ಡಿಸೆಂಬರ್ 10 ರಿಂದ ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಮತ್ತು ಟೆಸ್ಟ್ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಒಂದು ಟೆಸ್ಟ್ ಪಂದ್ಯದ ಸರಣಿಗೆ ಬಿಸಿಸಿಐ, ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ ಭಾರತ ಮಹಿಳಾ ತಂಡ ಡಿಸೆಂಬರ್ 6 ರಿಂದ 10 ರವರೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆ ಬಳಿಕ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಡಿಸೆಂಬರ್ 14 ರಿಂದ 17 ರವರೆಗೆ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಆಫ್ರಿಕಾ ವಿರುದ್ಧದ ಸರಣಿ ಮುಗಿದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 21 ರಿಂದ 24 ರವರೆಗೆ ವಾಂಖೆಡೆ ಸ್ಟೇಡಿಯಂನಲ್ಲಿ ಏಕಮಾತ್ರ ಟೆಸ್ಟ್ ಪಂದ್ಯವನ್ನು ಸಹ ಆಡಲಿದೆ.
ಕನ್ನಡತಿಗೆ ಮೊದಲ ಅವಕಾಶ
ಇನ್ನು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪ್ರಕಟವಾದ ಭಾರತ ಮಹಿಳಾ ತಂಡದಲ್ಲಿ ಮೂವರು ಆಟಗಾರ್ತಿಯರಿಗೆ ಚೊಚ್ಚಲ ಅವಕಾಶ ಸಿಕ್ಕಿದೆ. ಇವರಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್, ಸೈಕಾ ಇಶಾಕ್ ಮತ್ತು ಮನ್ನತ್ ಕಶ್ಯಪ್ ಸೇರಿದ್ದಾರೆ. ಡಬ್ಲ್ಯುಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೇಯಾಂಕಾ ಪಾಟೀಲ್ ಮತ್ತು ಮನ್ನತ್ ಕಶ್ಯಪ್ ಇಂಗ್ಲೆಂಡ್ ವಿರುದ್ಧದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ಸ್ಪಿನ್ನರ್ ಸೈಕಾ ಇಶಾಕ್ ಅವರನ್ನು ಟಿ20 ಮತ್ತು ಟೆಸ್ಟ್ ಎರಡೂ ತಂಡಗಳಿಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಕರ್ನಾಟಕ ಮೂಲದ ಶುಭಾ ಸತೀಶ್ ಕೂಡ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಟಿ20 ಸರಣಿಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್‌ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಮನ್ನತ್ ಕಶ್ಯಪ್, ಸೈಕಾ ಇಶಾಕ್, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು, ಪೂಜಾ ವಸ್ತ್ರಾಕರ್, ಕನಿಕಾ ಅಹುಜಾ, ಮಿನ್ನು ಮಣಿ
ಹರ್ಮನ್ಗೆ ವಿಶೇಷ ಸರಣಿ
ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ ಆಡಿದ ನಂತರ, ಭಾರತ ವನಿತಾ ಪಡೆ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ. ಆದರೆ, ಇದಕ್ಕಾಗಿ ಭಾರತ ಮಹಿಳಾ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದೊಂದಿಗೆ ಆಡುವ ಪ್ರತಿ ಟೆಸ್ಟ್ ಮುಖ್ಯವಾಗಲಿದೆ, ಏಕೆಂದರೆ ಈ ಮೂಲಕ ಅವರು ಮೊದಲ ಬಾರಿಗೆ ಕ್ರಿಕೆಟ್‌ನ ಸುದೀರ್ಘ ಸ್ವರೂಪದ ನಾಯಕತ್ವವನ್ನು ನಿರ್ವಹಿಸಲಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಾಗಿ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಶುಭಾ ಸತೀಶ್, ಹರ್ಲೀನ್ ಡಿಯೋಲ್, ಸೈಕಾ ಇಶಾಕ್, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್.