ಅದು ಯಾವುದೇ ಕ್ರೀಡೆ ಆಗಿರಲಿ, ಪಂದ್ಯವೊಂದರಲ್ಲಿ ಎರಡು ತಂಡಗಳು ಮುಖಾಮುಖಿಯಾಗಿ ಸೆಣೆಸಾಟ ನಡೆಸಿದಾಗ ಒಂದು ತಂಡ ಗೆಲುವು ಸಾಧಿಸುವುದು ಇನ್ನೊಂದು ತಂಡ ಸೋಲುವುದು ತೀರಾ ಸಹಜ. ಆದರೆ ಈ ಸೋಲು-ಗೆಲುವು ಎಂಬ ವಾಸ್ತವಿಕ ಸತ್ಯವನ್ನು ಆಯಾ ತಂಡಗಳ ಅಭಿಮಾನಿಗಳು ಸ್ವೀಕರಿಸುವ ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ಪರಿ ಮಾತ್ರ ತುಂಬಾ ವಿಭಿನ್ನ, ವಿಚಿತ್ರ ಹಾಗೂ ವೈವಿಧ್ಯಮಯ. ಗೆಲುವಿನಲ್ಲಿ ಎಲ್ಲಾ ಸರಿ ಎಂಬ ಉದಾತ್ತ ಮನೋಭಾವ, ಸೋಲಾದಾಗ ಮಾತ್ರ ಬೆಣ್ಣೆಯಲ್ಲೂ ಕಲ್ಲು ಹುಡುಕುವ ಕುಹಕ ಬುದ್ದಿ. ಇದನ್ನು ನಾವು ಅತಿರೇಕದ ಅಭಿಮಾನ ಎಂದು ಕರೆಯಬಹುದೇನೊ…
ಅಭಿಮಾನಿಗಳ ಮನದಾಳದಲ್ಲಿ ಸುಪ್ತವಾಗಿ ಮಲಗಿದ್ದು ಕಾಲ ಕಾಲಕ್ಕೆ ಅರಳುತ್ತಾ, ಕೆರಳುತ್ತಾ ಹೊರ ಹೊಮ್ಮುವ ಈ ಅತಿರೇಕದ ಅಭಿಮಾನ ಕೇವಲ ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸಿನೆಮಾ ರಂಗ ಹಾಗೂ ರಾಜಕೀಯ ಅಖಾಡ ಮುಂತಾದ ಹಲವಾರು ಸಾಮಾಜಿಕ ಕ್ಷೇತ್ರಗಳ ವಿದ್ಯಾಮಾನಗಳಿಗೂ ವಿಸ್ತರಿಸಿಕೊಂಡಿದೆ.
ತಮ್ಮ ತಂಡ ಗೆದ್ದಾಗ, ಮೆಚ್ಚಿನ ಆಟಗಾರ ಭರ್ಜರಿ ಪ್ರದರ್ಶನ ತೋರಿದಾಗ, ಇಷ್ಟಪಡುವ ನಾಯಕ ನಟನ ಸಿನಿಮಾ ಅದ್ಭುತ ಯಶಸ್ಸು ಕಂಡಾಗ, ಜನಪ್ರಿಯ ವ್ಯಕ್ತಿ ಚುನಾವಣೆಯಲ್ಲಿ ವಿಜಯ ಸಾಧಿಸಿದಾಗಲೆಲ್ಲ ಅವರೆಲ್ಲರ ಋಣಾತ್ಮಕ ಅಂಶಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಕೇವಲ ಅಂದಾಭಿಮಾನದಿಂದ ಹಾಡಿ ಹೊಗಳಿ ಕೊಂಡಾಡುವುದು, ಹಾಗೇ ಆ ಎಲ್ಲರೂ ವೈಫಲ್ಯತೆ ಅನುಭವಿಸಿದಾಗ ಅವರಲ್ಲಿರುವ ಧನಾತ್ಮಕ ಅಂಶಗಳನ್ನೂ ಪರಿಗಣಿಸದೇ ಕರುಣೆ ಇಲ್ಲದ ಕಟುಕರಂತೇ ನಿಂದಿಸುವುದು. ಒಂದರ್ಥದಲ್ಲಿ ಬಾವನೆಗಳ ಸಾಮ್ರಾಜ್ಯದ ನಿರಂಕುಶ ದೊರೆಗಳು ಎನ್ನಬಹುದು.
ನಾವು ಬಾವಜೀವಿಗಳು ಸರಿ. ಸಮಾಜದಲ್ಲಿ ಸಂಭವಿಸುವ ಘಟನಾವಳಿಗಳನ್ನು, ಆಗುಹೋಗುಗಳನ್ನು ಹತ್ತು ಹಲವು ವಿದ್ಯಾಮಾನಗಳನ್ನು ನಾವು ನಮ್ಮ ತೀರಾ ಖಾಸಗಿ ಬದುಕಿನ ಅಂತರಂಗದೊಳಗೇ ಬಿಟ್ಟುಕೊಂಡು ಸಂಭ್ರಮಿಸುವ ಅಥವಾ ಚಡಪಡಿಸುವ ಗುಣಧರ್ಮ ಉಳ್ಳವರು. ಆದರೆ ಇವೆಲ್ಲದರ ನಡುವೆ ಒಂದು ಸೂಕ್ಷ್ಮವಾದ ಸಂಗತಿಯನ್ನು ನಾವು ನಮ್ಮ ನಡೆ ನುಡಿಗಳಲ್ಲಿ, ಬರವಣಿಗೆಯಲ್ಲಿ ಅನುಸರಿಸಬೇಕಾದ ಅಗತ್ಯತೆ ಇದೆ.
ನಮ್ಮ ಹೇಳಿಕೆಗಳು, ಬರವಣಿಗೆಗಳು ಯಾವದೇ ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ಬಾರದ ರೀತಿಯಲ್ಲಿ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ರೀತಿಯಲ್ಲಿ ಇರದಂತೆ ನಮ್ಮ ಬಾವನೆಗಳನ್ನು ಸ್ಥೀಮಿತದಲ್ಲಿಟ್ಟುಕೊಂಡು ಪ್ರತಿಕ್ರಿಯಿಸುವುದನ್ನು ರೂಢಿಸಿಕೊಳ್ಳಬೇಕು. ಅಂದರೆ ಸಮಾಜದಲ್ಲಿ ಸಂಭವಿಸುವ ಘಟನಾವಳಿಗಳನ್ನು ವಿವೇಚನೆಯಿಂದ ಅರ್ಥೈಸಿಕೊಂಡು ಸ್ಥಿತಪ್ರಜ್ಞನಂತೆ ಇದ್ದು ಆರೋಗ್ಯಕರ ರೀತಿಯಲ್ಲಿ ಪ್ರತಿಕ್ರಿಯಿಸುವ ಮನೋಧರ್ಮವನ್ನು ಮೈಗೂಡಿಸಿಕೊಳ್ಳಬೇಕು.
ವಸ್ತುಸ್ಥಿತಿ ಭಾವನೆಗಳನ್ನು ಹುಟ್ಟುಹಾಕಬಲ್ಲುದು. ಆದರೆ ಭಾವನೆಗಳಿಂದ ವಾಸ್ತವಿಕತೆಯನ್ನು ಬದಲಾಯಿಸುವುದು ಅಸಾಧ್ಯ.
– ಟಿ.ಜಿ. ಹೆಗಡೆ, ಮಾಗೋಡು, ಮಾಜಿ ಕ್ರಿಕೆಟಿಗ