ಸಾಂಪ್ರದಾಯಿಕ ಉಡುಗೆ ತೊಟ್ಟವರಿಗೆ ಕೊಹ್ಲಿ ರೆಸ್ಟೋರೆಂಟ್‌ ಒಳಕ್ಕೆ ನೋ ಎಂಟ್ರಿ! ಚರ್ಚೆಯಾಗುತ್ತಿದೆ ವೈರಲ್ ವಿಡಿಯೋ

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಹೊರತುಪಡಿಸಿ ವಿವಿಧ ಉದ್ಯಮಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯ ಏಕದಿನ ವಿಶ್ವಕಪ್ (ODI World cup 2023) ಮುಗಿದ ಬಳಿಕ ಪತ್ನಿಯೊಂದಿಗೆ ಲಂಡನ್​ನಲ್ಲಿ ಜಾಲಿ ಮೂಡ್​ನಲ್ಲಿರುವ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ತಂಡಕ್ಕೆ ರೀ ಎಂಟ್ರಿಕೊಡಲಿದ್ದಾರೆ. ಕ್ರಿಕೆಟ್ ಹೊರತುಪಡಿಸಿ ನಾನಾ ಜಾಹೀರಾತು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಕೊಹ್ಲಿ ದೇಶದ ವಿವಿಧ ನಗರಗಳಲ್ಲಿ ಹಲವು ರೆಸ್ಟೊರೆಂಟ್‌ಗಳನ್ನು (Restaurants) ನಡೆಸುತ್ತಿದ್ದಾರೆ. ಇವುಗಳಲ್ಲಿ ಮುಂಬೈನಲ್ಲಿರುವ One8 ಹೆಸರಿನ ರೆಸ್ಟೊರೆಂಟ್‌ ಕೂಡ ಸೇರಿದೆ. ಇದೀಗ ಈ ರೆಸ್ಟೊರೆಂಟ್​ನಲ್ಲಿ ನಡೆದಿರುವ ಅದೊಂದು ಘಟನೆಯಿಂದಾಗಿ ವಿರಾಟ್​ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ದಾಳಿಗೆ ತುತ್ತಾಗಿದ್ದಾರೆ.

ಸಾಂಪ್ರದಾಯಿಕ ಉಡುಗೆಗೆ ನೋ ಎಂಟ್ರಿ

ವಾಸ್ತವವಾಗಿ ಅಸಲಿ ವಿಚಾರವೆನೆಂದರೆ, ಮುಂಬೈನಲ್ಲಿರುವ ಒನ್ 8 ಹೆಸರಿನ ರೆಸ್ಟೊರೆಂಟ್​ಗೆ ವ್ಯಕ್ತಿಯೊಬ್ಬ ಭಾರತದ ಸಾಂಪ್ರದಾಯಿಕ ಉಡುಗೆಯನ್ನು ಅಂದರೆ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್​ ಧರಿಸಿ ಬಂದಿದ್ದಾರೆ. ಆದರೆ ಆ ವ್ಯಕ್ತಿ ಧರಿಸಿದ ಉಡುಗೆ ರೆಸ್ಟೊರೆಂಟ್ ಡ್ರೆಸ್​ ಕೋಡ್​ ನಿಯಮಾವಳಿಗೆ ತಕ್ಕಂತೆ ಇಲ್ಲವೆಂದು ಅಲ್ಲಿನ ಸೆಕ್ಯೂರಿಟಿ ಗಾರ್ಡ್​ಗಳು ಆ ವ್ಯಕ್ತಿಯನ್ನು ರೆಸ್ಟೊರೆಂಟ್ ಒಳಗೆ ತೆರಳಲು ಅವಕಾಶ ಮಾಡಿಕೊಟ್ಟಿಲ್ಲ.

ವಿಡಿಯೋ ವೈರಲ್

ರೆಸ್ಟೊರೆಂಟ್​ನ ಸೆಕ್ಯೂರಿಟಿ ಗಾರ್ಡ್​ಗಳ ಈ ನಡೆಯಿಂದ ಬೇಸರಗೊಂಡಿರುವ ಆ ವ್ಯಕ್ತಿ ರೆಸ್ಟೊರೆಂಟ್​ನ ಗೇಟ್​ ಮುಂದೆ ನಿಂತು ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ಈ ಬಗ್ಗೆ ಪರ- ವಿರೋದದ ಚರ್ಚೆಗಳು ಶುರುವಾಗಿವೆ.

ವೈರಲ್ ವಿಡಿಯೋದಲ್ಲಿ ಇರುವಂತೆ ನಾನು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿರುವುದಕ್ಕೆ ನನಗೆ ಈ ರೆಸ್ಟೊರೆಂಟ್ ಒಳಗೆ ಹೋಗಲು ಅವಕಾಶ ನೀಡುತ್ತಿಲ್ಲ. ರೆಸ್ಟೊರೆಂಟ್ ಡ್ರೆಸ್​ ಕೋಡ್​ಗೆ ತಕ್ಕಂತೆ ನಾನು ಉಡುಪು ಧರಿಸಿಲ್ಲ ಎಂಬ ಕಾರಣಕ್ಕೆ ನನಗೆ ಅನುಮತಿ ನಿರಾಕರಿಸುತ್ತಿದ್ದಾರೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪರ- ವಿರೋದದ ಚರ್ಚೆ

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಇದೀಗ ವಿರಾಟ್ ಕೊಹ್ಲಿ ವಿರುದ್ಧ ಹಲವರು ಟೀಕೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕೊಹ್ಲಿ ಪರ ಬ್ಯಾಟ್ ಬೀಸಿದ್ದು, ರೆಸ್ಟೋರೆಂಟ್‌ಗಳು ಜನರು ಅನುಸರಿಸಬೇಕಾದ ಡ್ರೆಸ್ ಕೋಡ್ ಅನ್ನು ಹೊಂದಿವೆ. ಹೀಗಾಗಿ ಆ ವ್ಯಕ್ತಿಗೆ ಅನುಮತಿ ನಿರಾಕರಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಈ ವಿಚಾರದಲ್ಲಿ ಕೆಲವರು ವಿರಾಟ್ ಪರ ಒಲವು ತೋರಿದರೆ ಕೆಲವರು ಟೀಕೆ ಮಾಡುತ್ತಿದ್ದಾರೆ.