ಮಿಸ್ಟ್ರಿ ಮ್ಯಾಜಿಕ್: ಕೇವಲ 9 ರನ್​ಗೆ 5 ವಿಕೆಟ್ ಕಬಳಿಸಿದ ವರುಣ್ ಚಕ್ರವರ್ತಿ

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ರೌಂಡ್-7 ಪಂದ್ಯದಲ್ಲಿ ತಮಿಳುನಾಡು ಸ್ಪಿನ್ನರ್ ವರುಣ್ ಚಕ್ರವರ್ತಿ ಸ್ಪಿನ್ ಮೋಡಿ ಮಾಡಿದ್ದಾರೆ. ನಾಗಾಲ್ಯಾಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ತಂಡದ ನಾಯಕ ದಿನೇಶ್ ಕಾರ್ತಿಕ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ನಾಗಾಲ್ಯಾಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಶಾಮ್ವಾಂಗ್ ವಾಂಗ್ನಾವೊ (1) ವಿಕೆಟ್ ಪಡೆಯುವ ಮೂಲಕ ಟಿ. ನಟರಾಜನ್ ತಮಿಳುನಾಡು ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರೆ, ಇದರ ಬೆನ್ನಲ್ಲೇ ಸಂದೀಪ್ ವಾರಿಯರ್ 2ನೇ ವಿಕೆಟ್ ಉರುಳಿಸಿದರು.

ಇನ್ನು 9ನೇ ಓವರ್​ ವೇಳೆಗೆ ದಾಳಿಗಿಳಿದ ಸ್ಪಿನ್ನರ್ ವರುಣ್ ಚಕ್ರವರ್ತಿ ಮೊದಲ ಎಸೆತದಲ್ಲೇ ಓರೆನ್ ನ್ಗುಲ್ಲಿ (1) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇನ್ನು 13ನೇ ಓವರ್​ನ ಕೊನೆಯ ಎಸೆತದಲ್ಲಿ ಎಚ್ ಜಿಮೋಮಿ ಅವರು ಕೂಡ ಮಿಸ್ಟ್ರಿ ಸ್ಪಿನ್​ಗೆ ಬಲಿಯಾದರು.

ಆ ಬಳಿಕ ಬಂದ ತಹಮೀದ್ ರೆಹಮಾನ್ (1) ವರುಣ್ ಚಕ್ರವರ್ತಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರೆ, ಆಕಾವಿ ಯೆಪ್ತೊ (3) ಇಂದ್ರಜಿತ್​ಗೆ ಕ್ಯಾಚ್ ನೀಡಿದರು. ಇನ್ನು 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ರಿವಿಟ್ಸೊ ಕೆನ್ಸ್ (0) ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ನಾಗಾಲ್ಯಾಂಡ್ ತಂಡವನ್ನು 19.4 ಓವರ್​ಗಳಲ್ಲಿ 69 ರನ್​ಗಳಿಗೆ ಆಲೌಟ್ ಮಾಡುವಲ್ಲಿ ವರುಣ್ ಚಕ್ರವರ್ತಿ ಪ್ರಮುಖ ಪಾತ್ರವಹಿಸಿದರು.

ಈ ಪಂದ್ಯದಲ್ಲಿ ಕೇವಲ 5 ಓವರ್​ಗಳನ್ನು ಬೌಲ್ ಮಾಡಿದ ವರುಣ್ ಚಕ್ರವರ್ತಿ 3 ಮೇಡನ್​ಗಳೊಂದಿಗೆ ಕೇವಲ 9 ರನ್ ನೀಡಿ 5 ವಿಕೆಟ್ ಕಬಳಿಸಿದರು. ಮತ್ತೊಂದೆಡೆ ಸಾಯಿ ಕಿಶೋರ್ 21 ರನ್ ನೀಡಿ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇನ್ನು 70 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ತಮಿಳುನಾಡು ತಂಡವು 7.5 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟುವ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ನಾಗಾಲ್ಯಾಂಡ್ ಪ್ಲೇಯಿಂಗ್ ಇಲೆವೆನ್: ಜೋಶುವಾ ಒಜುಕುಮ್ , ಶಾಮ್ವಾಂಗ್ ವಾಂಗ್ನಾವೊ , ಓರೆನ್ ನ್ಗುಲ್ಲಿ , ಸುಮಿತ್ ಕುಮಾರ್ (ವಿಕೆಟ್ ಕೀಪರ್) , ರೊಂಗ್ಸೆನ್ ಜೊನಾಥನ್ (ನಾಯಕ) , ಹೊಕೈಟೊ ಝಿಮೊಮಿ , ತಹಮೀದ್ ರೆಹಮಾನ್ , ಚೋಪಿಸ್ ಹೋಪಾಂಗ್ಕ್ಯು , ಅಕಾವಿ ಯೆಪ್ತೋ , ಕ್ರಿವಿಟ್ಸೊ ಕೆನ್ಸೆಟ್ಯಾ.

ತಮಿಳುನಾಡು ಪ್ಲೇಯಿಂಗ್ ಇಲೆವೆನ್: ಸಾಯಿ ಸುದರ್ಶನ್ , ಎನ್ ಜಗದೀಸನ್ , ಬಾಬಾ ಇಂದ್ರಜಿತ್ , ಪ್ರದೋಶ್ ಪಾಲ್ , ವಿಜಯ್ ಶಂಕರ್ , ದಿನೇಶ್ ಕಾರ್ತಿಕ್ (ನಾಯಕ) , ಶಾರುಖ್ ಖಾನ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ , ವರುಣ್ ಚಕ್ರವರ್ತಿ , ಸಂದೀಪ್ ವಾರಿಯರ್ , ಟಿ ನಟರಾಜನ್.