ಗೆ ತಮ್ಮ ಕಾರ್ಯತಂತ್ರ ರೂಪಿಸುವಾಗ ಯಾವ ಆಟಗಾರನನ್ನು ಯಾವಾಗ, ಹೇಗೆ, ಯಾವ ರೀತಿಯಲ್ಲಿ ತನ್ನ ದಾಳವಾಗಿ ಉಪಯೋಗಿಸಿಕೊಳ್ಳಬಹುದು ಎಂಬ ಬಗ್ಗೆ ಖಚಿತ ಜ್ಞಾನ ಇತ್ತು. ಇನ್ನು ಪ್ರತಿಕೂಲ ಪರಿಸ್ಥಿತಿಯ ಕುರಿತು ಹೇಳಬೇಕಂದ್ರೆ, ಅವರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಕೆಲ ಅನುಭವಿ ಹಿರಿಯ ಹಾಗೂ ಪ್ರಮುಖ ಆಟಗಾರರಲ್ಲಿ ಕೆಲವರು ನಿವೃತ್ತಿಯ ಅಂಚಿನಲ್ಲಿದ್ರೆ, ಇನ್ನು ಕೆಲವರು ಗಾಯದ ಸಮಸ್ಯೆಯಿಂದ ಆಟದಿಂದ ದೂರ ಉಳಿದಿದ್ದರು. ಈ ಎಲ್ಲ ವಿಷಮ ಪರಿಸ್ಥಿತಿಯ ನಡುವೆ ದೇಶಕ್ಕೆ ಒಂದು ಸಧೃಡ ತಂಡ ಕಟ್ಟಿಕೊಡುವ ಜವಾಬ್ಧಾರಿ ದ್ರಾವಿಡ್‌ರ ಹೆಗಲೇರಿತು.

ಈ ಸಂದರ್ಭದಲ್ಲಿ ದ್ರಾವಿಡ್ ತಾತ್ಪೂರ್ತಿಕವಾಗಿ ಒಂದು ತಂಡ ರಚಿಸುವುದರ ಬದಲಾಗಿ ತಮ್ಮ ದೂರದೃಷ್ಟಿತ್ವ ಯೋಜನೆಯೊಂದಿಗೆ 2023 ರ ವಿಶ್ವಕಪ್ ಪಂದ್ಯಾವಳಿಯ ಸಂರ್ಭಕ್ಕೆ ಸರಿಯಾಗಿ ಒಂದು ಭಲಾಢ್ಯ ತಂಡ ರಚಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾದ್ರು. ತಮ್ಮ ಧೃಡ ಸಂಕಲ್ಪ ಸಿದ್ಧಿಗಾಗಿ ತಂಡದ ರಚನೆಯಲ್ಲಿ ಮಹತ್ತರ ಬದಲಾಣೆಗೆ ಮುಂದಾದರು. ಭರವಸೆಯ ಯುವ ಆಟಗಾರರಿಗೆ ಹೆಚ್ಚೆಚ್ಚು ಅವಕಾಶ ಒದಗಿಸುತ್ತ, ವಿಭಿನ್ನ ಹೊಂದಾಣಿಕೆಯೊಂದಿಗೆ ತಂಡ ರಚಿಸುತ್ತಾ ಹೊಸ ಹೊಸ ಪ್ರಯೋಗ ನಡೆಸಿದರು. ಈ ಪ್ರಕ್ರಿಯೆಯಲ್ಲಿ ಕೆಲವು ಸಾರಿ ವೈಫಲ್ಯತೆಯನ್ನೂ ಅನುಭವಿಸಬೇಕಾಗಿ ಬಂತು. ತನ್ಮೂಲಕ ಮಾಧ್ಯಮದವರ, ಕ್ರೀಡಾಭಿಮಾನಿಗಳ ಕಟು ಟೀಕೆಗಳನ್ನು ಎದುರಿಸಬೇಕಾಗಿ ಬಂತು. ಆದರೆ ದ್ರಾವಿಡ್ ಇದ್ಯಾವುದಕ್ಕೂ ಕಿವಿಗೊಡದೇ, ಬಗ್ಗದೆ ಕುಗ್ಗದೆ ತಮ್ಮ ಧೃಡ ಸಂಕಲ್ಪಕ್ಕೆ ,ಕಾರ್ಯತಂತ್ರಕ್ಕೆ ಬದ್ಧರಾಗಿ ನಿಂತರು. ಹಾಗೂ ಅಂತಿಮವಾಗಿ 2023 ರ ವಿಶ್ವಕಪ್ ಪಂದ್ಯಾವಳಿ ಗೆ ದೇಶಕ್ಕೆ ಶಕ್ತಿಶಾಲಿಯಾದ, ಭಲಾಢ್ಯ ತಂಡ ಕಟ್ಟಿಕೊಡುವಲ್ಲಿ ಸಫಲರಾದರು.

ವಿಶ್ವಕಪ್ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ತಂಡ ಮುಗ್ಗರಿಸಿ ಪ್ರಶಸ್ತಿಯಿಂದ ವಂಚಿತವಾದರೂ, ಲೀಗ್ ಹಂತದಲ್ಲಿ ಉಳಿದೆಲ್ಲಾ ತಂಡಗಳನ್ನು ಬಗ್ಗುಬಡಿಯುವುದರ ಮುಖಾಂತರ ಪ್ರಸ್ತುತ ತಾನು ವಿಶ್ವದ ಸಾರ್ವಭೌಮ ತಂಡ ಎಂಬುದನ್ನು ಸಾಭೀತುಪಡಿಸಿತು. ದ್ರಾವಿಡ್ ಎರಡು ವರ್ಷಗಳ ಕಾಲಾವಧಿಯಲ್ಲಿ ಭಾರತ ತಂಡ ಐಸಿಸಿ ಆಯೋಜಿಸಿದ ಯಾವ ಪಂದ್ಯಾವಳಿಗಳಲ್ಲೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿದ್ದರೂ ಕ್ರಿಕೆಟ್‌ನ ಮೂರೂ ಪ್ರಕಾರಗಳಲ್ಲೂ ಅಂದರೆ ಟೆಸ್ಟ್ , ಏಕದಿನ ಪಂದ್ಯ ಹಾಗೂ ಟಿ-20 ವಿಭಾಗಗಳಲ್ಲೂ ವಿಶ್ವದ ಮೊದಲ ಶ್ರೇಯಾಂಕದ ತಂಡ ಎಂಬ ಹೆಗ್ಗಳಿಕೆ ಸಾಧಿಸಿತು.

ಈ ಎಲ್ಲ ಸಾಧನೆಗಳನ್ನು ಪರಿಗಣಿಸಿದ ರೋಜರ್ ಬಿನ್ನಿ ಮುಂದಾಳತ್ವದ ಬಿಸಿಸಿಐ ಕಮಿಟಿ ಮತ್ತೊಂದು ಅವಧಿಗೆ ರಾಹುಲ್ ದ್ರಾವಿಡ್ ರನ್ನ ಮುಖ್ಯ ತರಬೇತುದಾರನಾಗಿ ಮುಂದುವರಿಸುವ ನಿರ್ಧಾರ ಕೈಗೊಂಡಿತು. ನಿಜಕ್ಕೂ ಇದು ಸಾಮರ್ಥ್ಯಕ್ಕೆ, ಸಾಫಲ್ಯತೆಗೆ ದೊರೆತ ಸಾರಥ್ಯದ ಪಟ್ಟ ಎನ್ನುವುದರಲ್ಲಿ ಅನುಮಾನ ಇಲ್ಲ.

ಟಿ.ಜಿ.ಹೆಗಡೆ, ಮಾಜಿ ಕ್ರಿಕೆಟಿಗರು, ಮಾಗೋಡು