Karnataka Rain: ಚಂಡಮಾರುತ ಪ್ರಭಾವ, ಬೆಂಗಳೂರು ಸೇರಿ ಕರ್ನಾಟಕದ ದಕ್ಷಿಣ ಒಳನಾಡಿನ ಬಹುತೇಕ ಕಡೆ ಡಿಸೆಂಬರ್ 6ರವರೆಗೆ ಮಳೆ

ಬೆಂಗಳೂರು ಸೇರಿ ಕರ್ನಾಟಕದ ದಕ್ಷಿಣ ಒಳನಾಡಿನ ಬಹುತೇಕ ಕಡೆ ಡಿಸೆಂಬರ್ 6ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ರಾಯಚೂರು, ಕಲಬುರಗಿ, ಬೀದರ್, ದಕ್ಷಿಣ ಕನ್ನಡ, ಉಡುಪಿಯಲ್ಲೂ ಮಳೆಯಾಗಲಿದೆ.

ಮಿಚಾಂಗ್ ಚಂಡಮಾರುತ ಪ್ರಭಾವ ಸ್ವಲ್ಪ ಪ್ರಮಾಣದಲ್ಲಿ ಕರ್ನಾಟಕದ ಮೇಲೂ ಬೀರಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು. ಮುಂದಿನ 24 ಗಂಟೆಗಳಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ, ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ. ಕನಿಷ್ಠ ಉಷ್ಣಾಂಶವು ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ರಿಂದ ಮೂರು ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಎಚ್​ಎಎಲ್​ನಲ್ಲಿ 26.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 26.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಭಾನುವಾರ ಮಿಚಾಂಗ್ ಚಂಡಮಾರುತವಾಗಿ ತೀವ್ರಗೊಂಡಿದ್ದು, ಡಿಸೆಂಬರ್ 5ರ ಮುಂಜಾನೆ ದಕ್ಷಿಣ ಆಂಧ್ರಪ್ರದೇಶದ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ 80-90ರಷ್ಟು ವೇಗದ ಗಾಳಿಯು ಗಂಟೆಗೆ 100 ಕಿಮೀ ವೇಗದೊಂದಿಗೆ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆಯ ಮಾಹಿತಿ ನೀಡಿದೆ.

ಈ ಸಂಬಂಧ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಾತುಕತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.