ಭಾರತ ತಂಡವನ್ನು ಎರಡು ಬಾರಿ ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಈಗ ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಗಂಭೀರ್ ಪ್ರಸ್ತುತ ಲೆಜೆಂಡ್ಸ್ ಕ್ರಿಕೆಟ್ ಲೀಗ್ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿದ್ದು, ಭರ್ಜರಿ ರನ್ ಗಳಿಸುತ್ತಿದ್ದಾರೆ. ಬುಧವಾರ ಈ ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಗಂಭೀರ್ ತಮ್ಮ ಹಳೆಯ ಖದರ್ನಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ ಎದುರಾಲಿ ಆಟಗಾರ ಎಸ್. ಶ್ರೀಶಾಂತ್ ಜೊತೆ ಮಾತಿನ ಚಕಮಕಿಗೆ ಇಳಿದಿದ್ದಾರೆ.
ಈ ಪಂದ್ಯದಲ್ಲಿ ಗಂಭೀರ್ ಪಡೆ ಮೊದಲು ಬ್ಯಾಟಿಂಗ್ ಮಾಡಿತು. ಪಂದ್ಯದ ಎರಡನೇ ಓವರ್ ಅನ್ನು ಶ್ರೀಶಾಂತ್ ಬೌಲ್ ಮಾಡಿದರು. ಶ್ರೀಶಾಂತ್ ಓವರ್ನ ಎರಡನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಗಂಭೀರ್ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ, ಮುಂದಿನ ಎಸೆತದಲ್ಲಿ ರನ್ ಬರಲಿಲ್ಲ. ಈ ವೇಳೆ ಶ್ರೀಶಾಂತ್ ಅವರು ಗಂಭೀರ್ಗೆ ಏನೋ ಹೇಳಿದ್ದಾರೆ. ಇದರಿಂದ ಗಂಭೀರ್ ಕೋಪಕೊಂಡು ಶ್ರೀಶಾಂತ್ ಕಡೆ ದಿಟ್ಟಿಸಿ ನೋಡಿದ್ದಾರೆ.
ಗಂಭೀರ್-ಶ್ರೀಶಾಂತ್ ನಡುವಣ ವಾಗ್ವಾದದ ವಿಡಿಯೋ ಇಲ್ಲಿದೆ:
ಗಂಭೀರ್-ಶ್ರೀಶಾಂತ್ ಇಬ್ಬರ ನಡುವೆ ಸ್ವಲ್ಪ ಮಟ್ಟಿನ ವಾಗ್ವಾದ ಕಾಣಿಸಿಕೊಂಡಿತು. ಈ ಪಂದ್ಯದಲ್ಲಿ ಗಂಭೀರ್ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು. 30 ಎಸೆತಗಳನ್ನು ಎದುರಿಸಿದ ಅವರು ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಇದಕ್ಕೂ ಮುನ್ನ ಭಿಲ್ವಾರಾ ಕಿಂಗ್ಸ್ ವಿರುದ್ಧ ಗಂಭೀರ್ 63 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
ಭಾರತ 2007 ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಪಾಕಿಸ್ತಾನದ ವಿರುದ್ಧ ಆಡಿದ ಫೈನಲ್‌ನಲ್ಲಿ ಅರ್ಧಶತಕ ಗಳಿಸುವ ಮೂಲಕ ತಂಡವನ್ನು ಗೆಲ್ಲುವಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು. 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದುಕೊಂಡಿದ್ದ ಸಂದರ್ಭ ಕೂಡ ಫೈನಲ್‌ನಲ್ಲಿ ಗಂಭೀರ್ 97 ರನ್‌ಗಳ ಇನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು. ಈ ಎರಡೂ ಪಂದ್ಯಗಳಲ್ಲಿ ಶ್ರೀಶಾಂತ್ ಕೂಡ ಆಡಿದ್ದರು.
ಈ ಪಂದ್ಯದಲ್ಲಿ ಗಂಭೀರ್ ಅವರ 51 ರನ್, ಪೀಟರ್ಸನ್ 26 ರನ್, ಬೆನ್ ಡಕ್ 30 ರನ್ ಹಾಗೂ ಭರತ್ ಚಿಪ್ಲಿ 35 ರನ್ ಬಾರಿಸಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಇಂಡಿಯಾ ಕ್ಯಾಪಿಟಲ್ಸ್ ತಂಡ 223 ರನ್ ಕಲೆಹಾಕಿತು. ಗುರಿಯನ್ನು ಬೆನ್ನತ್ತಿದ ಗುಜರಾತ್ ಜೈಂಟ್ಸ್ ಪರ ಕ್ರಿಸ್ ಗೇಲ್ 84 ರನ್, ಓ ಬ್ರಿಯಾನ್ 57 ರನ್ ಸಿಡಿಸಿದರು. ಕೊನೆಯ ಓವರ್ನಲ್ಲಿ ಗುಜರಾತ್ ತಂಡಕ್ಕೆ 20 ರನ್ಗಳು ಬೇಕಿತ್ತು. ಆದರೆ ಅಂತಿಮ ಓವರ್ನಲ್ಲಿ ಕೇವಲ 8 ರನ್ ಕಲೆಹಾಕಿದ ಪರಿಣಾಮ ಇಂಡಿಯಾ ಕ್ಯಾಪಿಟಲ್ಸ್ ರೋಚಕ ಜಯ ಸಾಧಿಸಿತು.