ಭಾರತೀಯ ಹೆಸರಲ್ಲಿ ಚೀನೀಯರ ಫೇಸ್ಬುಕ್ ಪ್ರೊಫೈಲ್; ಭಾರತ ವಿರೋಧಿ ಸುಳ್ಳು ಮಾಹಿತಿ ಹಂಚಿಕೆ; ಫೇಸ್ಬುಕ್​ನಿಂದ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ನವದೆಹಲಿ, ಡಿಸೆಂಬರ್ 5: ಸೋಷಿಯಲ್ ಮೀಡಿಯಾದಲ್ಲಿ ಯಾವ ಖಾತೆ ಅಸಲಿ, ಯಾವ ಖಾತೆ ನಕಲಿ; ಯಾವ ಸುದ್ದಿ ಸತ್ಯ, ಯಾವ ಸುದ್ದಿ ಸುಳ್ಳು; ಯಾವ ಸುದ್ದಿ ಮೂಲ ಯಾವುದು ಎಲ್ಲವೂ ತಿಳಿಯದಷ್ಟು ಸಂಕೀರ್ಣವಾಗಿರುತ್ತದೆ. ಸುಳ್ಳು ಸುದ್ದಿಗಳನ್ನು ಹರಡಲು ಸೋಷಿಯಲ್ ಮೀಡಿಯಾ ಪ್ರಶಸ್ತ ವೇದಿಕೆ ಆಗಿದೆ. ಕೋಟ್ಯಂತರ ಜನರು ಬಳಸುವ ಸೋಷಿಯಲ್ ಮೀಡಿಯಾ ಕಿಡಿಗೇಡಿಗಳ ಪಾಲಿಗೆ ಪ್ರಬಲ ಅಸ್ತ್ರವಾಗಿದೆ. ಇದೇ ವೇಳೆ ಫೇಸ್ಬುಕ್ ಸಂಸ್ಥೆ ಬೆಚ್ಚಿಬೀಳಿಸುವ ಸಂಗತಿಯನ್ನು ಬಹಿರಂಗಪಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾರತ, ಅಮೆರಿಕ ದೇಶಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಫೇಸ್ಬುಕ್ ಖಾತೆಗಳ ಮೂಲವನ್ನು ಪತ್ತೆ ಹಚ್ಚಿದೆ. ಈ ಸುದ್ದಿಗಳ ಮೂಲ ಚೀನಾ ಎಂಬುದು ಗೊತ್ತಾಗಿದೆ. ಭಾರತೀಯರ ಹೆಸರಿನಲ್ಲಿ ಚೀನೀಯರು ನಕಲಿ ಫೇಸ್​ಬುಕ್ ಪ್ರೊಫೈಲ್ ರಚಿಸಿ ಅದರ ಮೂಲಕ ಭಾರತ ವಿರೋಧಿ ಸುದ್ದಿಗಳನ್ನು ಹರಡುತ್ತಿದ್ದುದು ತಿಳಿದುಬಂದಿತ್ತು ಎಂದು ಹೇಳಿರುವ ಮೆಟಾ ಸಂಸ್ಥೆ, ಈ ವರ್ಷದ ಆರಂಭದಲ್ಲಿ ಇಂತಹ ನಕಲಿ ಫೇಸ್ಬುಕ್ ಖಾತೆಗಳ ದೊಡ್ಡ ಜಾಲವನ್ನು ನಾಶ ಮಾಡಿದ್ದಾಗಿ ತಿಳಿಸಿದೆ.

ಚೀನೀಯರ ಕರಾಮತ್ತು ಹೇಗಿತ್ತು?

ಭಾರತೀಯ ಪತ್ರಕರ್ತರು, ವಕೀಲರು, ಮಾನವ ಹಕ್ಕು ಕಾರ್ಯಕರ್ತರು ಎಂಬ ಸೋಗಿನಲ್ಲಿ ಚೀನೀಯರು ಫೇಸ್​ಬುಕ್​ನಲ್ಲಿ ಪ್ರೊಫೈಲ್ ರಚಿಸಿದ್ದರು. ಪ್ರಾದೇಶಿಕ ಸುದ್ದಿ, ಸಂಸ್ಕೃತಿ, ಕ್ರೀಡೆ ಬಗ್ಗೆ ಇಂಗ್ಲೀಷ್​ನಲ್ಲಿ ಬರೆಯುತ್ತಿದ್ದರು. ಟಿಬೆಟ್, ಅರುಣಾಚಲಪ್ರದೇಶಗಳ ಬಗ್ಗೆಯೂ ಬರೆಯುತ್ತಿರುತ್ತಾರೆ. ಕೆಲವೊಮ್ಮೆ ಹಿಂದಿ ಮತ್ತು ಚೀನೀ ಭಾಷೆಯಲ್ಲೂ ಈ ಅಕೌಂಟ್​ಗಳಿಂದ ಸುದ್ದಿ ಪ್ರಕಟಗೊಳ್ಳುತ್ತಿರುತ್ತಿದ್ದವು.

ಈ ಕೆಲ ನಕಲಿ ಚೀನೀ ಅಕೌಂಟ್​ಗಳು ಟಿಬೆಟ್​ನ ದಲೈ ಲಾಮಾ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದವು. ದಲೈ ಲಾಮಾ ಭ್ರಷ್ಟಾಚಾರಿ, ಬಾಲಕಾಮಿ ಇತ್ಯಾದಿ ಗಂಭೀರವಾಗಿ ನಿಂದನೆ ಮಾಡುತ್ತಿದ್ದವು.

ಭಾರತ ಸರ್ಕಾರದ ಬಗ್ಗೆ ಟೀಕೆ

ಕೆಲ ಚೀನೀ ಮೂಲದ ಖಾತೆಗಳು ಅರುಣಾಚಲಪ್ರದೇಶದ ಬಗ್ಗೆ ಗಮನ ಹರಿಸಿ ಪೋಸ್ಟ್ ಮಾಡುತ್ತಿದ್ದವು. ಭಾರತೀಯ ಸೇನೆ, ಕ್ರೀಡಾಪಟು, ವೈಜ್ಞಾನಿಕ ಸಾಧನೆಗಳನ್ನು ಪ್ರಶಂಸಿಸುತ್ತಿದ್ದ ಇವರು, ಭಾರತ ಸರ್ಕಾರವನ್ನು ಭ್ರಷ್ಟಾಚಾರಿ ಎಂದು ಬಣ್ಣಿಸುತ್ತಿದ್ದರು. ಮಣಿಪುರದಲ್ಲಿ ಭಾರತ ಸರ್ಕಾರ ಹಿಂಸಾಚಾರ ಪ್ರಚೋದಿಸುತ್ತಿದೆ ಎಂದು ಆರೋಪಿಸುತ್ತಿದ್ದರು. ಎಲ್ಲಾ ಇಂಥ ಚೀನೀ ಮೂಲದ ಫೇಸ್ಬುಕ್ ಖಾತೆಗಳ ಜಾಲವೇ ನಿರ್ಮಾಣವಾಗಿದ್ದು, ಪರಿಸ್ಪರ ಪೋಸ್ಟ್​ಗಳನ್ನು ಇವರು ತಮ್ಮ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದರು ಎಂದು ಮೆಟಾ ಸಂಸ್ಥೆ ಹೇಳಿದೆ.

ಸದ್ಯ ಮೆಟಾ ಸಂಸ್ಥೆ ಇಂಥ ನಕಲಿ ಚೀನಾ ಮೂಲದ ಫೇಸ್ಬುಕ್ ಅಕೌಂಟ್​ಗಳನ್ನು ಈ ವರ್ಷದ ಆರಂಭದಲ್ಲೇ ನಾಶ ಮಾಡಿದ್ದಾಗಿ ಹೇಳಿದೆ. ಚೀನೀಯರು ಭಾರತ ಮಾತ್ರವಲ್ಲ ಅಮೆರಿಕವನ್ನೂ ಗುರಿಯಾಗಿಸಿ ಪೋಸ್ಟ್ ಮಾಡಲು ನಕಲಿ ಖಾತೆಗಳನ್ನು ಸೃಷ್ಟಿಸಿದ್ದರು.

ಅಮೆರಿಕದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಗರ್ಭಪಾತ, ಅಧ್ಯಕ್ಷೀಯ ಅಭ್ಯರ್ಥಿಗಳು, ಅಮೆರಿಕ ಚೀನಾ ಸಂಬಂಧ ಇತ್ಯಾದಿ ವಿಚಾರಗಳ ಬಗ್ಗೆ ಫೇಸ್ಬುಕ್​ನಲ್ಲಿ ಪೋಸ್ಟ್ ಹಾಕಲಾಗುತ್ತಿತ್ತು. ಇಂಥ 4,700 ನಕಲಿ ಫೇಸ್ಬುಕ್ ಖಾತೆಗಳನ್ನು ತಾನು ಗುರುತಿಸಿದ್ದಾಗಿ ಮೆಟಾ ಸಂಸ್ಥೆ ತಿಳಿಸಿದೆ.