ಬೆಂಗಳೂರು, ಡಿ.04: ನಿಂತಿದ್ದ ಬಿಎಂಟಿಸಿ ಬಸ್ಗೆ ಕಾರ್ ಡಿಕ್ಕಿಯಾಗಿ ಬೆಂಕಿ ಹೊತ್ತುಕೊಂಡಿದ್ದು ಕಾರು ಹೊತ್ತಿ ಉರಿದ ಘಟನೆ ನಾಯಂಡಹಳ್ಳಿ ಬಳಿಯ ರಿಂಗ್ ರಸ್ತೆಯಲ್ಲಿ ನಡೆದಿದೆ. ನಿಂತಿದ್ದ ಬಿಎಂಟಿಸಿ ಬಸ್ಗೆ ವೇಗವಾಗಿ ಬಂದ I20 ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ನಡುರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡಿದ್ದು ಕಾರು ಸುಟ್ಟು ಕರಕಲಾಗಿದೆ. ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುತ್ತಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಇನ್ನು ಕಾರು ಬಸ್ಗೆ ಡಿಕ್ಕಿ ಹೊಡೆದು ಬೆಂಕಿ ತಗುಲಿದ್ದು ಕಾರು ಸಂಪೂರ್ಣ ಸುಟ್ಟು ಹೋಗಿದೆ. ಬಸ್ನ ಹಿಂದಿನ ಭಾಗ ಸ್ವಲ್ಪ ಬೆಂಕಿಗಾಹುತಿಯಾಗಿದೆ. ವೇಗವಾಗಿ ಕಾರ್ ಬಂದು ಡಿಕ್ಕಿ ಹೊಡೆದ ಹಿನ್ನೆಲೆ ಕಾರು ಚಾಲಕನಿಗೆ ಮೂಗಿನ ಬಳಿ ಕೊಂಚ ಗಾಯಗಳಾಗಿವೆ. ಉಳಿದಂತೆ ಬಸ್ ನಲ್ಲಿದ್ದ ಪ್ರಯಾಣಿಕರು ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಶವಂತಪುರ ಟು ಬನಶಂಕರಿ ಮಾರ್ಗದಲ್ಲಿ ಸಂಚರಿಸುವ ಬನಶಂಕರಿ ಡಿಪೋನ 26ರ ಮಾರ್ಗದ 401NY ಬಸ್ ಸಂಖ್ಯೆ F4968ರ ಬಸ್ ಇದಾಗಿದ್ದು ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಚಾಲಕ ಗೌರೀಶ್ ಬಿ, ನಿರ್ವಾಹಕ ಗಿರಿಧರ್ ಇಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಚಂದ್ರಲೇಔಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಲು ನಿಲ್ಲಿಸಿದ್ದ ವೇಳೆ ಕಾರು ವೇಗವಾಗಿ ಬಂದು ಬಸ್ಗೆ ಗುದ್ದಿದೆ.
ಬಿಎಂಟಿಸಿ ಚಾಲಕ ಮಾಡಿದ ಆ ಕೆಲಸಕ್ಕೆ ಎಲ್ಲರ ಮೆಚ್ಚುಗೆ
ಇನ್ನು ಬಿಎಂಟಿಸಿ ಬಸ್ ಚಾಲಕ ಪ್ರಯಾಣಿಕರ ರಕ್ಷಣೆ ಮಾಡುವುದರ ಜೊತೆಗೆ ಬಿಎಂಟಿಸಿ ಬಸ್ ರಕ್ಷಣೆ ಸಹ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೆಂಕಿ ಹೊತ್ತಿದ್ದ ಕಾರು ಹಾಗೂ ಬಸ್ ಪರಸ್ಪರ ಸಿಕ್ಕಿ ಹಾಕಿಕೊಂಡಿದ್ದು ಅದನ್ನು ಬಿಡಿಸಲು ಬಸ್ ಚಾಲಕ ಪ್ರಯತ್ನ ಮಾಡಿದ್ದಾರೆ. ನೂರು ಮೀಟರ್ ಬಸ್ ಚಲಾಯಿಸಿ ಕಾರ್ನಿಂದ ಬಸ್ ಅನ್ನು ಕಾಪಾಡಿದ್ದಾರೆ. ಹೀಗಾಗಿ ಬಸ್ ಬೆಂಕಿಗಾಹುತಿಯಾಗುವುದು ತಪ್ಪಿದೆ. ಇಲ್ಲವಾದಲ್ಲಿ ನಡುರಸ್ತೆಯಲ್ಲಿ ಬಿಎಂಟಿಸಿ ಬಸ್ ಕೂಡ ಸುಟ್ಟು ಬಸ್ಮವಾಗುತ್ತಿತ್ತು. ಹೊತ್ತಿ ಉರಿಯುತ್ತಿರುವ ಬೆಂಕಿಯ ನಡುವೆಯೂ ಬಸ್ ಏರಿ ಬಸ್ ಚಲಾಯಿಸಿದ್ದಾರೆ. ಸತತ ಒಂದೂವರೆ ನಿಮಿಷಗಳ ಹರಸಾಹಸದ ಬಳಿಕ ಡಿವೈಡರ್ ಹಾರಿಸಿ ಮತ್ತೊಂದು ರಸ್ತೆಗೆ ಚಲಾಯಿಸುವ ಮುಖಾಂತರ ಬಸನ್ನು ಕಾರಿನಿಂದ ಬಿಡಿಸುವಲ್ಲಿ ಚಾಲಕ ಗೌರೀಶ್ ಅವರು ಯಶಸ್ವಿಯಾಗಿದ್ದಾರೆ.